ತುಮಕೂರು
ಭಾರತದ 28ನೇ ಮಳಿಗೆ ಸ್ಮಾರ್ಟ್ ಸಿಟಿ ನಗರಿಯಲ್ಲಿ ಉದ್ಘಾಟನೆ
ನಗರದ ಮಂಡಿಪೇಟೆ ಮುಖ್ಯರಸ್ತೆಯಲ್ಲಿ (ಹಳೇ ವಿನೋದ ಟಾಕೀಸ್ ಸ್ಥಳದಲ್ಲಿ) ಭಾರತದ 28ನೇ ಮೆಟ್ರೋ ಸಗಟು ಮಾರಾಟ ಮಳಿಗೆ ಉದ್ಘಾಟನೆಗೊಂಡಿದ್ದು, ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಳಿಗೆ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕರು ರಾಜಧಾನಿ ಬೆಂಗಳೂರು ಬಿಟ್ಟರೆ ತುಮಕೂರಿನಲ್ಲಿ ಮೆಟ್ರೋ ಆರಂಭಗೊಂಡಿರುವುದುು ಖುಷಿ ತಂದಿದೆ. ಜಿಲ್ಲೆಯ ಜನ ಬೆಂಗಳೂರಿನ ಯಶವಂತಪುರ ಬಳಿಯ ಮೆಟ್ರೋ ಸಂಸ್ಥೆಗೆ ಹೋಗಿ ಖರೀದಿಸುತ್ತಿದ್ದರು. ಈಗ ನಗರದ ಹೃದಯ ಭಾಗದಲ್ಲಿ ಸಗಟು ಮಳಿಗೆ ಬಂದಿರುವುದು ತುಮಕೂರಿನಲ್ಲಿ ವ್ಯಾಪಾರ ಕ್ಷೇತ್ರದ ವಿಸ್ತರಣೆಗೆ ಅನುಕೂಲ ಕಲ್ಪಿಸಿದೆ. ವಾಣಿಜ್ಯ ವಹಿವಾಟು ಬೆಳೆದಷ್ಟು ಆರ್ಥಿಕ ಪ್ರಗತಿಗೆ ಪೂರಕವಾಗಲಿದ್ದು, ಸಂಸ್ಥೆ ಸ್ಥಾಪನೆಗೆ ನೆರವಾದ ಡಾ.ಕುಮಾರಸ್ವಾಮಿ ಕುಟುಂಬವರ್ಗದವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜ್ ಮುಖ್ಯ ಅತಿಥಿಯಾಗಿ ಮಾತನಾಡಿ, ಜಾಗತೀಕರಣದ ಬಳಿಕ ಸ್ಪರ್ಧಾತ್ಮಕತೆ ಹೆಚ್ಚಿದೆ. ಬಹುರಾಷ್ಟ್ರೀಯ ಕಂಪನಿಗಳು ಎಲ್ಲಾ ಕ್ಷೇತ್ರಗಳಲ್ಲೂ ಬರುತ್ತಿದ್ದು. ಮೆಟ್ರೊ ಬಂದಿತೆಂದು ಸಣ್ಣ, ಪರಂಪರಾನುಗತ ವ್ಯಾಪಾರಸ್ಥರು ಭಯ ಪಡುವುದು ಬೇಡ. ಗುಣಮಟ್ಟ, ಸ್ಪರ್ಧಾತ್ಮಕತೆಗೆ ಹೆಚ್ಚು ಒತ್ತು ಕೊಡಿ. ನಿಮ್ಮ ಗ್ರಾಹಕರು ನಿಮ್ಮ ಬಳಿಯೇ ಉಳಿಯುತ್ತಾರೆ. ಮಹಿಳೆಯರಿಗೆ ಹೆಚ್ಚಿನ ಖರೀದಿ ಆಯ್ಕೆಯ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ ಎಂದರು.
ಹಿರಿಯ ಸಹಕಾರಿ ಹಾಗೂ ಉದ್ಯಮಿ ಎನ್.ಎಸ್.ಜಯಕುಮಾರ್ ಮಾತನಾಡಿ, ವ್ಯಾಪಾರ, ವಹಿವಾಟು ಕ್ಷೇತ್ರದಲ್ಲಿ ಹೊಸಬರ ರಂಗ ಪ್ರವೇಶ ಸ್ಪರ್ಧಾತ್ಮಕತೆ ಹೆಚ್ಚಿಸುತ್ತದೆ. ಗ್ರಾಹಕರಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿ ಕಿರಾಣಿ ಅಂಗಡಿಗಳವರು ಹೆಚ್ಚಿನ ಆತಂಕಕ್ಕೆ ಒಳಗಾಗದೆ ಮೆಟ್ರೊದಿಂದಾಗುವ ಲಾಭವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಮೇಯರ್ ಫರೀದಾಬೇಗಂ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ನಗರಿಗೆ ಮೆಟ್ರೋ ಶೋಭೆಯಾಗಲಿದೆ. ವ್ಯಾಪಾರದಲ್ಲಿ ಆರೋಗ್ಯಕರ ಸ್ಪರ್ಧೆಯಿರಬೇಕು. ಆಗಷ್ಟೇ ಜನಸಾಮಾನ್ಯರಿಗೆ ಲಾಭವಾಗುತ್ತದೆ ಎಂದರು. ಉಪಮೇಯರ್ ಶಶಿಕಲಾ, ಸದಸ್ಯೆ ನಾಜಿದಾಬೇಗಂ, ಕಟ್ಟಡ ಮಾಲೀಕರಾದ ಕುಮಾರಸ್ವಾಮಿ ಕುಟುಂಬವರ್ಗದವರು, ವಿವಿಧ ಗಣ್ಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ