ಖಾಸಗಿ ಬಸ್‍ನಿಲ್ದಾಣಕ್ಕೆ ಮೇಯರ್ ಭೇಟಿ.!

ತುಮಕೂರು
    ತುಮಕೂರು ನಗರದ ಅಶೋಕ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಗೆ ಸೇರಿದ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳ ಬಾಡಿಗೆಯನ್ನು ಏಕಾಏಕಿ ಶೇ.20 ರಷ್ಟು ಏರಿಸಲಾಗಿದೆ ಎಂದು ಅಲ್ಲಿನ ಅಂಗಡಿ ಮಾಲೀಕರು ದೂರಿದ ಹಿನ್ನೆಲೆಯಲ್ಲಿ ಪಾಲಿಕೆಯ ಮೇಯರ್ ಲಲಿತಾ ರವೀಶ್   ಗುರುವಾರ ಮಧ್ಯಾಹ್ನ ಖಾಸಗಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಸಂಗ ನಡೆಯಿತು.
     ಮೇಯರ್ ಜೊತೆಗೆ ಉಪಮೇಯರ್ ರೂಪಶ್ರೀ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್  ಮತ್ತು ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಎಸ್.ಗಿರಿಜಾ , ಕಾರ್ಪೋಟರ್‍ಗಳಾದ ಜೆ.ಕುಮಾರ್ , ಹೆಚ್.ಮಲ್ಲಿಕಾರ್ಜುನಯ್ಯ , ಬಿ.ಎಸ್.ಮಂಜುನಾಥ್ , ಶಿವರಾಂ ಮೊದಲಾದವರು ಇದ್ದರು.
     ಖಾಸಗಿ ಬಸ್ ನಿಲ್ದಾಣವು 14 ನೇ ವಾರ್ಡ್ ವ್ಯಾಪ್ತಿಯಲ್ಲಿದೆ. ಇಲ್ಲಿ ವಾಣಿಜ್ಯ ಮಳಿಗೆಗಳಿವೆ. ಇವುಗಳ ಬಾಡಿಗೆ ವಿಷಯ ಈಗ ವಿವಾದ ಉಂಟುಮಾಡಿದೆ. ಬಾಡಿಗೆ ಹೆಚ್ಚಳದಿಂದ ಪ್ರಸ್ತುತ ಅಂಗಡಿ ಮಾಲೀಕರು ಬೀದಿಪಾಲಾಗುವಂತಾಗಿದೆ ಎಂದು ಅಂಗಡಿ ಮಾಲೀಕರು ದೂರಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆಯ ಜನಪ್ರತಿನಿಧಿಗಳು ಸ್ಥಳಪರಿಶೀಲನೆ ಮಾಡಿದರು.
      ಜನಪ್ರತಿನಿಧಿಗಳು ಇಲ್ಲಿಗೆ ಆಗಮಿಸಿದಾಗ ಅವರಿಗೆ `ಶಾಕ್’ ನೀಡಿದ್ದು ಇಲ್ಲಿನ ಕೊಳಕು ಮತ್ತು ಅನೈರ್ಮಲ್ಯ. ಅಂಗಡಿಗಳ ಮುಂದಿನ ಸಾಲುಗಳಲ್ಲಿ ಜನರು ನಿಲ್ಲುವ ಜಾಗ ಕುಸಿದು ಸಣ್ಣಸಣ್ಣ ಕೊರಕಲುಗಳಾಗಿದ್ದು ಅವುಗಳಿಂದ ಇಲಿಗಳು ಹೊರಕ್ಕೆ ಬರುವುದನ್ನು ಕಂಡು ಕಾರ್ಪೋರೇಟರ್ ಜೆ.ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. “ಇದು ನೀವು ವ್ಯಾಪಾರ ಮಾಡುವ ಸ್ಥಳ. ನೀವು ಸಹ ಗಮನ ಹರಿಸಿ ನಿಮ್ಮ ಅಂಗಡಿ ಮುಂದಿನ ಸ್ಥಳವನ್ನು ಚೊಕ್ಕಟವಾಗಿಟ್ಟುಕೊಳ್ಳಬೇಕಲ್ಲವೇ? ಎಲ್ಲದಕ್ಕೂ ಸರ್ಕಾರವನ್ನೇ ಕೇಳಬೇಕೇ?” ಎಂದು ಓರ್ವ ವ್ಯಾಪಾರಿಯನ್ನು ಪ್ರಶ್ನಿಸಿದರು. ಅದಕ್ಕೆ ಆ ವ್ಯಾಪಾರಿ “ಅಣ್ಣ, ನಾನು ಈ ಬಗ್ಗೆ ಹಿಂದೇಯೇ ಪ್ರಯತ್ನಿಸಿದೆ. ಆದರೆ ನಿನಗೇಕಯ್ಯ ಈ ಬಗ್ಗೆ ಉಸಾಬರಿ? ಎಂದು ಇತರರು ನನ್ನ ಬಾಯಿ ಮುಚ್ಚಿಸಿದರು. ನಾನು ಸುಮ್ಮನಾದೆ” ಎಂದು ಪ್ರತಿಕ್ರಿಯಿಸಿದರು.
ವಿವಾದಕ್ಕೀಡಾದ ರಸೀತಿ
      ಅಷ್ಟರಲ್ಲಿ ಅಂಗಡಿ ಮಳಿಗೆಯವರೊಬ್ಬರಿಗೆ ಪಾಲಿಕೆಯ ಬಿಲ್ ಕಲೆಕ್ಟರ್ ಒಬ್ಬರು ಹಣ ಪಾವತಿಯ ರಸೀತಿ ನೀಡಿದ್ದುದು ದೊಡ್ಡ ವಿವಾದವನ್ನೇ ಸೃಷ್ಟಿಸಿತು. ಆ ಅಂಗಡಿಯವರು ಎರಡು ವರ್ಷಗಳ ಹಿಂದೆ ಪಾಲಿಕೆಗೆ ಪಾವತಿಸಿದ್ದ 70 ಸಾವಿರ ರೂ. ಮೊತ್ತಕ್ಕೆ ಈಗ ಇದ್ದಕ್ಕಿದ್ದಂತೆ ಹಣ ಪಾವತಿಯ ರಸೀತಿ ನೀಡಲಾಗಿದೆಯೆಂಬುದು ಅಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ಬಂತು. ಇದರಿಂದ ಮೇಯರ್ ಹಾಗೂ ಇತರರು ಗರಂ ಆದರು. ಸ್ಥಳಕ್ಕೆ ಬಂದಿದ್ದ ಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿ ಜಗದೀಶ್ ಮತ್ತು ಇತರೆ ನೌಕರರನ್ನು ಮೇಯರ್ ಮತ್ತು ಕಾರ್ಪೋರೇಟರ್‍ಗಳು ತೀಕ್ಷ್ಣವಾಗಿ ಪ್ರಶ್ನಿಸಿದರು. ಕೆಲ ಹೊತ್ತು ವಾದ-ವಿವಾದ ಉಂಟಾಯಿತು. 
      ಇದೇ ರೀತಿ ಮೇಯರ್ ಮತ್ತು ತಂಡ ಬಸ್ ನಿಲ್ದಾಣದ ಕೆಲ ಪ್ರದೇಶಗಳಿಗೆ ತೆರಳಿದಾಗ ಕಾಣಿಸಿದ್ದು ಗಲೀಜು ಮಾತ್ರ. ನಿರ್ಗಮನ ದ್ವಾರದ ಬಳಿ ಇರುವ ಚರಂಡಿಯ ತುಂಬ ಕಸದ ರಾಶಿ ತುಂಬಿಕೊಂಡಿದ್ದನ್ನು ನೋಡಿ ಮೇಯರ್ ಲಲಿತಾ ರವೀಶ್ ಅಸಂತೋಷ ವ್ಯಕ್ತಪಡಿಸುತ್ತ, ಸ್ಥಳದಲ್ಲಿದ್ದ ಸೀನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಚಿಕ್ಕಸ್ವಾಮಿ ಅವರನ್ನು ಪ್ರಶ್ನಿಸಿದರು.
ಇದು ಮೊದಲನೇ ಭೇಟಿ
      ಈ ಸಂದರ್ಭದಲ್ಲಿ “ಪ್ರಜಾಪ್ರಗತಿ”ಯೊಡನೆ ಮಾತನಾಡಿದ ಮೇಯರ್ ಲಲಿತಾ ರವೀಶ್ “ಮೇಯರ್ ಆಗಿ ಖಾಸಗಿ ಬಸ್  ನಿಲ್ದಾಣಕ್ಕೆ ಇದು ನನ್ನ ಮೊದಲನೇ ಭೇಟಿ ಆಗಿದೆ” ಎಂದರು. “ಇಲ್ಲಿ ತುಂಬ ಅವ್ಯವಸ್ಥೆ ಇದೆ. ಅನೈರ್ಮಲ್ಯ ಹೆಚ್ಚಾಗಿದೆ. ರಾತ್ರಿ ವೇಳೆ ಬೀದಿದೀಪಗಳ ವ್ಯವಸ್ಥೆ ಸರಿಯಿಲ್ಲ. ಶೌಚಾಲಯ ಹದಗೆಟ್ಟಿದೆ. ಕುಡಿಯುವ ನೀರಿನ ಸೌಲಭ್ಯ ಸರಿಯಾಗಿಲ್ಲ. ಈ ಬಗ್ಗೆ ದೂರುಗಳು ಬಂದಿವೆ. ಇನ್ನು ಅಂಗಡಿ ಮಳಿಗೆಗಳ ಬಾಡಿಗೆ ಹೆಚ್ಚಳವೆಂದು ಇಲ್ಲಿನವರು ಹೇಳುತ್ತಿದ್ದಾರೆ. ಇದಲ್ಲದೆ ಇಲ್ಲಿನ ಮಾಲೀಕರು ನನ್ನ ಕಚೇರಿಗೆ ಬಂದು ಮಾಹಿತಿ ನೀಡಿ, ನಾವು ಅಲ್ಲಿಂದ ಇಲ್ಲಿಗೆ ಬರುವಷ್ಟರಲ್ಲಿ ಪಾಲಿಕೆಯ ಸಿಬ್ಬಂದಿ ಇಲ್ಲಿನ ಅಂಗಡಿಯೊಂದಕ್ಕೆ ದಿಢೀರನೆ ಬಾಡಿಗೆ ಸ್ವೀಕೃತಿ ರಸೀತಿ ನೀಡಿದ್ದಾರೆ. ಇವೆಲ್ಲದರ ಬಗ್ಗೆ ಆಯುಕ್ತರ ಸಮ್ಮುಖದಲ್ಲಿ ಚರ್ಚೆ ಮಾಡುತ್ತೇನೆ. ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸಬೇಕಾಗಿದೆ” ಎಂದು ಪ್ರತಿಕ್ರಿಯಿಸಿದರು.
ಅನೈತಿಕತೆಯ ತಾಣ
     ಸ್ಥಳದಲ್ಲಿದ್ದ ಕೆಲವು ಸಾರ್ವಜನಿಕರು ಸಹ “ಪ್ರಜಾಪ್ರಗತಿ”ಯೊಡನೆ ಮಾತನಾಡುತ್ತ, ಖಾಸಗಿ ಬಸ್ ನಿಲ್ದಾಣವು ಅನೈತಿಕತೆಯ ತಾಣವಾಗಿದೆ ಎಂದು ಆತಂಕದಿಂದ ನುಡಿದರು. “ಸಂಜೆ ನಂತರ ಖಾಸಗಿ ಬಸ್ ನಿಲ್ದಾಣದಲ್ಲಿ ಅನೈತಿಕ ಚಟುವಟಿಕೆಗಳು ಆರಂಭವಾಗುತ್ತವೆ. ಈ ಬಗ್ಗೆ ಪೊಲೀಸ್ ಇಲಾಖೆ ನಿಗಾ ವಹಿಸಿ ಕ್ರಮ ಜರುಗಿಸಬೇಕು. ಜೊತೆಗೆ ಇಲ್ಲಿ ಜೇಬುಗಳ್ಳರ ಹಾವಳಿಯೂ ಅಧಿಕವಾಗಿದೆ. ಅದನ್ನೂ ತಡೆಗಟ್ಟಬೇಕು” ಎಂದು ಅಲವತ್ತುಕೊಂಡರು.
ಅಂಗಡಿ ಮಾಲೀಕರ ಮನವಿ
    ಇಲ್ಲಿನ ವ್ಯಾಪಾರಕ್ಕೂ, ಪಾಲಿಕೆಯು ಶೇ.20 ರಷ್ಟು ಹೆಚ್ಚಿಸಿರುವ ಬಾಡಿಗೆಗೂ ಅಜಗಜಾಂತರ ವ್ಯತ್ಯಾಸ ಇದೆ. ಇದರಿಂದ ವ್ಯಾಪಾರಕ್ಕೆ ತೊಂದರೆ ಆಗಿದೆ. ಬಸ್ ನಿಲ್ದಾಣದೊಳಕ್ಕೆ ಜನರು ಬರಲು ಹಿಂಜರಿಯುವಂತಾಗಿದೆ. ಕಾರಣ ಕಳ್ಳರ ಹಾವಳಿ, ವೇಶ್ಯಾವಾಟಿಕೆ, ಕುಡುಕರ ಹಾವಳಿ ಇತ್ಯಾದಿ ಸಮಸ್ಯೆಗಳಿವೆ. ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ಕುಡಿಯಲು ನೀರಿಲ್ಲ. ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶವಿಲ್ಲ.  

Recent Articles

spot_img

Related Stories

Share via
Copy link
Powered by Social Snap