ತುಮಕೂರು
ಸರ್ಕಾರಿ ಶಾಲೆಗಳಿಗೆ ಬರುವ ಶಿಕ್ಷಕರನ್ನು ಆ ಗ್ರಾಮದ ಎಲ್ಲರೂ ಗಮನಿಸಿರುತ್ತಾರೆ. ವೈಯಕ್ತಿಕವಾಗಿ ಪರಿಚಯವಿರುತ್ತದೆ. ಶಿಕ್ಷಕ ಸತತವಾಗಿ ಗೈರು ಹಾಜರಾದರೆ ಪೋಷಕರು ಪ್ರಶ್ನಿಸುತ್ತಾರೆ. ಕಳಪೆ ಫಲಿತಾಂಶ ಬಂದರೆ ಬೇರೆ ಕಡೆ ಮಕ್ಕಳನ್ನು ದಾಖಲಿಸುವ ಎಚ್ಚರಿಕೆ ನೀಡುತ್ತಾರೆ. ಇದಷ್ಟೇ ಅಲ್ಲ, ಆ ಊರಿನ ಜನತೆ ಮತ್ತು ಶಿಕ್ಷಕರೊಂದಿಗೆ ಅವಿನಾಭಾವ ಸಂಬಂಧ ಇರುತ್ತದೆ. ಪ್ರೀತಿ, ಎಚ್ಚರಿಕೆ, ಸಲಹೆ, ಆತಂಕ ಇವೆಲ್ಲವೂ ಶಿಕ್ಷಕ ವರ್ಗದಲ್ಲಿ ಸಮ್ಮಿಳಿತವಾಗಿರುತ್ತವೆ.
ಶಾಲೆಗಳಿಗೆ ನೇರವಾಗಿ ಹೋಗುವ, ಪ್ರಶ್ನಿಸುವ ಅಧಿಕಾರ ಅಲ್ಲಿನ ಜನತೆಗೆ ಇದ್ದೇ ಇರುತ್ತದೆ. ಖಾಸಗಿ ಶಾಲೆಗಳಿಗೆ ಹೋಗಬೇಕಾದರೆ ಗೇಟ್‍ನಲ್ಲಿಯೇ ನಿಲ್ಲಬೇಕು. ಅಲ್ಲಿನ ದ್ವಾರಪಾಲಕರ ಅನುಮತಿ ಪಡೆದು ಒಳಗೆ ಹೋಗಬೇಕು. ಪ್ರತಿಯೊಂದಕ್ಕೂ ನಿಬಂಧನೆಗಳಿರುತ್ತವೆ. ಅವೆಲ್ಲವನ್ನು ಒಪ್ಪಿಕೊಳ್ಳಬೇಕು. ಪೋಷಕರ ಸಭೆ ಕರೆದಾಗ ಹಾಜರಾಗಬೇಕು. ಸರ್ಕಾರಿ ಶಾಲೆಗಳಲ್ಲಾದರೆ ಈ ಯಾವ ನಿಬಂಧನೆಗಳು ಇಲ್ಲ. ನಿತ್ಯವೂ ಶಾಲೆಗೆ ಹೋಗಬಹುದು, ಮಕ್ಕಳ ಶೈಕ್ಷಣಿಕ ಚಟುವಟಿಕೆ ವಿಚಾರಿಸಬಹುದು.
ಶಿಕ್ಷಕರಲ್ಲಿ ಬದ್ಧತೆ:
ಸರ್ಕಾರದ ಮಾರ್ಗಸೂಚಿಗಳು, ಕಟ್ಟುನಿಟ್ಟಿನ ಆದೇಶಗಳು ಏನೆಲ್ಲಾ ಇರಬಹುದು. ಆದರೆ ಶಿಕ್ಷಕ ವರ್ಗದಲ್ಲಿ ಒಂದು ಬದ್ಧತೆಯಂತೂ ಇದ್ದೇ ಇದೆ. ನಾನು ಸರ್ಕಾರದ ಋಣದಲ್ಲಿದ್ದೇನೆ. ಸರ್ಕಾರದ ಅನ್ನ ತಿನ್ನುತ್ತಿದ್ದೇನೆ ಎನ್ನುವ ಅರಿವು ಆ ವರ್ಗಕ್ಕೆ ಇದೆ. ದಿನನಿತ್ಯ ರೈತಾಪಿ ವರ್ಗ ಪಡುತ್ತಿರುವ ಕಷ್ಟಗಳನ್ನು ಹತ್ತಿರದಿಂದ ನೋಡುತ್ತಾರೆ. ಅವರ ಮಕ್ಕಳ ಸ್ಥಿತಿಗತಿಗಳೇನು ಎಂಬುದು ಚೆನ್ನಾಗಿ ಗೊತ್ತು. ನಾವಿಂದು ಇದ್ದುದರಲ್ಲಿ ಇವರಿಗಿಂತ ಉತ್ತಮ ಸ್ಥಿತಿಯಲ್ಲಿದ್ದೇವೆ. ಇರುವಷ್ಟು ಅವಧಿಯಲ್ಲಿ ಪ್ರಾಮಾಣಿಕ ಕರ್ತವ್ಯ ನಿಭಾಯಿಸಬೇಕೆಂಬ ಎಚ್ಚರಿಕೆ ಮೂಡುವುದರಿಂದಲೇ ಶಿಕ್ಷಕರು ಹೆಚ್ಚು ಜಾಗೃತರಾಗುತ್ತಿದ್ದಾರೆ.
ಹೇಳಿಕೇಳಿ ಇದು ಸ್ಪರ್ಧಾ ಪ್ರಪಂಚ. ನನ್ನ ಶಾಲೆಯ ವಿದ್ಯಾರ್ಥಿಗಳು ಎಲ್ಲರಂತೆ ಸ್ಪರ್ಧೆಗೆ ಇಳಿಯಲಿ, ಇವರು ಎಲ್ಲರಂತಾಗಲಿ ಎಂಬ ಅಪೇಕ್ಷೆ ಮೂಡುವುದು ಸಹಜ. ನಾನು, ನನ್ನ ಶಾಲೆ, ನಮ್ಮ ಮಕ್ಕಳು ಎಂಬ ಪ್ರಜ್ಞೆ ಯಾವ ಶಾಲೆಗಳಲ್ಲಿ, ಯಾವ ಶಿಕ್ಷಕರಲ್ಲಿ ಇರುತ್ತದೆಯೋ ಅಲ್ಲೆಲ್ಲಾ ಉತ್ತಮ ವಾತಾವರಣ, ಶಿಸ್ತು, ಕಲಿಕಾ ಉತ್ತೇಜನ ಇರುವುದನ್ನು ಗಮನಿಸಲಿಕ್ಕೆ ಸಾಧ್ಯ. ದಿನೆ ದಿನೆ ಬದಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ವಾತಾವರಣವನ್ನು ಶಿಕ್ಷಕ ಸಮೂಹವು ಗುರುತಿಸುತ್ತಿದ್ದು, ಬದಲಾವಣೆಗೆ ಹೊಂದಿಕೊಳ್ಳಲೆಬೇಕಾದ ಅನಿವಾರ್ಯತೆ ಶಿಕ್ಷಕ ಸಮೂಹದಲ್ಲಿಯೂ ಇದೆ.
ಖಾಸಗಿ ಶಾಲೆಗಳತ್ತ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಪ್ರಮಾಣ ಕುಸಿತವಾಗುತ್ತಿದೆ. ಇದು ಶಿಕ್ಷಕ ವರ್ಗದಲ್ಲಿ ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಹೀಗೆಯೇ ಮುಂದುವರೆದರೆ ಖಾಸಗಿ ಶಾಲೆಗಳ ಪ್ರಭಾವದಿಂದಾಗಿ ಸರ್ಕಾರಿ ಶಾಲೆಗಳಿಗೆ ಧಕ್ಕೆಯಾಗಬಹುದು. ಆ ಮೂಲಕ ನಮ್ಮ ಭವಿಷ್ಯಕ್ಕೂ ಕುತ್ತು ಬೀಳಬಹುದು ಎಂಬ ಆತಂಕ ಸರ್ಕಾರಿ ವಲಯದ ಶಿಕ್ಷಕ ಸಮೂಹದಲ್ಲಿ ಮನೆಮಾಡಿದೆ. ಈ ಪ್ರಜ್ಞೆಯೂ ಶಿಕ್ಷಕರು ಹೆಚ್ಚು ಜಾಗೃತರಾಗಲು ಒಂದು ಕಾರಣ ಎನ್ನಬಹುದು.
ಪರೀಕ್ಷಾ ಕ್ರಮ
ಮಕ್ಕಳ ಓದಿಗೆ ಈಗ ಗ್ರಾಮೀಣ ಪ್ರದೇಶಗಳಲ್ಲಿಯೂ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಶಾಲೆಗಳು ಆರಂಭವಾದಾಗಿನಿಂದ ಹಿಡಿದು ಪರೀಕ್ಷೆಗಳು ಹತ್ತಿರ ಬರುವ ತನಕ ಎಲ್ಲರೂ ಮಕ್ಕಳ ಬಗ್ಗೆ ನಿಗಾ ವಹಿಸುತ್ತಾರೆ. ಶಿಕ್ಷಕರಂತೆಯೇ ಪೋಷಕರೂ ಈಗ ಹಿಂದೆ ಬೀಳುತ್ತಿಲ್ಲ.
ಅಂದಿನ ಆ ದಿನಗಳೇ ಬೇರೆ, ಇಂದಿನ ಸ್ಪರ್ಧಾತ್ಮಕ ಯುಗವೇ ಬೇರೆ. ಪೋಷಕರಿಗೂ ಇಂದಿನ ಜಗತ್ತು ಅರ್ಥವಾಗುತ್ತಿದೆ.
ಹಿಂದಿನ ದಿನಗಳಲ್ಲಿ ಪರೀಕ್ಷೆ ಬರೆಯುವ ಮಕ್ಕಳಿಗೆ ಹೀಗೆಯೇ ಪರೀಕ್ಷೆ ಬರೆಯಬೇಕೆಂಬ ವಿಧಾನಗಳನ್ನು ಕಲಿಸಿಕೊಡುತ್ತಿದ್ದುದು ಕಡಿಮೆಯೇ. ಶಾಲೆಗಳಲ್ಲಿ ಶಿಕ್ಷಕರು ಒಂದಿಷ್ಟು ಮಾಹಿತಿ ಕೊಡುತ್ತಿದ್ದುದನ್ನು ಹೊರತುಪಡಿಸಿದರೆ ಬೇರೆಲ್ಲೂ ಮಾಹಿತಿಗಳು ಸಿಗುತ್ತಿರಲಿಲ್ಲ. ಇತ್ತೀಚೆಗಂತೂ ಪರೀಕ್ಷೆ ಎದುರಿಸುವುದು ಹೇಗೆ? ಪರೀಕ್ಷಾ ಭಯ ನಿವಾರಣೆ ಹೇಗೆ ಎಂಬ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಗಳು ಲಭ್ಯವಾಗುತ್ತಿವೆ.
ಓದಿದ ವಿಷಯವನ್ನು ಮನದಟ್ಟು ಮಾಡಿಕೊಳ್ಳುವ ಬಗೆಯಿಂದ ಹಿಡಿದು ಪರೀಕ್ಷೆ ಬರೆಯುವ ತನಕ ಹೇಗೆ ಮನಸ್ಸನ್ನು ಜಾಗೃತವಾಗಿಟ್ಟುಕೊಳ್ಳಬೇಕು ಎಂಬ ಮಾಹಿತಿ ಈಗ ವಿದ್ಯಾರ್ಥಿಗಳಿಗೆ ದೊರಕುತ್ತಿದೆ. ಕೆಲವು ಸಂಘ ಸಂಸ್ಥೆಗಳು ಈ ಬಗ್ಗೆ ತರಬೇತಿ ನೀಡಿದರೆ, ಮಾಧ್ಯಮಗಳಲ್ಲಂತೂ ಈ ವಿಷಯದ ಬಗ್ಗೆ ಹೆಚ್ಚು ಲೇಖನಗಳು ಪ್ರಕಟವಾಗುತ್ತಿವೆ. ಮನೋವೈದ್ಯರಿಂದ ಹಿಡಿದು ಆಪ್ತ ಸಮಾಲೋಚಕರವರೆಗೆ, ಮಾರ್ಗದರ್ಶಿ ಶಿಕ್ಷಕರಿಂದ ಹಿಡಿದು ವಿಷಯಾಧಾರಿತ ಶಿಕ್ಷಕರವರೆಗೆ ತರಹೇವಾರಿ ವಿಧಾನಗಳು ಈಗ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿವೆ. ಶಾಲೆಗಳಲ್ಲಿ ಶಿಕ್ಷಕರು ಬೋಧನೆ ಮಾಡುವಾಗಲೂ ಪ್ರಸ್ತಾಪವಾಗುತ್ತದೆ. ಹೀಗಾಗಿ ಪರೀಕ್ಷಾ ಸಂದರ್ಭಗಳಲ್ಲಿ ಎದುರಾಗುವ ಭಯ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ನಗರ ಪ್ರದೇಶದ ಮಕ್ಕಳಿಗೆ ಇಡೀ ಬದುಕೇ ಶಿಕ್ಷಣವಾಗಿದೆ. ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳುವ ವಾತಾವರಣ ಅಲ್ಲಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ರೀತಿಯ ವ್ಯವಸ್ಥೆಗಳು ಇರಲಿಲ್ಲ. ಈಗಲೂ ಎಲ್ಲ ಕಡೆ ಇಲ್ಲ. ಆದರೂ ಒಂದಷ್ಟು ಬದಲಾವಣೆಗಳಂತು ಆಗಿವೆ. ಶೈಕ್ಷಣಿಕ ಚಟುವಟಿಕೆಗಳ ಸಂದರ್ಭದಲ್ಲಿ ವಿಚಾರ ವಿನಿಮಯದಿಂದ ಹಿಡಿದು ಮಕ್ಕಳು ಏನು ಓದುತ್ತಿದ್ದಾರೆ ಎಂಬಂತಹ ಅರಿವು ಪೋಷಕ ವರ್ಗಕ್ಕಿದೆ.
ಪರೀಕ್ಷೆಗಳು ಹತ್ತಿರ ಬರುವ ಕಾಲಕ್ಕೆ ಮನಸ್ಸಿನ ಭಯ ನಿವಾರಣೆ, ಏಕಾಗ್ರತೆಯ ಮನಸ್ಸು, ಎಂತಹ ಆಹಾರ ಇರಬೇಕು, ದೈನಂದಿನ ಚಟುವಟಿಕೆಗಳು ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ಹೆಚ್ಚುತ್ತಿವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪೂರ್ಣವಾಗಿಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ತಲುಪುತ್ತಿವೆ. ಇವೆಲ್ಲ ಮಕ್ಕಳ ಸಾಧನೆಗೆ ಪುಷ್ಟಿ ನೀಡುವ ಅಂಶಗಳಾಗಿವೆ. ತಾನು ಕಲಿಯುತ್ತಿರುವ ಶಾಲೆ, ಸ್ನೇಹಿತರೊಂದಿಗೆ ಚರ್ಚೆ, ಪೋಷಕ ವರ್ಗದ ಸಲಹೆ, ಹಿರಿಯರ ಮಾರ್ಗದರ್ಶನ, ಮಾಧ್ಯಮಗಳಲ್ಲಿನ ಸಂದರ್ಶನ, ದೂರದರ್ಶನದ ಅರಿವು ಕಾರ್ಯಕ್ರಮಗಳು ಶಿಕ್ಷಣದ ಆಸಕ್ತಿಗೆ ಒರೆ ಹಚ್ಚುತ್ತಿವೆ.