ಗ್ರಂಥಾಲಯ ಸಮಸ್ಯೆ: ಮೇಯರ್ ಭೇಟಿ, ಪರಿಶೀಲನೆ

ತುಮಕೂರು
     ತುಮಕೂರು ನಗರದ ಟೌನ್‍ಹಾಲ್ ವೃತ್ತದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಓದಲು ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯಗಳಿಲ್ಲದೆ ಬಹುಮುಖ ಸಮಸ್ಯೆಗಳು ತಲೆದೋರುತ್ತಿವೆ ಎಂದು ವಿದ್ಯಾರ್ಥಿಗಳ ತಂಡವೊಂದು ಗಮನ ಸೆಳೆದ ಹಿನ್ನೆಲೆಯಲ್ಲಿ, ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಫರೀದಾಬೇಗಂ ಅವರು ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಸಂಗ ಮಂಗಳವಾರ ಬೆಳಗ್ಗೆ ನಡೆಯಿತು. 
    ಗ್ರಂಥಾಲಯದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ವಿದ್ಯಾರ್ಥಿಗಳ ತಂಡವೊಂದು ಮಂಗಳವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿತು. ಮೇಯರ್ ಫರೀದಾಬೇಗಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ದಿನವೂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿತು. 2019-20 ನೇ ಸಾಲಿನ ಹೊಸ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಇಲ್ಲಿ ಒದಗಿಸಬೇಕು; ಪುಸ್ತಕದ ರ್ಯಾಕ್ ತೆರವುಗೊಳಿಸಿ, ಆಸನದ ವ್ಯವಸ್ಥೆ ಮಾಡಿಕೊಡಬೇಕು; ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಗ್ರಂಥಾಲಯ ತೆರೆದಿರುವಂತೆ ಮಾಡಬೇಕು; ಸರ್ಕಾರಿ ರಜಾದಿನಗಳಂದೂ ಗ್ರಂಥಾಲಯ ತೆರೆದಿರಬೇಕು; ವ್ಯಾಸಂಗಕ್ಕೆ ಅನುಕೂಲವಾಗುವಂತೆ ಹೆಚ್ಚುವರಿ ಕೊಠಡಿ ಒದಗಿಸಬೇಕು; ಇಲ್ಲಿರುವ ಸಿಬ್ಬಂದಿಯನ್ನು ಬದಲಿಸಬೇಕು; ಶೌಚಾಲಯ ಸಮಸ್ಯೆ ನಿವಾರಿಸಬೇಕು; ನೀರಿನ ವ್ಯವಸ್ಥೆ ಮಾಡಬೇಕು ಎಂಬಿತ್ಯಾದಿ ಪ್ರಮುಖ ಬೇಡಿಕೆಗಳ ಬಗ್ಗೆ ವಿದ್ಯಾರ್ಥಿಗಳು ಗಮನ ಸೆಳೆದರು. 
   ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ವ್ಯಾಸಂಗಾರ್ಥವಾಗಿ ಬರುತ್ತಿದ್ದಾರೆ. ವಿವಿಧ ಕಾಲೇಜುಗಳ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಓದಲು ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಆದರೆ ಇಲ್ಲಿ ವ್ಯಾಸಂಗ ಮಾಡಲು ಸೂಕ್ತ ವಾತಾವರಣವೇ ಇಲ್ಲ. ವಿದ್ಯಾರ್ಥಿಗಳು ರಾಕ್‍ಗಳ ಮಧ್ಯೆ ನೆಲದಲ್ಲೇ ಕುಳಿತು ಓದುತ್ತಿದ್ದಾರೆ. ಓದುವಾಗ ತುಂಬ ಅಡೆತಡೆಗಳುಂಟಾಗುತ್ತಿವೆ. ಬೇಕಾದ ಪುಸ್ತಕಗಳಿಗಿಂತ, ಬೇಡವಾದ ಪುಸ್ತಕಗಳೇ ಹೆಚ್ಚಾಗುತ್ತಿವೆ ಎಂಬಿತ್ಯಾದಿಗಳ ಬಗ್ಗೆಯೂ ವಿದ್ಯಾರ್ಥಿಗಳು ವಿವರಿಸಿದರು.
ಮೇಯರ್ ಭೇಟಿ, ಚರ್ಚೆ
    ಇದಕ್ಕೆ ಸ್ಪಂದಿಸಿದ ಮೇಯರ್ ಫರೀದಾಬೇಗಂ ಅವರು ಪಾಲಿಕೆಯ ಸದಸ್ಯರುಗಳಾದ ಸೈಯದ್ ನಯಾಜ್ (8ನೇ ವಾರ್ಡ್), ವಿಷ್ಣುವರ್ಧನ್ (30 ನೇ ವಾರ್ಡ್), ಶಿವರಾಮ್ (24 ನೇ ವಾರ್ಡ್) ಅವರೊಡನೆ ಸದರಿ ವಿದ್ಯಾರ್ಥಿಗಳ ಜೊತೆಯಲ್ಲಿ ತಕ್ಷಣವೇ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಗ್ರಂಥಪಾಲಕ ಬಸವರಾಜ್ ಅಲ್ಲಿನ ಮಾಹಿತಿ ನೀಡಿದರು. ಗ್ರಂಥಾಲಯದ ಸಿಬ್ಬಂದಿ ಜೊತೆ ಚರ್ಚಿಸಿದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪ್ರತಿನಿತ್ಯ ಪಾಲಿಕೆಯಿಂದ ಒಂದು ಟ್ಯಾಂಕ್ ನೀರನ್ನು ಪೂರೈಸುವ ಭರವಸೆ ನೀಡಿದರು. ಹಾಗೂ ಇಲ್ಲಿನ ಶೌಚಾಲಯವನ್ನು ದಿನವೂ ಶುಚಿಗೊಳಿಸಿ ಬಳಕೆಗೆ ಯೋಗ್ಯವನ್ನಾಗಿ ಮಾಡುವಂತೆ ಸೂಚಿಸಿದರಲ್ಲದೆ, ಅಗತ್ಯವಿದ್ದರೆ ಪಾಲಿಕೆಯಲ್ಲಿರುವ ಸಂಚಾರಿ ಶೌಚಾಲಯ ವಾಹನವನ್ನೂ ಬಳಸಿಕೊಳ್ಳುವಂತೆ ಗ್ರಂಥಾಲಯ ಸಿಬ್ಬಂದಿಗೆ ಸೂಚಿಸಿದರು. 
   ಒಟ್ಟಾರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಗ್ರಂಥಾಲಯದಲ್ಲೇ ಒಂದು ಸಭೆಯನ್ನು ಸದ್ಯದಲ್ಲೇ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ ಮೇಯರ್ ಫರೀದಾಬೇಗಂ, ಪಾಲಿಕೆಯ ಮುಂದಿನ ಬಜೆಟ್‍ನಲ್ಲಿ ಗ್ರಂಥಾಲಯದಲ್ಲಿ ಸೌಲಭ್ಯ ಒದಗಿಸುವ ಬಗ್ಗೆ ಕಾರ್ಯಕ್ರಮ ಹಾಕಿಕೊಳ್ಳುವ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap