ಹುಳಿಯಾರು:
ರಾಷ್ಟ್ರೀಯ ಹೆದ್ದಾರಿ 150 ಎ ರಲ್ಲಿನ ಹುಳಿಯಾರಿನಿಂದ ಕೆಂಕೆರೆ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಆಸ್ಪತ್ರೆ ತ್ಯಾಜ್ಯ ಸುರಿದಿದ್ದು ಸ್ಥಳೀಯ ಪಾದಚಾರಿಗಳಿಗೆ ತೊಡಕಾಗಿ ಪರಿಣಮಿಸಿದೆ.
ಸುರಿದಿರುವ ತ್ಯಾಜ್ಯದಲ್ಲಿ ಅರೆಬರೆ ಬಳಸಲಾಗಿರುವ ಔಷಧಗಳು, ಮಾತ್ರೆಗಳು, ಸೂಜಿಗಳು, ರಕ್ತಸಿಕ್ತ ಬ್ಯಾಂಡೇಜ್ ಬಟ್ಟೆಗಳು ಹಾಗೂ ಗ್ಲೂಕೋಸ್ ಬಾಟಲ್‍ಗಳು ಸೇರಿದಂತೆ ನಾನಾ ಬಗೆಯ ತ್ಯಾಜ್ಯಗಳು ಬಿದ್ದಿವೆ. ಹೀಗೆ ರಾಸಾಯನಿಕಯುಕ್ತ ಔಷಧಗಳನ್ನು ತಂದು ಸುರಿಯಲಾಗಿರುವ ಪ್ರದೇಶದಲ್ಲಿ ದನಕರುಗಳು, ಕುರಿಗಳನ್ನು ಮೇಯಿಸಲಾಗುತ್ತದೆ. ಮಳೆಗೆ ತ್ಯಾಜ್ಯ ವಸ್ತುಗಳು ಹಾಗೂ ರಾಸಾಯನಿಕಯುಕ್ತ ಔಷಧಗಳು ಜಾನುವಾರು ಮೇವಿಗೆ ಸೇರಿಕೊಂಡು ಅವುಗಳ ಆರೋಗ್ಯದಲ್ಲಿ ದುಷ್ಪರಿಣಾಮ ಬೀರುವ ಆತಂಕ ನಿರ್ಮಾಣವಾಗಿದೆ.
ಅಲ್ಲದೆ ಈ ಮಾರ್ಗವಾಗಿ ಲಿಂಗಪ್ಪನಪಾಳ್ಯ, ಕೋಡಿಪಾಳ್ಯ, ಕಾಮಶೆಟ್ಟಿಪಾಳ್ಯ, ಕೆ.ಸಿ.ಪಾಳ್ಯ, ಸೋಮಜ್ಜನಪಾಳ್ಯ, ಗೌಡಗೆರೆ, ಕುರಿಹಟ್ಟಿ ಗ್ರಾಮಗಳ ಶಾಲಾ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ರೈತರು ಹುಳಿಯಾರಿನಿಂದ ತಮ್ಮತಮ್ಮ ಊರುಗಳಿಗೆ ನಡೆದುಕೊಂಡು ಹೋಗುವುದಿದ್ದು ಈ ಔಷಧಿ ತ್ಯಾಜ್ಯ ಇವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ.
ಇದೇ ರೀತಿ ಐದಾರು ತಿಂಗಳ ಹಿಂದೆ ವಿದ್ಯಾವಾರಿಧಿ ಶಾಲೆಜಿನ ಹತ್ತಿರದ ರಸ್ತೆಯ ಬದಿ ಔಷಧಿ ತ್ಯಾಜ್ಯ ಸ್ಮರಿಯಲಾಗಿತ್ತು. ಔಷಧ ನಿಯಂತ್ರಣ ಇಲಾಖೆ ಈ ಬಗ್ಗೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಉಪಯೋಗಿಸಲ್ಪಟ್ಟ ಔಷಧಗಳ ತ್ಯಾಜ್ಯವಸ್ತುಗಳನ್ನು ತಾಲೂಕಿನಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ಮಾಮೂಲು ಸಂಗತಿಯಾಗಿದೆ.
ಔಷಧಿ ತ್ಯಾಜ್ಯವಸ್ತುಗಳನ್ನು ವೈಜ್ಞಾನಿಕ ಸಂಸ್ಕರಣೆ ಮೂಲಕ ನಾಶಗೊಳಿಸಬೇಕು, ಗುಂಡಿ ತೆಗೆದು ಅದರಲ್ಲಿ ಊಳುವಂತೆಯೂ ನಿದರ್ಶನವಿದೆ. ಆದರೆ ಈ ಎಲ್ಲಾ ನಿಯಮಗಳನ್ನೂ ಗಾಳಿಗೆ ತೋರಿ ಬೇಕಾಬಿಟ್ಟಿ ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾಗಿದೆ.ಇಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳು ಖಾಸಗಿ ಆಸ್ಪತ್ರೆಯಲ್ಲಿ ಬಳಸಿರುವುದು ಮೇಲ್ನೋಟಕ್ಕೆ ಖಚಿತಗೊಂಡಿದೆ. ಈಗಲಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ತ ಆಸ್ಪತ್ರೆಯ ಮೇಲೆ ಕ್ರಮ ಜರುಗಿಸಿ ಈ ರೀತಿಯ ಪ್ರಕರಣ ಪುನರಾವರ್ತಿಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಚಿತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








