ಬೆಂಗಳೂರು
ರೈತ ಮಹಿಳೆಯ ವಿರುದ್ಧ ಸಚಿವ ಜೆ.ಸಿ. ಮಾಧುಸ್ವಾಮಿ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಸಚಿವರೆಂದರೆ ಮಹಾರಾಜರೇನಲ್ಲ ಎಂದು ತಿರುಗೇಟು ನೀಡಿದ್ದಾರೆ .ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧುಸ್ವಾಮಿಯ ಇಂತಹ ವರ್ತನೆ ಇದೇ ಮೊದಲದೇನಲ್ಲ. ಅವರದ್ದು ಈ ರೀತಿ ಇದ್ದೇ ಇರುತ್ತದೆ. ಇದು ಹೊಸದೇನಲ್ಲ. ಈ ಹಿಂದೆಯೂ ಸಹ ಅವರು ಇದೇ ವರ್ತನೆ ತೋರಿದ್ದಾರೆ. ರೈತ ಮಹಿಳೆ ಸಮಸ್ಯೆ ಹೇಳಿಕೊಳ್ಳಲು ಹೋದಾಗ ಅವರ ವಿರುದ್ಧ ದರ್ಪದಿಂದ ಈ ರೀತಿ ನಡೆದುಕೊಂಡಿದ್ದಾರೆ ಎಂದರು.
ಸಚಿವರು ಎಂದರೆ ಮಹಾರಾಜರೇನಲ್ಲ. ಸಚಿವರಿಗೆ ಜನರ ತೆರಿಗೆ ಹಣದಿಂದಲೇ ವೇತನ, ಮನೆ, ಗಾಡಿ ಸಿಗುತ್ತಿದೆ. ವಿಧಾನಸೌಧ ಮಂತ್ರಿಗಳದ್ದೇನಲ್ಲ. ವಿಧಾನಸೌಧ ಇರುವುದು ಜನರಿಂದಾಗಿಯೇ.ಮಾಧುಸ್ವಾಮಿಯ ಇಂತಹ ನಡವಳಿಕೆ ಬಗ್ಗೆ ಮುಖ್ಯ ಮಂತ್ರಿಗಳು ಕ್ರಮ ತೆಗೆದುಕೊಳ್ಳಬೇಕು. ರೈತ ಮಹಿಳೆಯೊಂದಿಗೆ ಮಾಧುಸ್ವಾಮಿ ಕೆಟ್ಟ ರೀತಿಯಲ್ಲಿ ವರ್ತಿಸಿದ್ದು ಖಂಡನೀಯ. ಮಾಧುಸ್ವಾಮಿ ಬಗ್ಗೆ ಯಡಿಯೂರಪ್ಪ ಯಾವುದೇ ಕ್ರಮ ಜರುಗಿಸದೇ ಸುಮ್ಮನೆ ಕೂತರೆ ಮುಖ್ಯಮಂತ್ರಿಗಳ ಘನತೆಯೂ ಕಡಿಮೆಯಾಗಲಿದೆ. ಸರಿಯಾಗಿ ನಡೆದುಕೊಂಡರೆ ಮಾತ್ರ ಎಲ್ಲರಿಗೂ ಶೋಭೆ ತರುತ್ತದೆ. ಯಡಿಯೂರಪ್ಪ ಮೊದಲು ಮಾಧುಸ್ವಾಮಿಯವರ ರಾಜೀನಾಮೆ ಪಡೆಯಬೇಕು ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ