ಚಿತ್ರದುರ್ಗ
ಧ್ಯಾನ ನಿಮ್ಮ ಚಿತ್ತ ಚಂಚಲತೆಯನ್ನು, ತುಮುಲಗಳನ್ನು ದೂರ ಮಾಡುವ ಸಾಧನ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಶ್ರೀಗಳು, ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಭೂಮಿ ಮೇಲಿರುವ ಎಲ್ಲರೂ ಸಮಸ್ಯೆಗಳನ್ನು ಹೊಂದಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದರು. ಧೈರ್ಯವನ್ನು ಬೆಳೆಸಿಕೊಳ್ಳಿ, ಅದು ಎಂತಹ ಪ್ರಸಂಗವಾದರೂ ಸರಿಯೇ ಮಾನಸಿಕವಾಗಿ ಎದೆಗುಂದ ಬೇಡಿ. ಆ ಸಮಸ್ಯೆಗಳಿಂದ ಜುಗುಪ್ಸೆ ತಂದುಕೊಳ್ಳಬೇಡಿ. ಜುಗುಪ್ಸೆ ನಿಮ್ಮ ಬದುಕನ್ನು ಕಾಂತಿಹೀನವಾಗಿ ಮಾಡುವುದು. ಹಾಗಾಗಿ ಸದಾ ಸಕಾರಾತ್ಮಕ ಮನೋಭಾವ ತಂದುಕೊಳ್ಳಿ. ಜೀವನದಲ್ಲಿ ಏರಿಳಿತಗಳು ಸದಾ ಇರುತ್ತವೆ. ಅವುಗಳಿಗೆ ಯಾವಾಗಲು ಹಿಗ್ಗದೆ ಕುಗ್ಗದೆ ಮನಸ್ಸಿನ ಮೇಲೆ ಹಿಡಿತ ಸಾಧಿಸಿರಿ ಎಂದು ಕಿವಿಮಾತು ಹೇಳಿದರು.
ಯಾವುದೇ ಸಮಸ್ಯೆಯಾಗಿರಲಿ ಆ ಕುರಿತು ನಿಮಗಿಂತಲೂ ಬೇರೆಯವರ ದೃಷ್ಟಿ ವಿಭಿನ್ನವಾಗಿದ್ದರೆ ಅದನ್ನು ಸಂತೋಷದಿಂದ ಒಪ್ಪಿಕೊಳ್ಳಬೇಕು. ಕ್ರೀಡಾ ಮನೋಭಾವದಿಂದ ಸದಾ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಜಾಗೃತವಾಗಿರಿ. ಶಾಂತವಾದ ತಿಳಿಯಾದ ನಿರ್ಮಲವಾದ ಹೃದಯವನ್ನು ರೂಪಿಸಿಕೊಳ್ಳಿರಿ. ಸದಾ ಹಸನ್ಮುಖಿಗಳಾಗಿ. ಗಾಬರಿಗೆ ಅವಕಾಶ ನೀಡದಿರಿ ಎಂದು ಶರಣರು ನುಡಿದರು.
2600 ವರ್ಷಗಳ ಹಿಂದಿನ ಗೌತಮಬುದ್ಧ, 12ನೇ ಶತಮಾನದಲ್ಲಿ ಬಸವಣ್ಣ, ಆಧುನಿಕ ಕಾಲದ ಅಂಬೇಡ್ಕರ್, ಗಾಂಧೀಜಿ, ಸ್ವಾಮಿ ವಿವೇಕಾನಂದರು, ಅಬ್ದುಲ್ ಕಲಾಂರಂಥವರು ನಮಗಷ್ಟೇ ಅಲ್ಲ ಇಡೀ ಸಮಾಜಕ್ಕೆ ಆದರ್ಶರಾಗಿ ಮಾದರಿಯಾಗಿದ್ದಾರೆ. ಅವರ ಬದುಕಿನ ಕಷ್ಟಗಳನ್ನು ಅವುಗಳನ್ನು ಪರಿಹರಿಸಿಕೊಂಡ ರೀತಿಯನ್ನು ತಿಳಿಯಿರಿ ಎಂದರಲ್ಲದೆ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತ ಪಿಪಿಟಿ ಮುಖಾಂತರ ತಮ್ಮ ವಿಚಾರವನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡೌ|| ಗೌರಮ್ಮ, ಉಪಪ್ರಾಚಾರ್ಯ ಡಾ|| ರಘುನಾಥರೆಡ್ಡಿ, ಕೋ-ಆರ್ಡಿನೇಟರ್ ನಾಗರಾಜ್ ವೇದಿಕೆಯಲ್ಲಿದ್ದರು. ಬಸವೇಶ್ವರ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ|| ಪ್ರಶಾಂತ್, ಡಾ|| ನಾರಾಯಣಮೂರ್ತಿ ಉಪಸ್ಥಿತರಿದ್ದರು. ಹಾಗೂ ದಂತ ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
