ನಿಷೇಧಾಜ್ಞೆ ನಡುವೆಯೂ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು

     ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದ ಹಲವು ಪ್ರತಿಭಟನಾಕಾರರ  ನ್ನು ಪೊಲೀಸರು ಬಂಧಿಸಿದರೂ ಅಂಜದೆ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಹರಿಹಾಯ್ದರು.

    ನಗರ ವ್ಯಾಪ್ತಿಯಲ್ಲಿ ಸೋಮವಾರದಿಂದ ಮುಂದಿನ 20 ದಿನಗಳವರೆಗೆ ದಂಡ ಪ್ರಕ್ರಿಯಾ ಸಂಹಿತೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವ ಕಾರಣವೊಡ್ಡಿ ಎಸ್.ವರಲಕ್ಷ್ಮಿ ಅವರನ್ನು ಇಲ್ಲಿನ ಮಹಾಲಕ್ಷ್ಮಿ ಲೇಟ್ ಠಾಣಾ ಪೊಲೀಸರು ಬಂಧಿಸಿದರೆ, ಇನ್ನಿತರೆ ಮುಖಂಡರನ್ನು ಜಿಲ್ಲಾವಾರು ಪೊಲೀಸರು ವಶಕ್ಕೆ ಪಡೆದಿದ್ದರೂ ಹಲವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಮೆರವಣಿಗೆ ನಡೆಸಿದರು.

    ನ್ಯಾಯಯುತ ಬೇಡಿಕೆಗಳಿಗೆ ಈಡೇರಿಸಲು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದ ಹಲವು ಹೋರಾಟಗಾರರನ್ನು ಸರ್ಕಾರ ಎರಡನೇ ಬಾರಿಗೆ ಬಂಧಿಸಿದೆ.ಇನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಧರಣಿ ನಿರತ ಕಾರ್ಯಕರ್ತೆಯರು ದೂರಿದರು.

ಖಂಡನೆ:

      ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ತಯಾರಿಸುವ ತಾಯಂದಿರ ಹೋರಾಟಕ್ಕೆ ಸರ್ಕಾರ ಹೆದರಿದೆ. ಅತ್ಯಂತ ಕಡಿಮೆ ಅಂದರೆ ತಿಂಗಳಿಗೆ 2,600 ಸಂಬಳ ಪಡೆಯುವ ಈ ಬಿಸಿಯೂಟ ತಯಾರಕರು ಸಂಬಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಹೋರಾಟವನ್ನು ಮುರಿಯಲು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಪೋಲೀಸರನ್ನು ಬಳಸಿ ಪ್ರತಿಭಟನೆಗೆ ಅನುಮತಿ ನೀಡದೆ, ಪ್ರತಿಭಟನಾಕಾರರನ್ನು ಮಂಜಾಗೃತ ವಾಗಿ ಬಂಧಿಸಲು ಆದೇಶಿಸಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಎಸ್‌ಎಫ್‌ಐ, ಡಿವೈಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಖಂಡಿಸಿವೆ.ಧರಣಿ ಆರಂಭ: ನಿಷೇಧಾಜ್ಞೆ ನಡುವೆಯೂ ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಆವರಣದಲ್ಲಿ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರು ಧರಣಿ ಆರಂಭಿಸಿದ್ದಾರೆ.

     ಅನುಮತಿ ನೀಡದಿದ್ದರೂ ಪ್ರತಿಭಟನೆ ಮುಂದುವರೆಸುತ್ತೇವೆ.ಯಾವುದೇ ಕಾರಣಕ್ಕೂ ವಾಪಸ್ಸು ಹೋಗುವ ಮಾತಿಲ್ಲ ಎಂದು ಕಾರ್ಯಕರ್ತೆಯರು ಹೇಳಿದರು.

    ರೈಲ್ವೆ ನಿಲ್ದಾಣದ ಬಳಿ 200ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ, ಮೂರುಅಗ್ನಿ ಶಾಮಕ ದಳದ ವಾಹನ ಸೇರಿದಂತೆ ನೂರಾರು ಪೊಲೀಸರನ್ನು ನಿಯೋಜನೆ ಮಾಡಿ, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ವರಲಕ್ಷ್ಮೀ ಪೊಲೀಸ್ ವಶಕ್ಕೆ

      ನಿಷೇಧದ ನಡುವೆಯೂ ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಮಹಾಲಕ್ಷ್ಮೀ ಲೇಔಟ್‌ನ ಸಿಐಟಿಯು ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮೀಯನ್ನ ಪೊಲೀಸರು ವಶಕ್ಕೆ ಪಡೆದು ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಮೆರವಣಿಗೆ ನಡೆಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು (ಸಿಐಟಿಯು)ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ಎಸ್.ವರಲಕ್ಷ್ಮಿ ನೇತೃತ್ವದಲ್ಲಿ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಮುಂದಾಗಿದ್ದರು.

ಬೇಡಿಕೆಗಳು:-*ಬಿಸಿಯೂಟ ಯೋಜನೆ ಖಾಸಗೀಕರಣ ಬೇಡ *ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ನಿಗದಿ *ನಿವೃತ್ತಿ ವೇತನ ನೀಡಬೇಕು *ಬಿಸಿಯೂಟ ನೌಕರರನ್ನ ಶಿಕ್ಷಣ ಇಲಾಖೆಯ ಅಡಿಯಲ್ಲಿ ಖಾಯಂಗೊಳಿಸಬೇಕು *ಬಿಸಿಯೂಟ ಯೋಜನೆಯನ್ನ 12ನೇ ತರಗತಿವರೆಗೆ ವಿಸ್ತರಿಸಬೇಕು *ಪ್ರತಿ ಶಾಲೆಯಲ್ಲಿ ಕನಿಷ್ಠ 2 ಅಡುಗೆ ಕಾರ್ಮಿಕರು ಇರಬೇಕು*ಎಲ್ಲ ಬಿಸಿಯೂಟ ಕಾರ್ಯಕರ್ತೆಯರಿಗೆ ಬಿ.ಪಿ.ಎಲ್ ಕಾರ್ಡ್ ನೀಡಬೇಕು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link