ನೀರು, ಮೇವು ಪೂರೈಕೆ ನಿರ್ಲಕ್ಷಿಸಿದರೆ ಕಠಿಣ ಕ್ರಮ : ಡಾ.ಪರಮೇಶ್ವರ್

ತುಮಕೂರು

      ಎಲ್ಲೆಲ್ಲಿ ಮೇವಿನ ಅಗತ್ಯವಿದೆಯೋ ಅಲ್ಲಿ ಕೂಡಲೆ ಮೇವು ಬ್ಯಾಂಕ್ ಸ್ಥಾಪನೆ ಮಾಡಿ ಜಾನುವಾರುಗಳಿಗೆ ವಿತರಿಸಿ, ಮಳೆಗಾಲ ಆರಂಭವಾಗುತ್ತಿದೆ, ಇನ್ನೂ ವಿಳಂಬ ಮಾಡಬೇಡಿ. ಕುಡಿಯುವ ನೀರಿನ ವಿಚಾರ ಕಡೆಗಣಿಸಬೇಡಿ ಯಾವ ಹಳ್ಳಿಯಲ್ಲೂ ನೀರಿನ ಸಮಸ್ಯೆಯ ದೂರು ಬರದಂತೆ ಎಚ್ಚರವಹಿಸಿ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಶುಕ್ರವಾರ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು , ತುರ್ತು ಪರಿಸ್ಥಿತಿ ಇರುವ ಕಡೆ ವಿಳಂಬ ಮಾಡದೆ ತಕ್ಷಣಾ ಕುಡಿಯುವ ನೀರು, ಮೇವು ವಿತರಿಸುವುದು ಅಧಿಕಾರಿಗಳ ಜವಾಬ್ದಾರಿ, ಲೋಪವದಲ್ಲಿ ಅವರೇ ಹೊಣೆ ಎಂದು ಎಚ್ಚರಿಕೆ ನೀಡಿದರು.

      ಈ ಬಾರಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಬೀಳದೆ ಕುಡಿಯುವ ನೀರು, ಜಾನುವಾರು ಮೇವಿಗೆ ತೀವ್ರ ಅಭಾವ ಉಂಟಾಗಿದೆ. ಪರಿಸ್ಥಿತಿ ನಿಭಾಯಿಸಲು ಸಮರ್ಪಕ ಕಾರ್ಯಕ್ರಮ ರೂಪಿಸಲಾಗಿದೆ. ಕುಡಿಯುವ ನೀರು ಸರಬರಾಜು, ಮೇವು ಸರಬರಾಜಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಿ, ಬಂದ ದೂರುಗಳಿಗೆ ಸ್ಪಂದಿಸಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

       ಜಿಲ್ಲೆಯ 74 ಗ್ರಾಮ ಪಂಚಾಯ್ತಿಗಳ 122 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವವಿದೆ ಅಂತಹ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 182 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ, ಅವರಿಂದ ನೀರನ್ನು ಬಾಡಿಗೆಗೆ ಪಡೆದು ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ಪ್ರತಿ ಬೋರ್‍ವೆಲ್ ಗೆ ತಿಂಗಳಿಗೆ 16ರಿಂದ 18 ಸಾವಿರ ರೂ. ಗಳನ್ನು ಬೋರ್‍ವೆಲ್ ಮಾಲಿಕರಿಗೆ ನೀಡಿ ನೀರು ಪಡೆದು 122 ಹಳ್ಳಿಗಳಿಗೆ ದಿನಕ್ಕೆ 455 ಟ್ರಿಪ್ ವಿತರಿಸಲಾಗುತ್ತಿದೆ ಎಂದು ಹೇಳಿದರು.

       ಮಧುಗಿರಿ, ಕೊರಟಗೆರೆ, ಪಾವಗಡ, ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ತಿಪಟೂರು ತಾಲ್ಲೂಕಿನಲ್ಲಿ 21 ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಮುಂಜಾಗ್ರತವಾಗಿ ಹೋಬಳಿ ಕೇಂದ್ರಗಳಲ್ಲಿ ಮೇವು ದಾಸ್ತಾನು ಮಾಡಲಾಗುತ್ತಿದೆ. ಸದ್ಯದಲ್ಲೇ ಇನ್ನೂ 8 ಮೇವು ಬ್ಯಾಂಕ್ ಸ್ಥಾಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮಾಹಿತಿ ನೀಡಿದರು.

      ಜಿಲ್ಲೆಯಲ್ಲಿ ಮೇವು ಆಧಾರಿತ 7,08,185 ಜಾನುವಾರುಗಳಿದ್ದು ಪ್ರಸ್ತುತ 2,64,519 ಟನ್‍ಗಳಷ್ಟು ಒಣ ಮೇವು ಲಭ್ಯವಿದೆ, ಇದು ಮುಂದಿನ 11 ವಾರಗಳಿಗೆ ಸಾಕಾಗುತ್ತದೆ. ಆ ವೇಳೆಗೆ ಮಳೆ ಬಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಪ್ರಕಾಶ್ ಮಾಹಿತಿ ನೀಡಿದರು.

      ನೀರಾವರಿ ಸೌಲಭ್ಯವಿರುವ ರೈತರಿಗೆ ಹಸಿರು ಮೇವು ಬೆಳೆಯಲು ಪ್ರೋತ್ಸಾಹಿಸುವ ಸಲುವಾಗಿ ಅಕ್ಟೋಬರ್ ಮಾಹೆಯಲ್ಲಿ 51,660 ರೈತರಿಗೆ ಮೇವಿನ ಬೀಜದ ಕಿರು ಪೊಟ್ಟಣ ನೀಡಿದ್ದು 11,275 ಹೆಕ್ಟೇರ್ ಗಳಲ್ಲಿ ಬಿತ್ತನೆ ಮಾಡಿ ಅಂದಾಜು 5,86,771 ಟನ್ ಹಸಿರು ಮೇವು ಉತ್ಪಾದನೆಯಾಗಿರುತ್ತದೆ ಎಂದು ಹೇಳಿದರು.

     ಈ ವೇಳೆ ಉಪನಿರ್ದೇಶಕ ಡಾ. ಪ್ರಕಾಶ್ ತಪ್ಪು ಮಾಹಿತಿ ನೀಡಿದ್ದಕ್ಕೆ ಡಾ. ಪರಮೇಶ್ವರ್ ಸಿಟ್ಟಿಗೆದ್ದರು. ಜಾನುವಾರುಗಳ ಅಂಕಿ ಅಂಶದಲ್ಲಿ 16 ಸಾವಿರ ಜಾನುವಾರುಗಳ ಸಂಖ್ಯೆ ಕಡಿಮೆ ಇದ್ದದ್ದನ್ನು ಪ್ರಶ್ನಿಸಿದ ಉಪ ಮುಖ್ಯಂತ್ರಿಗಳಿಗೆ ಪ್ರಿಂಟಿಂಗ್ ಮಿಸ್ಟೇಕ್ ಎಂದು ಹೇಳಿದ್ದು ಸಿಟ್ಟಿಗೆ ಕಾರಣವಾಗಿತ್ತು, ಸಭೆಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗೆ ನೋಟೀಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

      ಪಟ್ಟಣಗಳ ಕುಡಿಯುವ ನೀರು ಸರಬರಾಜಿನ ಬಗ್ಗೆ ಕೆಲ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲಿಲ್ಲ. ಸಮರ್ಪಕ ಕೆಲಸ ಮಾಡದೆ ನಿರ್ಲಕ್ಷ ಮಾಡುತ್ತಿರುವುದು ಮನವರಿಕೆಯಾಗಿ ಡಾ. ಪರಮೇಶ್ವರ್ ಅವರನ್ನು ತರಾಟೆ ತೆಗೆದುಕೊಂಡರು ಜಿಲ್ಲಾ ಪಂಚಾಯ್ತಿ , ತಾಲ್ಲೂಕು ಪಂಚಾಯ್ತಿಗಳಲ್ಲಿ ಸಹಾಯವಾಣಿ ತೆರೆದು ದೂರುಗಳನ್ನು ಸ್ವೀಕರಿಸಿ, ಗ್ರಾಮಪಂಚಾಯ್ತಿ ಹಾಗೂ ಕುಡಿಯುವ ನೀರಿನ ವಿಭಾಗಕ್ಕೆ ರವಾನಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗಿದೆ. ಪ್ರತಿ ಹೋಬಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಬರ ನಿರ್ವಹಣೆಯ ಉಸ್ತುವಾರಿ ವಹಿಸಲಾಗಿದೆ, ವಾರಕ್ಕೊಮ್ಮೆ, ಈ ಕಾರ್ಯ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಶುಭಾ ಕಲ್ಯಾಣ್ ಹೇಳಿದರು.

        ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆಯೆ ಇಲ್ಲವೆ ಎಂಬ ಬಗ್ಗೆ ಅಧಿಕಾರಿಗಳು ಪ್ರತಿ ದಿನ ಪರಿಶೀಲಿಸಬೇಕು, ದುರಸ್ತಿ ಆಗಬೇಕಿದ್ದರೆ ತಕ್ಷಣ ಮಾಡಿಸಿ, ಚಲಾವಣೆಗೆ ತರಬೇಕು. ಈ ವಿಚಾರದಲ್ಲಿ ನೋಡಲ್ ಅಧಿಕಾರಿಗಳು ಎಚ್ಚರವಹಿಸಬೇಕು. ಹೊಸದಾಗಿ ಕೊರೆದ ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಒದಗಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದೇ ಇಲಾಖೆಯಾಗಲಿ ಕುಡಿಯುವ ನೀರಿನ ವಿಚಾರವನ್ನು ನಿರ್ಲಕ್ಷ ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಹೇಳಿದರು.

      ನಗರ, ಪಟ್ಟಣಗಳಲ್ಲೂ ಕುಡಿಯುವ ನೀರಿಗೆ ತೊಂದರೆ ಆಗಕೂಡದು ನೀರಿನ ಲಭ್ಯತೆ ಇಲ್ಲದಿದ್ದರೆ, ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ನೀರು ಖರೀದಿ ಮಾಡಿ ಟ್ಯಾಂಕರ್‍ಗಳಲ್ಲಿ ವಿತರಿಸಬೇಕು ಎಂದು ಸೂಚನೆ ನೀಡಿದರು.ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್, ಜಿಪಂ ಸಿಇಓ ಶುಭಾ ಕಲ್ಯಾಣ್, ತುಮಕೂರು ನಗರಪಾಲಿಕೆ ಆಯುಕ್ತ ಭೂಪಾಲನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap