ಬೆಂಗಳೂರು
ಫೇಸ್ಬುಕ್ನಲ್ಲಿ ಲೈವ್ ಮಾಡಿ ಮೆಕ್ಯಾನಿಕ್ರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಅಸಿಬ್ ಖಾನ್ (27)ಎಂದು ಆತ್ಮಹತ್ಯೆಗೆ ಶರಣಾದ ಮೆಕ್ಯಾನಿಕ್ನನ್ನು ಗುರುತಿಸಲಾಗಿದೆ. ಮೃತ ಅಸಿಬ್ ಖಾನ್ ಏಳು ವರ್ಷಗಳ ಹಿಂದೆ ಆಂಧ್ರದಿಂದ ಸರ್ಜಾಪುರಕ್ಕೆ ಬಂದು ನೆಲೆಸಿದ್ದನು. ಮಹೇಶ್ ಎಂಬಾತನಿಂದ ವಂಚನೆಗೊಳಾಗಿ ಫೇಸ್ ಬುಕ್ ನಲ್ಲಿ ಲೈವ್ ಮಾಡಿ ನೇಣಿಗೆ ಶರಣಾಗಿದ್ದಾನೆ.
ಮೃತ ಅಸಿಬ್ ಖಾನ್ ಗೆ ಮೆಕ್ಯಾನಿಕ್ ಕೆಲಸ ಬಿಟ್ಟು ವ್ಯಾಪಾರ ಮಾಡೋಣ ಎಂದು ಮಹೇಶ್ ಹಣವನ್ನು ತೆಗೆದುಕೊಂಡಿದ್ದನು. ಆದರೆ ದುಡಿದ ಹಣವನ್ನು ಮಹೇಶ್ ಪಡೆದು ವಂಚನೆ ಮಾಡಿದ್ದಾನೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ನ್ಯಾಯ ದೊರಕಿಸುವಂತೆ ಸಚಿವ ಜಮೀರ್ ಖಾನ್ ಗೆ ಮನವಿ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಜಗನ್ ಗೆ ಮತ ನೀಡುವಂತೆ ಹೇಳಿದ್ದಾನೆ.
ವಿಡಿಯೋದ ವಿವರ
ನಾನು ಆಂಧ್ರ ಪ್ರದೇಶ ಹಿಂದೂಪುರದ ನಿವಾಸಿಯಾಗಿದ್ದು, ಹಿಂದೂಪುರದಿಂದ ಬೆಂಗಳೂರಿಗೆ ಬಂದು ಬಹಳ ಕಷ್ಟದಿಂದ ವಾಹನಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದೆ. ನನ್ನ ಕಷ್ಟದ ಪ್ರತಿಫಲವಾಗಿ ನನ್ನ ವ್ಯವಹಾರವೂ ಚೆನ್ನಾಗಿ ನಡೆಯುತ್ತಿತ್ತು. ನಾನು ಕೂಡ ಸಂತೋಷವಾಗಿದ್ದ ವೇಳೆ ಮಹೇಶ್ ಪರಿಚಯವಾಗಿ ತನ್ನ ಜೊತೆ ವ್ಯವಹಾರದಲ್ಲಿ ಕೈ ಜೋಡಿಸಲು ಪೀಡಿಸಿದನು. ಅಲ್ಲದೆ ನಾನು ಕಷ್ಟಪಟ್ಟು ಮಾಡಿದ ಅಂಗಡಿಯನ್ನು ಮಾರಾಟ ಮಾಡಿಸಿ ವ್ಯವಹಾರಕ್ಕಾಗಿ ಹಣ ಪಡೆದುಕೊಂಡಿದ್ದನು.
ಬಳಿಕ ವ್ಯವಹಾರದಿಂದ ಬಂದ ಲಾಭದ ಹಣ ಹಾಗೂ ನಾನು ನೀಡಿದ ಹಣ ಕೇಳಲು ಹೋದರೆ ನೆಪದ ಮೇಲೆ ನೆಪ ಹೇಳುತ್ತಿದ್ದನು. ಈ ವ್ಯವಹಾರದ ಬಳಿಕ ನನ್ನ ಮನೆಯ ಮಾಲೀಕ ನನಗೆ ಹಣಕಾಸಿನ ಸಹಾಯ ಮಾಡಿದ್ದಾರೆ. ಇದೀಗ ಮತ್ತೆ ಅವರ ಬಳಿ ಸಹಾಯ ಕೇಳಲು ನನಗೆ ನಾಚಿಕೆಯಾಗುತ್ತಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಬರಬೇಕಾದ 1 ಲಕ್ಷ 20 ಸಾವಿರ ರೂಪಾಯಿ ಹಣವನ್ನ ನನ್ನ ಮಾಲೀಕನಿಗೆ ನೀಡಿ.
ನನಗೆ ಮೋಸ ಮಾಡಿದ ಮಹೇಶ್ಗೆ ಶಿಕ್ಷೆಯಾಗಬೇಕು. ಸರ್ಜಾಪುರದಲ್ಲಿರುವ ಕಟಿಂಗ್ ಸೀನಾ, ಓಂ ಶಕ್ತಿ ಮಂಜು ಹಾಗೂ ಸಚಿವ ಜಮೀರ್ ಅಹ್ಮದ್ ಅವರು ಈ ವಿಷಯದಲ್ಲಿ ಬೆಂಬಲಿಸಿ ನನಗೆ ನ್ಯಾಯ ಕೂಡಿಸಿ. ವಂಚಕ ಮಹೇಶ್ ಬಿಟ್ಟರೆ ನನ್ನ ಸಾವಿಗೆ ಯಾರೊಬ್ಬರೂ ಕಾರಣರಲ್ಲ, ಯಾರಿಗೂ ತೊಂದರೆ ಕೊಡಬೇಡಿ ಎಂದು ಹೇಳಿದ್ದಾನೆ.ವಂಚಕ ಮಹೇಶ್ ರಾತ್ರೋರಾತ್ರಿ ಊರು ಬಿಟ್ಟು ಪರಾರಿಯಾಗಿದ್ದಾನೆ. ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








