ಎಸ್‍ಡಿಪಿಐ, ಪಿಎಫ್‍ಐ ನಿಷೇಧಕ್ಕೆ ಸಚಿವರ ಒಕ್ಕೊರಲಿನ ಆಗ್ರಹ..!

ಬೆಂಗಳೂರು,

      ರಾಜ್ಯದ ಬಿಜೆಪಿ ಆರ್‍ಎಸ್‍ಎಸ್ ನಾಯಕರ ಹತ್ಯೆಗೆ ಸಂಚು ರೂಪಿಸಿ ನಂತರ ಆರ್‍ಎಸ್‍ಎಸ್ ಕಾರ್ಯಕರ್ತ ವರುಣ್ ಕೊಲೆಗೆ ಯತ್ನಿಸಿದ್ದ ಎಸ್‍ಡಿಪಿಐ ಕಾರ್ಯಕರ್ತರ ಬಂಧನವನ್ನು ರಾಜ್ಯ ಬಿಜೆಪಿ ಪಾಳಯ ಸ್ವಾಗತಿಸಿದ್ದು, ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸುವಂತೆ ರಾಜ್ಯ ಬಿಜೆಪಿಯ ಸಚಿವರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

     ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಈ ಬಗ್ಗೆ ತಮಗೆ ಗೊತ್ತೇ ಇಲ್ಲ ಎಂದಿದ್ದಾರೆ.ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ಈ ಮೊದಲಿನಿಂದಲೂ ನಾವು ಎಸ್‍ಡಿಪಿಐ, ಪಿಎಫ್‍ಐ ಬಗ್ಗೆ ಹೇಳುತ್ತಲೇ ಬಂದಿದ್ದೇವೆ. ಅವರು ಈ ರೀತಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಮಾಡಿಕೊಂಡು ಬಂದಿದ್ದಾರೆ. ಎಸ್‍ಡಿಪಿಐ ಅನ್ನು ಶಾಶ್ವತವಾಗಿ ನಿಷೇಧಿಸಬೇಕು. ಬೇರೆ ಹೆಸರಿನಲ್ಲಿ ಅದು ಮರುಹುಟ್ಟು ಪಡೆಯಲು ಅವಕಾಶ ನೀಡಬಾರದು.

     ದೇಶದ್ರೋಹದ ಇವರ ಕೆಲಸ ಯಾವ ಹಂತಕ್ಕಾದರೂ ಹೋಗಬಹುದು. ಇಂತಹ ಸಂಘಟನೆಗಳನ್ನು ನಿಷೇಧಿಸುವುದೊಂದೇ ಸರಿಯಾದ ಮಾರ್ಗ. ಆಧಾರ ಸಂಗ್ರಹಿಸಿ ನಿಷೇಧಕ್ಕೆ ಆಗ್ರಹಿಸಿ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ. ಈ ಆರು ಜನರ ಬಂಧನ ನಾವು ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಆರೋಪಕ್ಕೆ ಪುಷ್ಟಿ ನೀಡುವಂತಿದೆ. ಇಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸದೇ ಹೋದರೆ ಚುನಾವಣೆ ಸಂದರ್ಭಗಳಲ್ಲಿ ಮತ್ತೆ ಬೇರೆ ಹೆಸರಿನಲ್ಲಿ ಮರುಹುಟ್ಟು ಪಡೆಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ಇತ್ತೀಚೆಗೆ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ದಾಳಿ ಹೆಚ್ಚಾಗಿದೆ. ಇತ್ತೀಚೆಗೆ ಪಿಎಫ್‍ಐ ರುದ್ರೇಶ್ ಮೇಲೆ ಹಲ್ಲೆ ಮಾಡಿತ್ತು. ಈಗ ಎಸ್‍ಡಿಪಿಐ ಆರ್‍ಎಸ್‍ಎಸ್ ಕಾರ್ಯಕರ್ತನನ್ನು ಕೊಲೆ ಮಾಡಲು ಯತ್ನಿಸಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಹಿಂದೆ ನಾನು ಮತ್ತು ಸಂಸದೆ ಶೋಭಾ ಕರಂದ್ಲಾಜೆ ಈ ಎರಡು ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಈ ಬಾರಿ ಸಹ ನಿಷೇಧಕ್ಕೆ ಒತ್ತಡ ಹೇರುತ್ತೇವೆ. ಯಡಿಯೂರಪ್ಪ ಮುಂದಿನ ತಿಂಗಳು ದೆಹಲಿಗೆ ಹೋಗುತ್ತಿದ್ದು, ಅವರೊಂದಿಗೆ ತಾವು ಸಹ ತೆರಳುವುದಾಗಿ ಹೇಳಿದರು.

    ಎಸ್ ಡಿ ಪಿಐ ಕಾರ್ಯಕರ್ತರ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ,ಎಸ್‍ಡಿಪಿಐ ಬಂಧನ ಸರಿಯಾದ ಕ್ರಮವಾಗಿದೆ. ಹಿಂದೆ ಈ ಸಂಘಟನೆಗಳ ಮೇಲೆ ಆರೋಪ ಇತ್ತು. ಈಗ ಸಾಕ್ಷಾಧಾರಗಳನ್ನಾಧರಿಸಿ ಅವರನ್ನು ಬಂಧಿಸಲಾಗಿದೆ. ಪೊಲೀಸರ ಕ್ರಮವನ್ನು ಸ್ವಾಗತಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

      ಎಸ್ ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕಾಗಿರುವುದು ಕೇಂದ್ರ ಸರ್ಕಾರದ ಕೆಲಸ. ಈ ಬಗ್ಗೆ ರಾಜ್ಯದಿಂದ ಶಿಫಾರಸು ಮಾಡಲು ಗೃಹ ಸಚಿವರ ಜೊತೆಗೆ ಮಾತಾಡುವುದಾಗಿ ಹೇಳಿದರು.ಸಚಿವರೆಲ್ಲ ನಿಷೇಧದ ಬಗ್ಗೆ ಸಚಿವರು ಆಗ್ರಹಿಸಿದ್ದಾರಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ಹೆಚ್ಚಾಗಿ ಪ್ರತಿಕ್ರಿಯಿಸದೇ ಜಾಣ ನಡೆ ಅನುಸರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap