ತುಮಕೂರು
ರಾಜ್ಯದಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಪರಿಹಾರ ಕೆಲಸ ಕೈಗೊಳ್ಳುವಂತೆ ಸಚಿವರನ್ನು ಸಂತ್ರಸ್ಥ ನೆರೆ ಜಿಲ್ಲೆಗಳಿಗೆ ಕಳುಹಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ: ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಅತೀವೃಷ್ಠಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸಚಿವರಿಗೆ ಸೂಚಿಸಿದ್ದೇನೆ ಎಂದರು. ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದಿಂದ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ನಾನು ಮುಖ್ಯಮಂತ್ರಿ ಆಗಿದ್ದನ್ನು ಅವ್ರು ನೋಡಿದ್ರೆ ಎಷ್ಟು ಸಂತಸ ಪಡುತ್ತಿದ್ದರು. ಅವರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂದು ಅವರು ತಿಳಿಸಿದರು. ಗದ್ದುಗೆ ದರ್ಶನ ಪಡೆದ ನಂತರ ಮುಖ್ಯಮಂತ್ರಿಗಳು ಸಿದ್ಧಲಿಂಗ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.
ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ನೆರೆ ಸಂತ್ರಸ್ಥರಿಗಾಗಿ ನೆರವಿನ 50ಲಕ್ಷ ರೂ. ಚೆಕ್ಕನ್ನು ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ನೀಡಿದರು. ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಜ್ಯೋತಿಗಣೇಶ್, ಜಯರಾಂ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಸುರೇಶ್‍ಗೌಡ, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಸಿಇಓ ಶುಭಾಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಉಪವಿಭಾಗಾಧಿಕಾರಿ ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.