ಬೆಂಗಳೂರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆಗಾಗಿ ಭಾರೀ ಪೈಪೋಟಿ ಆರಂಭವಾಗಿದ್ದು, ಮೂಲ ವಲಸಿಗರ ನಡುವೆ ಜಟಾಪಟಿ ಆರಂಭವಾಗಿದೆ. ಬಹುಬೇಡಿಕೆಯ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಭಾರೀ ಒತ್ತಡ ಯಡಿಯೂರಪ್ಪ ಅವರ ಮೇಲಿದ್ದು, ಮೂಲ, ವಲಸೆ ಸೇರಿದಂತೆ, ನೂತನ ಸಚಿವರೂ ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಲಾಬಿ ನಡೆಸಿದ್ದಾರೆ
ಆರು ತಿಂಗಳ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಮಧ್ಯೆ ಖಾತೆಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒತ್ತಡ ಹೆಚ್ಚಾಗುತ್ತಿದ್ದಂತೆಯೆ ಎಚ್ಚೆತ್ತುಕೊಂಡಿದ್ದ ಯಡಿಯೂರಪ್ಪ ಅವರು ಬೆಂಗಳೂರು ನಗರಾಭುವೃದ್ಧಿ ಖಾತೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದರು.
ಇದೀಗ ಎಡರನೇ ಬಾರಿಗೆ ಈ ಖಾತೆಗಾಗಿ ಲಾಬಿ ನಡೆಯುತ್ತಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಬೆಂಗಳೂರಿನ ಘಟಾನುಘಟಿ ಸಚಿವರ ಮಧ್ಯೆ ನಡೆದಿದೆ ಎನ್ನಲಾಗಿದೆ ಬಹಿರಂಗವಾಗಿ ಮುಖ್ಯಂತ್ರಿಗಳು ಕೊಡುವ ಯಾವುದೇ ಖಾತೆಯನ್ನು ನಿಭಾಯಿಸಲು ನಾವು ಸಿದ್ಧ ಎಂದು ಎಲ್ಲ 10 ನೂತನ ಸಚಿವರು ಹೇಳುತ್ತಿದ್ದಾರೆ. ಆದರೆ ಎಲ್ಲರೂ ಇಂಥದ್ದೆ ಖಾತೆ ಬೇಕು ಎಂದು ಒತ್ತಡ ಹಾಕುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಇಬ್ಬರು ಪ್ರಭಾವಿ ಸಚಿವರ ಮಧ್ಯೆ ಈಗ ಪೈಪೋಟಿ ಶುರುವಾಗಿದೆ ಎನ್ನಲಾಗಿದೆ. ಹಾಗಾದರೆ ಈ ಖಾತೆ ಯಾರಿಗೆ ಒಲಿಯುತ್ತದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ಬೆಂಗಳೂರು ಮಹಾನಗರವನ್ನು ಪ್ರತಿನಿಧಿಸುವ 10 ಸಚಿವರು ಯಡಿಯೂರಪ್ಪ ಅವರ ಸಂಪುಟದಲ್ಲಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ 7 ಸಚಿವರು ಬೆಂಗಳೂರಿನಿಂದಲೇ ಸೇರ್ಪಡೆ ಆಗಿದ್ದರು, ಇದೀಗ ಮತ್ತೆ ಮೂವರು ಸಂಪುಟ ಸೇರಿದ್ದಾರೆ. ಮತ್ತೆ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಮತ್ತೆ ಖ್ಯಾತೆ ಶುರುವಾಗಿದೆ.
ಬೆಂಗಳೂರನ್ನು ಪ್ರತಿನಿಧಿಸುವ ಕೆ. ಗೋಪಾಲಯ್ಯ, ಎಸ್.ಟಿ. ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ಮೂವರು ಯಡಿಯೂರಪ್ಪ ಅವರ ಸಂಪುಟ ಸೇರಿದ್ದಾರೆ. ಇವರಲ್ಲಿ ಭೈರತಿ ಬಸವರಾಜ್ ಹಾಗೂ ಎಸ್.ಟಿ. ಸೋಮಶೇಖರ್ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ತೀವ್ರ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿಯಿದೆ.
ಬೆಂಗಳೂರು ಮಹಾನಗರ ಪ್ರತಿನಿಧಿಸುವ ಸಚಿವರಾದ ಎಸ್.ಟಿ. ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ಮಧ್ಯೆ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪೈಪೋಟಿ ಶುರುವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಇಬ್ಬರೂ ಲಾಬಿ ಮಾಡುತ್ತಿದ್ದಾರೆಂಬ ಮಾಹಿತಿಯೂ ಇದೆ. ಹಿಂದೆ ಮೈತ್ರಿ ಸರ್ಕಾರದಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು, ಅದರಿಂದಾಗಿ ಖಾತೆ ನನಗೆ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿಯಿತ್ತು. ಆದರೆ ಅದನ್ನು ಅಲ್ಲಗಳೆದು ಕೊಟ್ಟಿರುವ ಹೇಳಿಕೆ ಕುತೂಹಲ ಮೂಡಿಸಿದೆ.
‘ಬೆಂಗಳೂರು ನಗರಾಭಿವೃದ್ಧಿ ಖಾತೆ ನನಗೂ ಇಲ್ಲ, ಭೈರತಿಗೂ ಇಲ್ಲ’ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ಕೊಟ್ಟಿರುವುದು ಆಶ್ಚರ್ಯ ಮೂಡಿಸಿದೆ. ನಾನು ಮತ್ತು ಭೈರತಿ ಯಾವುದೇ ಹುದ್ದೆಗಾಗಿ ಇಲ್ಲಿಯವರೆಗೆ ಲಾಬಿ ಮಾಡಿಲ್ಲ, ಮಾಡುವುದು ಇಲ್ಲ ಎಂದಿದ್ದಾರೆ.
ಈ ಮಧ್ಯೆ ಸೋಮವಾರ ಖಾತೆ ಹಂಚುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಆದರೆ ಬಿಎಸ್ವೈ ಅವರಿಗೆ ಹೈಕಮಾಂಡ್ನಿಂದ ಮಹತ್ವದ ಸೂಚನೆ ಬಂದಿದ್ದು, ಸಧ್ಯಕ್ಕೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀವೆ ಇಟ್ಟುಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ. ಹಿಂದೆ ನಡೆದಿದ್ದ ಪೈಟೋಟಿ ಹೈಕಮಾಂಡ್ ಗಮನದಲ್ಲಿ ಇದ್ದಿದ್ದರಿಂದ ಬೆಂಗಳೂರನ್ನು ಸಧ್ಯ ಬೇರೆಯವರಿಗೆ ಕೊಡಬೇಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಹಿಂದೆ ಕಾಂಗ್ರೆಸ್ ಹಾಗೂ ನಂತರ ಮೈತ್ರಿ ಸರ್ಕಾರದಲ್ಲಿಯೂ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ತೀವ್ರ ಪೈಪೋಟಿ ಇತ್ತು. ಆದರಿಂದ ಈಗ ‘ಬೆಂಗಳೂರು’ ಯಾರಿಗೆ ಒಲಿಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ