ಸಿಇಒ ವಿರುದ್ಧ ತಿರುಗಿ ಬಿದ್ದ ಸದಸ್ಯರು..!!

ದಾವಣಗೆರೆ:

   ವಿವಿಧ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡದ ಜಿಲ್ಲಾ ಪಂಚಾಯಿತಿ ಸಿಇಒ ಬಸವರಾಜೇಂದ್ರ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧ ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್ ಅವರ ಆದಿಯಾಗಿ ಜಿ.ಪಂ. ಸದಸ್ಯರು ಪಕ್ಷಭೇದ ಮರೆತು ಅಸಮಾಧಾನ ವ್ಯಕ್ತಪಡಿಸಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಿಇಒ ಬಸವರಾಜೇಂದ್ರ ಅವರು ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡದೇ ತಮ್ಮ ಬಳಿಯಲ್ಲೇ ಇಟ್ಟುಕೊಂಡು ಕಾಲ ಹರಣ ಮಾಡುತ್ತಿದ್ದಾರೆಂದು ಆರೋಪಿಸಿ ಜಿ.ಪಂ. ಸದಸ್ಯರು ಆರಂಭಿಸಿದ ಚರ್ಚೆಯು ಸಭೆಯ ಬಹುಪಾಲು ಸಮಯವನ್ನು ಹರಣ ಮಾಡಿತು.

   ಸಭೆಯಲ್ಲಿ ಅವಕಾಶ ಸಿಕ್ಕಾಗೆಲ್ಲಾ ಜಿ.ಪಂ. ಸದಸ್ಯರು ಸಿಇಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಬಳಕೆ ಮಾಡಿಕೊಂಡರು. ಹೀಗಾಗಿ ಸಿಇಒ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ತಾಳ್ಮೆ ಕಳೆದುಕೊಂಡ ಪ್ರಸಂಗವೂ ನಡೆದು ಹೋಯಿತು.ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಜಗಳೂರು ತಾಲ್ಲೂಕಿನಲ್ಲಿ ಬೋರ್‍ವೆಲ್ ಕೊರೆಸಿರುವ ವಿಚಾರದಲ್ಲಿ ಸಿಇಒ ಕಡತಕ್ಕೆ ಸಹಿ ಹಾಕದೆ ಕುಳಿತಿದ್ದಾರೆ. ಅಧಿಕಾರಿಗಳು ಕಡತಗಳ ವಿಚಾರದಲ್ಲಿ ಕಣ್ಣುಮುಚ್ಚಾಲೇ ಆಟ ಆಡುತ್ತಿದ್ದಾರೆ.

     ಸಿಇಓ ಸೇರಿದಂತೆ ಎಲ್ಲಾ ಅಧಿಕಾರಿಗಳು ಕಡತಗಳು ನಮ್ಮಲ್ಲಿಲ್ಲ, ಅವರಲ್ಲಿದೆ.. ಹೀಗೆ ಸಬೂಬು ಹೇಳಿಕೊಂಡು ಕಾಲಾಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿ.ಪಂ. ಅಧ್ಯಕ್ಷೆ ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆಗ ಮಾತನಾಡಿದ ಅಧಿಕಾರಿಗಳು ಯಾರಿಗೂ ಗುತ್ತಿಗೆ ನೀಡದೇ ಸ್ವತಃ ಸದಸ್ಯರುಗಳೇ ಬೋರ್‍ವೆಲ್ ಕೊರೆಸಿ, ಅದರ ಹಣ ಬಿಡುಗಡೆ ಮಾಡಿ ಎಂಬುದಾಗಿ ಒತ್ತಡ ಹೇರುತ್ತಿದ್ದಾರೆ. ಬಿಲ್ ಬಿಡುಗಡೆಗೆ ಕೆಲ ತಾಂತ್ರಿಕ ಕಾರಣಗಳಿದೆ ಎಂದು ಸಮಜಾಯಿಷಿ ನೀಡಿದರು.

     ಆಗ ಅಧ್ಯಕ್ಷರು ಬಾಕಿ ಇರುವ ಬಿಲ್ ಬಿಡುಗಡೆಗೆ ಸಂಬಂಧಿಸಿದಂತೆ, ಇನ್ನೂ ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಸಬೇಕೆಂದು ಸೂಚಿಸಿದರು.ಜಿ.ಪಂ. ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿ ವರೆಗೂ ಅಧಿಕಾರಿಗಳು ಕಡತಗಳ ವಿಲೇವಾರಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾದರೆ. ಜಿ.ಪಂ. ಅಧ್ಯಕ್ಷರು, ಸದಸ್ಯರು ಹೇಳಿದ ಯಾವುದೇ ಕೆಲಸ ಮಾಡುತ್ತಿಲ್ಲ.

      ಕೆಲವು ಸಂದರ್ಭದಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಗುರುತರ ಆರೋಪ ಮಾಡಿದರೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದ ಸಿಇಒ ತಮ್ಮ ವಿಚಾರ ಬಂದಾಗ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲು ಮುಂದಾಗುತ್ತಾರೆ. ಸಿಇಒ ಅವರ ಈ ನಡುವಳಿಕೆಯಿಂದಾಗಿ ಸದಸ್ಯರ ಮಾತಿಗೆ ಬೆಲೆಯೇ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ ಮಾತನಾಡಿ, ದಾವಣಗೆರೆ ತಾಲ್ಲೂಕಿನಲ್ಲಿ ಸುಮಾರು 17 ಖಾ¸ಗಿ ಅನುದಾನಿತ ಹಾಸ್ಟೆಲ್‍ಗಳಿವೆ. ಕೆಲವು ಕಡೆ 40, 60 ಹೀಗೆ ವಿದ್ಯಾರ್ಥಿಗಳ ಸಂಖ್ಯೆ ಇದೆ. ಅದರಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಇದ್ದಾರೆ. ಉಳಿದವೆಲ್ಲವೂ ಟ್ರಂಕ್ ಇಟ್ಟು ಸರ್ಕಾರದ ಅನುದಾನ ಪಡೆಯಲಾಗುತ್ತಿದೆ. ಇದನ್ನು ನೋಡಿದರೆ ಸರ್ಕಾರದ ಕೋಟ್ಯಾಂತರ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದರು.

      ಈ ಖಾಸಗಿ ಅನುದಾನಿತ ಹಾಸ್ಟೆಲ್ ನಡೆಸುವವರು ಹೆಚ್ಚು ಕಡಿಮೆ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳೇ ಆಗಿದ್ದಾರೆ. ಅವರೇ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಅಧಿಕಾರಿಗಳು ಹೋದರೂ ಅವರಿಗೆ ಜೀವಬೇದರಿಕೆ ಇರುತ್ತದೆ. ಇದೊಂದರಲ್ಲೇ ಭ್ರಷ್ಟಾಚಾರ ನಡೆಯುತ್ತಿಲ್ಲ. ಶಾಲಾ ಮಕ್ಕಳ ಬಿಸಿಯೂಟಕ್ಕೂ ಸರ್ಕಾರದಿಂದ ನೀಡುವ ದವಸ ಧಾನ್ಯದಿಂದ ಲಕ್ಷಾಂತರ ರೂ ಹಣ ಕಬಳಿಸುತ್ತಿದ್ದಾರೆಂದು ಆರೋಪಿಸಿದರು.

     ಈ ಬಗ್ಗೆ ಪ್ರತಿಕ್ರಯಿಸಿದ ಸಿಇಒ ಹೆಚ್.ಬಸವರಾಜೇಂದ್ರ, ಇತ್ತೀಚಿನ ದಿನಗಳಲ್ಲಿ ಇಂಥ ಪ್ರಕರಣಗಳು ನನ್ನ ಗಮನಕ್ಕೆ ಬರುತ್ತಿದೆ. ಈ ವಿಚಾರವಾಗಿ ನಾನು, ನೀವುಗಳು ಒಂದು ತಂಡ ಮಾಡಿಕೊಂಡು ಹೋಗೋಣ. ಭ್ರಷ್ಟಾಚಾರ ನಡೆಸುತ್ತಿರುವ ಹಾಸ್ಟೆಲ್‍ಗಳ ಮೇಲೆ ಕ್ರಮ ಜರುಗಿಸೋಣ ಎಂದರು. ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ, ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಂದ್ರ ನಾಯ್ಕ, ಸದಸ್ಯರಾದ ಎಂ.ಆರ್. ಮಹೇಶ್, ನಾಗೇಶಸ್ವಾಮಿ, ಬಸವಂತಪ್ಪ, ಓಬಳೇಶ್ವರ್, ವೀರಭದ್ರಪ್ಪ ಸೇರಿದಂತೆ ಮತ್ತಿತರರು ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap