ಸಚಿವಾಕಾಂಕ್ಷಿಗಳ ಚಟುವಟಿಕೆ ಬಿರುಸು….!!!

ಬೆಳಗಾವಿ

        ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ದೊರೆಯುತ್ತಿದ್ದಂತೆ ಸಚಿವಾಕಾಂಕ್ಷಿಗಳ ಚಟುವಟಿಕೆಗಳು ಕೂಡ ಬಿರುಸುಗೊಂಡಿವೆ.

         ಹಿರಿಯ ಶಾಸಕರು ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸಿ ಲಾಬಿ ಆರಂಭಿಸಿದ್ದಾರೆ. ಇನ್ನು ಕೆಲವು ಶಾಸಕರು ದೆಹಲಿಯಲ್ಲಿ ಪ್ರಭಾವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಮತ್ತಿತರ ನಾಯಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

         ಕೆಲವು ಕಾಂಗ್ರೆಸ್ ಶಾಸಕರು ಪ್ರದೇಶವಾರು, ಜಾತಿವಾರು ಕೋಟಾದಲ್ಲಿ ಸಚಿವ ಸ್ಥಾನ ಕೇಳುತ್ತಿದ್ದಾರೆ. ಆದರೆ, ಡಿಸೆಂಬರ್ 20ರಂದು ರಾಜ್ಯ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸಿದ ಬಳಿಕವಷ್ಟೇ ಹೆಸರು ಅಂತಿಮಗೊಳ್ಳಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಈ ಮಧ್ಯೆ ಇಂದು ಕೆಲವು ಶಾಸಕರು ಬಹಿರಂಗವಾಗಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.

          ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸಚಿವ ಸಂಪುಟದಲ್ಲಿ ಕೋಲಾರಕ್ಕೆ ಇಲ್ಲಿಯವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ತಮಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

           ಇದೇ ತಿಂಗಳ 22 ರಂದು ಸಂಪುಟ ವಿಸ್ತರಣೆಯಾಗಲಿದ್ದು, ತಮಗೆ ಸಚಿವ ಸ್ಥಾನ ನೀಡಬೇಕೆಂದು ಕ್ಷೇತ್ರದ ಜನರು, ಪಕ್ಷದ ಹಿರಿಯರು ಒತ್ತಾಯಿಸಿದ್ದಾರೆ. ಈ ಬಾರಿಯಾದರೂ ಸಚಿವ ಸ್ಥಾನ ನೀಡುತ್ತಾರೆ ಎಂಬ ಆಶಯವಿದೆ.

          ಶಾಸಕಿ ರೂಪಾ ಶಶಿಧರ್ ಕೂಡ ಸಚಿವ ಸ್ಥಾನ ಕೇಳಿದ್ದು, ಸಚಿವ ಸ್ಥಾನ ಕೇಳುವುದು ಅವರ ಹಕ್ಕು. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಅವಕಾಶ ನೀಡುತ್ತದೆಯೋ ಎಂಬುದನ್ನು ಕಾದು ನೋಡಬೇಕು. ಒಟ್ಟಿನಲ್ಲಿ ಕ್ಷೇತ್ರವನ್ನು ಕಡೆಗಣಿಸಬಾರದು. ಅವಕಾಶ ಯಾರಿಗೆ ಸಿಕ್ಕಿದರೂ ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

           ಇನ್ನು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಬೆಳಗಾವಿಯಲ್ಲಿ ಮಾತನಾಡಿ, ತಮಗೆ ಸಚಿವ ಸ್ಥಾನದ ಬಗ್ಗೆ ನಿರೀಕ್ಷೆಯ ಜೊತೆಗೆ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸವೂ ಇದೆ ಎಂದು ಹೇಳಿದ್ದಾರೆ.

           ಡಿ.22ರಂದು ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಇಲ್ಲಿಯವರೆಗೆ ತಮಗೆ ಯಾವುದೇ ಭರವಸೆ ಸಿಕ್ಕಿಲ್ಲ ಎಂದು ಸಚಿವಾಕಾಂಕ್ಷಿಯಾಗಿರುವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಒಟ್ಟಿನಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಯಾರು ಸಫಲರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link