ತುಮಕೂರು
ತುಮಕೂರು ನಗರದ ವಿವಿಧೆಡೆ ಎಲ್ಲೆಂದರಲ್ಲಿ ಭಿತ್ತಿಪತ್ರ ಅಂಟಿಸುತ್ತಿರುವ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚರ್ಚಿಸಲು ಮಾರ್ಚ್ 22 ರಂದು ಬೆಳಗ್ಗೆ 11 ಗಂಟೆಗೆ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ಆಯುಕ್ತ ಟಿ.ಭೂಪಾಲನ್ ಅವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಟ್ಟಿದೆ. ಈ ಸಭೆಗೆ ನಗರದ ಚಿತ್ರಮಂದಿರಗಳ ಹಾಗೂ ಮುದ್ರಣಾಲಯಗಳ ಮಾಲೀಕರು ಹಾಗೂ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ.
ನಗರದ ಬಸ್ ನಿಲ್ದಾಣ, ಮೇಲ್ಸೇತುವೆ- ಕೆಳಸೇತುವೆ ಗೋಡೆಗಳು, ವಿದ್ಯುತ್ ಕಂಬಗಳು ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಭಿತ್ತಿಪತ್ರ ಅಂಟಿಸುವುದು, ಜಾಹಿರಾತು ಫಲಕ ಅಂಟಿಸುವುದರಿಂದ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆಯಲ್ಲದೆ, ನಗರದ ಸೌಂದರ್ಯಕ್ಕೂ ಧಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳ ಬಗ್ಗೆ ಚರ್ಚಿಸಲು ಈ ಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಭಿತ್ತಿಪತ್ರ ಅಂಟಿಸಿದ್ದಕ್ಕೆ –10,000 ರೂ. ದಂಡ
ಈ ಮಧ್ಯೆ ತುಮಕೂರು ನಗರದ ವಿವಿಧೆಡೆ ಗೋಡೆಗಳಿಗೆ ಭಿತ್ತಿಪತ್ರ ಅಂಟಿಸಿದ್ದ ನಗರದ ಶಾಲೆಯೊಂದಕ್ಕೆ ಮಹಾನಗರ ಪಾಲಿಕೆಯು 10,000 ರೂ. ದಂಡ ವಿಧಿಸಿದೆ.
ಇದೇ ರೀತಿ ನಗರದ ವಿವಿಧ ಬಡಾವಣೆಗಳ ಪ್ರಮುಖ ಸ್ಥಳಗಳಲ್ಲಿ ಕಸ ತಂದು ಸುರಿಯುತ್ತಿದ್ದ ಖಾಸಗಿ ವ್ಯಕ್ತಿಗಳಿಗೆ ತಲಾ 200 ರೂ. ದಂಡ ಮತ್ತು ಅಂಗಡಿಗಳವರಿಗೆ 500 ರಿಂದ 2000 ರೂ. ವರೆಗೆ ದಂಡವನ್ನು ಪಾಲಿಕೆ ಅಧಿಕಾರಿಗಳು ವಿಧಿಸಿದ್ದಾರೆ. ನಗರದ ಎಸ್.ಐ.ಟಿ. ಬಡಾವಣೆಯ ದೋಬಿಘಾಟ್ ಬಳಿ ಹಾಗೂ ಎಂ.ಜಿ. ರಸ್ತೆ ಮೊದಲಾದ ಕಡೆಗಳಲ್ಲಿ ಇಂತಹ ದಂಡವನ್ನು ವಿಧಿಸಲಾಗಿದೆ.
ಮೂತ್ರವಿಸರ್ಜನೆಗೂ ದಂಡ
ಮತ್ತೊಂದು ವಿಶೇಷ ಬೆಳವಣಿಗೆಯಲ್ಲಿ ನಗರದ ವಿವಿಧೆಡೆ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವವರಿಗೂ ದಂಡ ವಿಧಿಸುವ ಕ್ರಮವನ್ನು ಮಹಾನಗರ ಪಾಲಿಕೆ ಜಾರಿಗೆ ತಂದಿದ್ದು, ಅಂತಹ ಪ್ರಕರಣಗಳು ಕಂಡುಬಂದಾಗ ಪಾಲಿಕೆಯ ಅಧಿಕಾರಿಗಳು 100 ರೂ. ದಂಡ ವಿಧಿಸತೊಡಗಿದ್ದಾರೆ. ಪಾಲಿಕೆಯ ಪರಿಸರ ಇಂಜಿನಿಯರ್‍ಗಳು ಮತ್ತು ಹೆಲ್ತ್ ಇನ್ಸ್‍ಪೆಕ್ಟರ್‍ಗಳು ಈ ರೀತಿಯ ದಂಡ ವಿಧಿಸತೊಡಗಿದ್ದು, ಕಳೆದ ಒಂದು ವಾರದಲ್ಲಿ ಸುಮಾರು 25,000 ರೂ.ಗಳವರೆಗೆ ದಂಡವನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
