ವ್ಯಾಜ್ಯಗಳ ಶೀಘ್ರ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಸಚಿವರ ಸೂಚನೆ..!

ಬೆಂಗಳೂರು

     ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಲ್ಲಿರುವ ಭೂ ಸ್ವಾಧೀನ ಹಾಗೂ ಹಂಚಿಕೆ ಸಂಬಂಧಿತ ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಇಂದು ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಮುಂದುವರೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅಡಿಯಲ್ಲಿ ಹಲವಾರು ವ್ಯಾಜ್ಯಗಳಿಗೆ ಕೇವಲ ಮಧ್ಯಸ್ಥಿಕೆ ಅವಶ್ಯಕತೆಯಿದೆ. ಇಂತಹ ಪ್ರಕರಣಗಳನ್ನು ವೇಗವಾಗಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಈ ಹಿನ್ನಲೆಯಲ್ಲಿ ಲೋಕ್‌ ಅದಾಲತ್‌ ಮೂಲಕ ಪರಿಹರಿಸಬಹುದಾದ ಪ್ರಕರಣಗಳ ಪಟ್ಟಿಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

   ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಗೆ ಲಾಭ ಹಾಗೂ ಮಂಡಳಿಯ ಬಗ್ಗೆ ನ್ಯಾಯಾಲಯದಲ್ಲಿ ಹಿತಾಸಕ್ತಿ ಕಾಪಾಡುವಂತಹ ಕೆಲಸ  ಮಾಡುವ ಕಾನೂನು ಸಲಹೆಗಾರರ ತಂಡವನ್ನು ರಚಿಸುವಂತೆ ಸಚಿವರು ಸೂಚನೆ ನೀಡಿದರು. ಅಲ್ಲದೆ, ಮಂಡಳಿಯಿಂದ ಭೂಸ್ವಾಧೀನ, ಹಂಚಿಕೆ, ಪರಿಹಾರ ಹಣ ವಿತರಣೆ ಸೇರಿದಂತೆ ಹಲವಾರು ಕಾರ್ಯಗಳಿಗೆ ಒಂದು ಕಾಲಮಿತಿಯ ನಿಯಮಗಳನ್ನು ರೂಪಿಸುವಂತೆ ಸೂಚಿಸಿದರು.

ಕೈಗಾರಿಕಾ ಪ್ರದೇಶಗಳಲ್ಲಿ ಸಮಪರ್ಕ ವಿದ್ಯುತ್‌ ವ್ಯವಸ್ಥೆ:

   ಕೈಗಾರಿಕ ಪ್ರದೇಶಾಭಿವೃದ್ದಿ ಮಂಡಳಿ ಆಯಾ ಪ್ರದೇಶಗಳಲ್ಲಿ ಸಮಪರ್ಕವಾದ ವಿದ್ಯುತ್‌ ವ್ಯವಸ್ಥೆ ದೊರೆಯುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಭೂ ಸ್ವಾಧೀನ ಹಾಗೂ ಹಂಚಿಕೆ ಪ್ರಕ್ರಿಯೆ ಮತ್ತು ಮೂಲಭೂತ ಸೌಕರ್ಯಗಳ ಜೊತೆಯಲ್ಲಿ ಕೈಗಾರಿಕೆಗಳು ಸಮರ್ಪಕವಾಗಿ ಮುನ್ನಡೆಯಲು ಅವಶ್ಯಕವಾಗಿರುವ ವಿದ್ಯುತ್‌, ನೀರಿನಂತಹ ಸೌಲಭ್ಯಗಳನ್ನು ಕಲ್ಪಿಸುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ವಾಟರ್‌ ಸೆಲ್‌ ನ ರೀತಿಯಲ್ಲಿ ಪವರ್ ಸೆಲ್‌ ಕೂಡಾ ರಚಿಸುವಂತೆ ಸೂಚನೆ ನೀಡಿದರು.

ಅದಾಯ ಸಂಗ್ರಹಕ್ಕೆ ಆದ್ಯತೆ ನೀಡಿ:

    ಮಂಡಳಿಯಿಂದ ಈಗಾಗಲೇ ಕೈಗಾರಿಕೆಗಳಿಗೆ ಹಂಚಿಕೆಯಾಗಿರುವ ಭೂಮಿಯಿಂದ ಬರಬೇಕಾಗಿರುವ ಶುಲ್ಕವನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕಾಗಿದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಕೈಗಾರಿಕೆಗಳಿಂದ ಸಂಗ್ರಹಿಸಬೇಕಾಗಿರುವ ಶುಲ್ಕದ ಬಗ್ಗೆ ಗಮನ ನೀಡುವಂತೆ ಸೂಚನೆ ನೀಡಿದರು.

ಭೂ ಹಂಚಿಕೆ ಪತ್ರದ ಶೀಘ್ರ ವಿಲೇವಾರಿ:

   ಕರ್ನಾಟಕ ರಾಜ್ಯದ ಏಕಗವಾಕ್ಷಿ ಮೂಲಕ ಅನುಮತಿ ಪಡೆದಿರುವಂತಹ ಕೈಗಾರಿಕೆಗಳಿಗೆ ಭೂ ಹಂಚಿಕೆ ಪತ್ರವನ್ನು ಕಾಲಮಿತಿಯಲ್ಲಿ ನೀಡಬೇಕು. ಒಟ್ಟಾರೆಯಾಗಿ ಕಾಲಮಿತಿಯ ಹೊಸ ನಿಯಮವನ್ನು ಜಾರಿಗೆ ತರುವುದಲ್ಲದೆ ಕಚೇರಿಯ ಕೆಲಸಗಳಿಗೆ ವೇಗ ನೀಡಿ ಎಂದು ಹೇಳಿದರು.

   ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಹೆಚ್ ಶಿವಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap