ಚಿಕ್ಕನಾಯಕನಹಳ್ಳಿ

ತಾಲ್ಲೂಕಿನ 96 ಕೆರೆಗಳಿಗೆ ನೀರು ಹರಿಸುವ ಯೋಜನೆಯಲ್ಲಿ ಮೂರು ಪ್ರಾಜೆಕ್ಟ್‍ಗಳು ಸೇರಿವೆ. ಎತ್ತಿನಹೊಳೆ, ಹೇಮಾವತಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ನೀರು ಹರಿಯುತ್ತದೆ. ಪ್ರಮುಖವಾಗಿ ಎತ್ತಿನಹೊಳೆ ಯೋಜನೆಯಿಂದ ನೀರು ಪಡೆದು ಕೆರೆಗಳನ್ನು ತುಂಬಿಸಲಾಗುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಸೋಮವಾರ ಗ್ಯಾರೆಹಳ್ಳಿಯಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆರೆಗಳಿಗೆ ನೀರು ಹರಿಸಲು 260 ಕೋಟಿ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಮೂಲಕ ಎಲ್ಲಾ ಕೆರೆಗಳನ್ನು ತುಂಬಿಸಲಿದ್ದು, ಈ ಕಾಮಗಾರಿ ಪ್ರಗತಿಯಲ್ಲಿ ಇರುವ ಹೇಮಾವತಿ ನಾಲೆಯಿಂದ 26 ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.
ಶಂಕರನಾರಾಯಣ ಕನ್‍ಸ್ಟ್ರಕ್ಷನ್ ಕಂಪನಿಯವರು ಎತ್ತಿನಹೊಳೆ ಯೋಜನೆ ಕಾಮಗಾರಿ ತೆಗೆದುಕೊಂಡಿದ್ದು, 548 ಕೋಟಿ ರೂಗಳಿಗೆ 10.ಕಿ.ಮೀ. ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತದೆ. ಇದಾದ ನಂತರ ಮತ್ತೊಂದು ಕಂಪನಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ಅವರಿಗೆ 298 ಕೋಟಿಯಷ್ಟು ನಂತರ ಮತ್ತೊಂದು ಕಂಪನಿ 162 ಕೋಟಿಯಷ್ಟು ಕಾಮಗಾರಿಗೆ ನಡೆಸಲಿದೆ. ಒಟ್ಟು ಎತ್ತಿನಹೊಳೆ ಯೋಜನೆ ಕಾಮಗಾರಿಗಾಗಿ ಒಂದು ಸಾವಿರ ಕೋಟಿಯಷ್ಟು ನೀಡಲಾಗಿದೆ ಎಂದರಲ್ಲದೆ, ಈಗ ಗುದ್ದಲಿಪೂಜೆ ಆಗಿರುವ ಕಾಮಗಾರಿ ಪೂರ್ಣಗೊಳ್ಳಲು ಒಂದು ವರ್ಷವಾದರೂ ಶಂಕರನಾರಾಯಣ ಕಂಪನಿಯವರಿಗೆ ಬೇಕಾಗುತ್ತದೆ. ಒಟ್ಟಾರೆ ಈ ಕಾಮಗಾರಿ ಮುಗಿಸಲು ಎರಡು ವರ್ಷದ ಅವಧಿ ನೀಡಲಾಗಿದೆ ಎಂದರಲ್ಲದೆ, ಮುಖ್ಯಮಂತ್ರಿಗಳು ಕಾಮಗಾರಿಗೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಪರಿಹಾರಕ್ಕಾಗಿ 100ಕೋಟಿಗೆ ಆದೇಶ ನೀಡಿದ್ದಾರೆ ಎಂದರು.
ಈಗಿರುವ ಮಾಹಿತಿ ಪ್ರಕಾರ 0.3 ಟಿ.ಎ.ಸಿ ನೀರನ್ನು ಕೊಡಲಾಗರದ ಬಳಿ ಸ್ಟೋರ್ ಮಾಡಲಾಗುವುದು. 1.56 ಟಿ.ಎಂ.ಸಿ ನೀರಲ್ಲಿ 0.8 ಟಿ.ಎಂ.ಸಿ ನೀರು ಚಿಕ್ಕನಾಯಕನಹಳ್ಳಿಗೆ ದೊರೆಯುತ್ತದೆ ಹಾಗೂ 4.ಟಿ.ಎಂ.ಸಿ ನೀರು ಎತ್ತಿನಹೊಳೆ, ಅಪ್ಪರ್‍ಭದ್ರ್ರಾ, ಹೇಮಾವತಿ ಯೋಜನೆಯಿಂದ ಬಳಸಿಕೊಳ್ಳಲಾಗುತ್ತದೆ ಎಂದರು.
ಎತ್ತಿನಹೊಳೆ ಯೋಜನೆ ಮೂಲಕ ತಾಲ್ಲೂಕಿನ ಕೆರೆಗಳಾದ ಹುಳಿಯಾರಿನ ತಿಮ್ಲಾಪುರ, ಸಿಗೇಬಾಗಿ, ಚಿಕ್ಕಬಿದರೆ, ಬೆಳ್ಳಾರ, ಹೊಯ್ಸಳಕಟ್ಟೆ, ಕೆಂಕೆರೆ, ಹಂದನಕೆರೆ, ಗೋಪಾಲಪುರಕೆರೆ, ಕಂಟಲಗೆರೆಕೆರೆ, ಜೆ.ಸಿ.ಪುರ, ನಾಗೇನಹಳ್ಳಿ ಕೆರೆ, ಕುಪ್ಪೂರು, ಮದನಮಡು, ಕಾತ್ರಿಕೆಹಾಳ್, ಶ್ರಯದ್ ಹೊಸಹಳ್ಳಿ, ಸೀಡ್ಯಾ, ಸಿದ್ದನಕಟ್ಟೆ, ಕಂದಿಕೆರೆ, ನಾಗತಿಕೆರೆ, ಸೇರಿದಂತೆ ಹಲವು ಕೆರೆಗಳಿಗೆ ನೀರು ಹರಿಸಲಾಗುವುದು. ಇದರ ಜೊತೆಗೆ ಬುಕ್ಕಾಪಟ್ಟಣದ 5 ಕೆರೆಗಳನ್ನು ಸೇರಿಸಿಕೊಳ್ಳಲಾಗುವುದು ಎಂದರು.
ಎತ್ತಿನಹೊಳೆ ಯೋಜನೆಯ ಎಇಇ ಎಸ್.ಎಂ.ಕಲಬುರ್ಗಿ ಮಾತನಾಡಿ, ತಾಲ್ಲೂಕು ಸಂಪರ್ಕಿಸುವ ಎತ್ತಿನಹೊಳೆ ಯೋಜನೆಯು ಜಕ್ಕನಹಳ್ಳಿ, ಗ್ಯಾರೆಹಳ್ಳಿ, ತಿಗಳನಹಳ್ಳಿ ಮೂಲಕ ಸಂಪರ್ಕವಾಗುತ್ತದೆ. ಈ ಕಾಮಗಾರಿಯಲ್ಲಿ ಸುಮಾರು 37 ಸೇತುವೆಗಳು ಬರಲಿದ್ದು, ಭೈರಾಪುರ, ಮಲ್ಲೇನಹಳ್ಳಿ, ಮದ್ಲೆಹಳ್ಳಿ, ಅರಳಗುಪ್ಪೆ, ಚೌಡ್ಲಾಪುರ, ಸಿದ್ದನಹಳ್ಳಿ, ಜಕ್ಕನಹಳ್ಳಿ, ತಿಗಳನಹಳ್ಳಿ ಗ್ಯಾರೆಹಳ್ಳಿ ಗ್ರಾಮಗಳಿಗೆ ಸಂಪರ್ಕ ದೊರೆಯುತ್ತದೆ ಎಂದರು. ರೈತರ ಜಮೀನಿಗೆ ಪರಿಹಾರ ನೀಡುವಾಗ ಈಗಿರುವ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ರೈತರಿಗೆ ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ತುರುವೇಕೆರೆ ಶಾಸಕ ಮಸಾಲೆಜಯರಾಂ, ತಾ.ಪಂ.ಸದಸ್ಯ ಕೇಶವಮೂರ್ತಿ, ಮಂಡಲ ಬಿಜೆಪಿ ಕಾರ್ಯದರ್ಶಿ ನಿರಂಜನಮೂರ್ತಿ, ಪ್ರಸನ್ನಕುಮಾರ್ ಸೇರಿದಂತೆ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
