ಮೇ ಅಂತ್ಯದ ವರೆಗೂ ನೀರು ಹರಿಸಲು ಆಗ್ರಹ

ದಾವಣಗೆರೆ

      ಭದ್ರಾ ಜಲಾಶಯದಿಂದ ನಾಲೆಯಲ್ಲಿ ಮೇ ತಿಂಗಳ ಅಂತ್ಯದ ವರೆಗೂ ನಿರಂತರವಾಗಿ ನೀರು ಹರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯ ನೇತೃತ್ವದಲ್ಲಿ ರೈತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆ ಇಲ್ಲಿನ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

       ನಗರದ ಜಯದೇವ ವೃತ್ತದಿಂದ ಹದಡಿ ರಸ್ತೆ ಮಾರ್ಗವಾಗಿ ನೀರಾವರಿ ಇಲಾಖೆ ಕಚೇರಿವರೆಗೂ ಬೈಕ್ ರ್ಯಾಲಿ ನಡೆಸಿದ ಪ್ರತಿಭಟನಾನಿರತ ರೈತರು, ಕಚೇರಿಗೆ ಮುತ್ತಿಗೆ ಹಾಕಿ ಕಾಡಾ ಕ್ರಮ ಖಂಡಿಸಿ ಘೋಷಣೆ ಕೂಗಿ ಕಿಡಿಕಾರಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಈಗಾಗಲೇ ಕಳೆದ ಮೂರ್ನಾಲ್ಕು ಬೆಳೆಗೆ ಕಾಡಾ ನೀರು ಕೊಟ್ಟಿಲ್ಲ. ಅಲ್ಲದೇ, ಮಳೆ ಸಹ ಸತತವಾಗಿ ಕೈಕೊಟ್ಟಿದೆ. ಆದ್ದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ನೀರಾವರಿ ಇಲಾಖೆ ಹಾಗೂ ಭದ್ರಾ ಕಾಡಾ ಸಮಿತಿಯು ಮೇ.15ರಂದೇ ನಾಲೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂಬುದಾಗಿ ಹೇಳುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಸತತವಾಗಿ ಮಳೆ ಕೈಕೊಟ್ಟಿರುವ ಪರಿಣಾಮ ಹಾಗೂ ಕಳೆದ ಮೂರ್ನಾಲ್ಕು ಬೆಳೆಗೆ ಕಾಡಾ ನೀರು ಕೊಡದಿರುವ ಕಾರಣದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ, ಈ ಬಾರಿಯೂ ನೀರು ಬಿಟ್ಟು ಎಷ್ಟೋ ದಿನಗಳ ನಂತರ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ತಲುಪಿದೆ. ಹೀಗಾಗಿ ಕೊನೆ ಭಾಗದ ರೈತರು ಭತ್ತ ನಾಟಿ ಮಾಡುವುದು ಸಹ ವಿಳಂಬವಾಗಿದೆ.

       ಬಹುತೇಕ ಕಡೆಗಳಲ್ಲಿ ಭತ್ತ ಕಟಾವಿಗೆ ಬರಲು ಇನ್ನೂ 15ರಿಂದ 20 ದಿನಬೇಕಾಗಿವೆ. ಆದರೆ, ಮೇ 15ರಿಂದಲೇ ನಾಲೆಯಲ್ಲಿ ನೀರು ಹರಿಸುವುದನ್ನು ಬಂದ್ ಮಾಡುವುದಾಗಿ ಕಾಡಾ ಅಧಿಕಾರಿಗಳು ಹೇಳಿರುವ ಕಾರಣ ರೈತರಿಗೆ ದಿಕ್ಕು ತೋಚದಂತಾಗಿದ್ದು, ಕಾಡಾದ ಈ ನಡೆಯಿಂದಾಗಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಮಳೆಯ ಕೊರತೆಯಿಂದ ಹಾಗೂ ಅಂತರ್ಜ ಕುಸಿತದಿಂದಾಗಿ ಕೊಳವೆಬಾವಿಗಳು ನೀರು ಬಾರದ ಕಾರಣ ತೋಟದ ಬೆಳೆಗಳು ಸಹ ಸಂಪೂರ್ಣ ಒಣಗುತ್ತಿವೆ. ಹೀಗಾಗಿ ಭತ್ತ ಹಾಗೂ ತೋಟಗಾರಿಕೆ ಬೆಳೆಗಳಿಗೂ ನೀರಿನ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ. ಆದ್ದರಿಂದ ನೀರಾವರಿ ಇಲಾಖೆ ಮುಖ್ಯ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರು ಈ ವಿಚಾರದಲ್ಲಿ ಕಾಡಾ ಸಮಿತಿಗೆ, ರಾಜ್ಯ ಸರ್ಕಾರಕ್ಕೆ ದಾವಣಗೆರೆ ಜಿಲ್ಲೆಯ ಅಚ್ಚು ಕಟ್ಟು ಪ್ರದೇಶದ ಕಡೇ ಭಾಗದ ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡುವ ಮೂಲಕ ಮೇ ತಿಂಗಳ ಅಂತ್ಯದ ವರೆಗೂ ಭದ್ರಾ ನಾಲೆಯಲ್ಲಿ ಭದ್ರಾ ಜಲಾಶಯದಿಂದ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

        ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಅರಸನಾಳು ಸಿದ್ದಪ್ಪ, ಉಪಾಧ್ಯಕ್ಷ ಹೊನ್ನೂರು ಸಿದ್ದಪ್ಪ, ಮುಖಂಡರಾದ ಕೋಲ್ಕುಂಟೆ ಬಸಣ್ಣ, ಹುಚ್ಚವ್ವನಹಲ್ಳಿ ವಿ.ಎನ್.ಪ್ರಕಾಶ, ಪೂಜಾರ ಅಂಜಿನಪ್ಪ, ಎಚ್.ಪ್ರಕಾಶ, ಕುಕ್ಕವಾಡ ಜಿ.ಬಿ.ಪರಮೇಶ, ಆಲೂರು ಪರಶುರಾಮ, ಗುಮ್ಮನೂರು ಎಂ.ಎಲ್.ಕೃಷ್ಣಮೂರ್ತಿ, ಚಿಕ್ಕಬೂದಿಹಾಳ್ ಭಗತ್‍ಸಿಂಹ, ಗೌಡರ ಶೇಖರಪ್ಪ, ಉಚ್ಚೆಂಗೆಪ್ಪ, ಕೋಲ್ಕುಂಟೆ ಪುಟ್ಟಪ್ಪ, ಹೂವಿನಮಡು ಸಿ.ನಾಗರಾಜ, ಯರವನಾಗತಿಹಳ್ಳಿ ರುದ್ರಣ್ಣ, ಕುರ್ಕಿ ಹನುಮಂತಪ್ಪ, ಕೆಂಚಮ್ಮನಹಳ್ಳಿ ಹನುಮಂತ, ಕರಿಲಕ್ಕೇನಹಳ್ಳಿ ನಾಗಪ್ಪ, ವೈ.ಶ್ರೀನಿವಾಸ, ಮಂಜಪ್ಪ, ಚಂದ್ರಪ್ಪ, ವೆಂಕಟರಮಣ, ಕೆ.ಲಕ್ಷ್ಮೀನಾರಾಯಣ, ಜಿ.ಬ್ರಹ್ಮಾಂಬರಿ, ಜಿ.ಕೃಷ್ಣಮೂರ್ತಿ, ಭೀಮಪ್ಪ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap