ಚಳ್ಳಕೆರೆ
ಶೈಕ್ಷಣಿಕ ಕಲಿಕೆಯಲ್ಲಿ ಹಲವಾರು ವಿಷಯಗಳು ಸಹ ಶಿಕ್ಷಣ ಪ್ರಗತಿಗೆ ಪೂರಕವಾಗಿರುತ್ತವೆ. ಆದರೆ, ಕೆಲವೊಂದು ವಿಷಯಗಳನ್ನು ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗದೇ ಇದ್ದಾಗ ಮಾತ್ರ ಆ ವಿಷಯದ ಬಗ್ಗೆ ಆತಂಕ ಮೂಡುವುದು ಸಹಜ, ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ವಿಷಯದ ಶಿಕ್ಷಕರು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳುವಂತಹ ರೀತಿಯಲ್ಲಿ ಶಿಕ್ಷಣ ನೀಡಬೇಕೆಂದು ಜಿಲ್ಲಾ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಂಶುಪಾಲ ಎಂ.ರೇವಣಸಿದ್ದಪ್ಪ ತಿಳಿಸಿದರು.
ಅವರು, ಶನಿವಾರ ಇಲ್ಲಿನ ರೋಟರಿ ಬಾಲಭವನದಲ್ಲಿ ತಾಲ್ಲೂಕು ಗಣಿತ ಶಿಕ್ಷಕರು ಹಮ್ಮಿಕೊಂಡಿದ್ದ ಗಣಿತ ಜನಕ ಶ್ರೀನಿವಾಸ ರಾಮಾನುಜನ್‍ರವರ 131ನೇ ಜನ್ಮ ದಿನದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಫಲಿತಾಂಶವನ್ನು ಅವಲೋಕಿಸಿದಾಗ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಣಿತ ವಿಷಯದಲ್ಲಿ ಮಾತ್ರ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಾಹಸ ಪಡುತ್ತಿರುವ ಬೆಳಕಿಗೆ ಬಂದಿದೆ. ಇದರಲ್ಲಿ ಗಣಿತ ಶಿಕ್ಷಕರ ಲೋಪವಿದೆ ಎಂದು ನಾನು ಭವಿಸುವುದಿಲ್ಲ, ಕಾರಣ ಶಿಕ್ಷಕ ನೀಡಿದ ಬೋಧನೆಯನ್ನು ಅವಲಂಭಿಸಿ ಅದೇ ಶಾಲೆಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿದ್ಧಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆ ಆಸಕ್ತಿಯ ಬಗ್ಗೆ ಗಣಿತ ಶಿಕ್ಷಕರು ಜಾಗೃತೆ ವಹಿಸಬೇಕು. ಮುಂಬರುವ ದಿನಗಳಲ್ಲಾದರೂ ಗಣಿತ ವಿಷಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ದಾಖಲೆಯ ಪ್ರಮಾಣದಲ್ಲಿ ಉತ್ತೀರ್ಣರಾಗಿ ಗಣಿತ ವಿಷಯದ ಮೌಲ್ಯವನ್ನು ಸಂರಕ್ಷಿಸಲಿ ಎಂದರು.
ಜಿಲ್ಲಾ ಗಣಿತ ವಿಷಯ ಪರಿವೀಕ್ಷಕಿ ಸವಿತಾರವರನ್ನು ಗಣಿತ ಶಿಕ್ಷಕರ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಗಣಿತ ವಿಷಯದ ಬಗ್ಗೆ ಚರ್ಚೆ ಮಾಡುವಂತಹ ವಾತಾವರಣ ಉಂಟಾಗಿರುವುದು ಸಂತಸ ಸಂಗತಿಯಾಗಿದೆ. ಈ ಹಿಂದೆ ಯಾವುದೇ ವಿಷಯದ ಬಗ್ಗೆಯೂ ಸಹ ಹೆಚ್ಚು ಚರ್ಚೆಗಳು ನಡೆಯುತ್ತಿರಲಿಲ್ಲ. ಆದರೆ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಗಣಿತ ವಿಷಯವೇ ಪ್ರಧಾನವಾಗಿ ಕಾಣುವ ಸ್ಥಿತಿ ಉಂಟಾಗಿದೆ. ಗಣಿತ ಕಲಿಕೆಯಲ್ಲಿ ಆಗುವ ಲೋಪಗಳ ಬಗ್ಗೆ ಸಂಬಂಧಪಟ್ಟ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಗುವುದು. ಗಣಿತ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಗಣಿತ ವಿಷಯ ಸರಳವೆಂದು ಬೋಧಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿ ಕಾರ್ಯನಿರ್ವಹಿಸಬೇಕು ಎಂದರು.
ಡಯಟ್ ಹಿರಿಯ ಉಪನ್ಯಾಸಕ ರಾಜಣ್ಣ ಮಾತನಾಡಿ, ಕಳೆದ ನೂರಾರು ವರ್ಷಗಳಿಂದ ಗಣಿತ ವಿಷಯವನ್ನು ಮಕ್ಕಳಿಗೆ ಉತ್ತಮವಾಗಿ ಅರ್ಥೈಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪ್ರತಿಯೊಂದು ಹಂತದಲ್ಲೂ ಶಿಕ್ಷಕರು ವಿದ್ಯಾರ್ಥಿಗಳ ಮನೋಸ್ಥಿತಿಯನ್ನು ಅರಿತು ಶಿಕ್ಷಣ ನೀಡಬೇಕಿದೆ. ಯಾವುದೇ ಹಂತದಲ್ಲೂ ಶಿಕ್ಷಕರು ಬೇಸರಗೊಂಡಲ್ಲಿ ಶಿಕ್ಷಣ ಇಲಾಖೆಯ ಗೌರವಕ್ಕೆ ದಕ್ಕೆ ಉಂಟಾಗುತ್ತದೆ. ಶಿಕ್ಷಣ ನೀಡುವುದು ಪುಣ್ಯ ಕಾರ್ಯವೆಂಬ ಭಾವನೆ ಎಲ್ಲರಲ್ಲೂ ಇದೆ. ಸಾರ್ವಜನಿಕರು ಸಹ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಯಾವುದೇ ಹಂತದಲ್ಲೂ ಗಣಿತ ವಿಷಯವನ್ನು ಕಡೆಗಣಿಸಬಾರದು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರೆಡ್ಡಿ, ರೋಟರಿ ಅಧ್ಯಕ್ಷ ಸಂಜಯ್‍ಬಾಲಾಜಿ, ಹಿರಿಯ ರೋಟೇರಿಯನ್ ಡಾ.ಕೆ.ಎಂ.ಜಯಕುಮಾರ್, ನಾಗೇಶ್, ಎಚ್.ಮಂಜುನಾಥ, ಮೂರ್ತಪ್ಪ, ರುದ್ರಮುನಿ, ಶ್ರೀನಿವಾಸ್, ರಂಗನಾಥ, ಪಣಿನಂದಕುಮಾರ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








