ಮಂತ್ರಿಮಂಡಲ ರಚನೆ : ಲೆಕ್ಕಾಚಾರಗಳನ್ನು ಅಳೆದು ತೂಗಿ ನೋಡುತ್ತಿರುವ ವರಿಷ್ಠರು

ಬೆಂಗಳೂರು:

  ಬಿ.ಎಸ್.ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲ ರಚನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿದ್ದು, ಯಾರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂಬ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ವಲಯದಲ್ಲಿ ಚಿಂತನೆಗಳು ನಡೆದಿವೆ.

  ಆಗಸ್ಟ್ 11ರೊಳಗೆ ಮಂತ್ರಿಮಂಡಲ ವಿಸ್ತರಣೆ ಮಾಡುವುದಾಗಿ ಈ ಹಿಂದೆ ತಿಳಿದು ಬಂದಿತ್ತು. ಪಟ್ಟಿ ಸಿದ್ಧಪಡಿಸಿಕೊಂಡು ದೆಹಲಿಗೆ ಹೋಗಿಬರುವ ದಿನಾಂಕವನ್ನು ಬಿ.ಎಸ್.ಯಡಿಯೂರಪ್ಪ ಆ.5ಕ್ಕೆ ಮುಂದೂಡಿದ್ದರು. ಬಹುತೇಕ ಆ.6 ರಂದು ದೆಹಲಿಗೆ ಮುಖ್ಯಮಂತ್ರಿಗಳು ತೆರಳುವ ಸೂಚನೆಗಳು ಲಭ್ಯವಾಗಿದ್ದು, ಹೈಕಮಾಂಡ್ ಸೂಚಿಸಿರುವ ಮಾನದಂಡದ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ.

  ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 9 ದಿನಗಳಾದರೂ ಇನ್ನೂ ಸಂಪುಟ ರಚನೆಯಾಗಿಲ್ಲ. ಈ ನಡುವೆ ಏಕ ವ್ಯಕ್ತಿ ಸರ್ಕಾರ ರಾಜ್ಯದಲ್ಲಿದೆ ಎಂದು ವಿರೋಧ ಪಕ್ಷಗಳು ಟೀಕಾ ಪ್ರಕಾರ ನಡೆಸುತ್ತಿವೆ. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಬಿ.ಎಸ್.ಯಡಿಯೂರಪ್ಪ ಸಂಪುಟ ರಚನೆಗೆ ಯಾರ್ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಆತುರ ತೋರದೆ ನಿಧಾನಗತಿ ಅನುಸರಿಸುತ್ತಿದ್ದಾರೆ.

   ಯಡಿಯೂರಪ್ಪ ಅವರು ಏನೇ ಪಟ್ಟಿ ಸಿದ್ದಪಡಿಸಿದರೂ ಅದು ಹೈಕಮಾಂಡ್ ಹಂತದಲ್ಲಿಯೇ ತೀರ್ಮಾನವಾಗಬೇಕು. ಸಂಪುಟ ರಚನೆ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಿರುವ ಹೈಕಮಾಂಡ್ ಆಕಾಂಕ್ಷಿಗಳ ಪೂರ್ವಾಪರ, ವಿದ್ಯಾರ್ಹತೆ, ಜಾತಿ, ಪಕ್ಷನಿಷ್ಠೆ ಇತ್ಯಾದಿ ಮಾನದಂಡಗಳನ್ನು ಮುಂದಿಟ್ಟುಕೊಂಡು ಸಚಿವ ಸ್ಥಾನ ನೀಡಬೇಕೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇದೇ ಮಾನದಂಡ ಅನುಸರಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಈಗಾಗಲೇ ಸಿದ್ಧಪಡಿಸಲಾಗಿರುವ ಪಟ್ಟಿಯನ್ನು ಮತ್ತೆ ಪರಿಷ್ಕರಿಸುವ ಅಥವಾ ಅಸಮಾಧಾನ ಉಂಟಾಗದಂತೆ ಏನು ಮಾಡಬೇಕು ಎಂಬ ಬಗ್ಗೆ ಆಂತರಿಕ ಚರ್ಚೆಗಳು ನಡೆದಿವೆ.

    ಈ ನಡುವೆ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಬಿಜೆಪಿ ನಾಯಕರಿಗೆ ಸಹಾಯ ಮಾಡಿದ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅನರ್ಹತೆಗೊಂಡಿರುವ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಎಲ್ಲರೂ ತೀರ್ಪನ್ನು ಕಾಯುತ್ತಿದ್ದಾರೆ. ಆ.10 ರಂದು ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ತೀರ್ಪು ನೋಡಿಕೊಂಡೇ ಪಟ್ಟಿ ಸಿದ್ಧಪಡಿಸಲು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆನ್ನಲಾಗುತ್ತಿದೆ. ಸಂಪುಟ ರಚನೆ ದಿನಾಂಕ ಮುಂದಕ್ಕೆ ಹೋಗಲು ಇದೂ ಸಹ ಒಂದು ಕಾರಣ ಎನ್ನಲಾಗುತ್ತಿದೆ.

   ಮತ್ತೊಂದು ಕಡೆ ಬಿಜೆಪಿ ಪಕ್ಷದಲ್ಲಿ ಮಂತ್ರಿಗಿರಿ ಸ್ಥಾನದ ಆಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಹಿರಿಯ ನಾಯಕರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಬಗ್ಗೆ ಚಿಂತನೆಗಳು ನಡೆದಿವೆಯಾದರೂ ಹಿರಿಯ ನಾಯಕರು ಇದನ್ನು ಒಪ್ಪುತ್ತಾರೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿಯೇ ಪಕ್ಷದ ಹೈಕಮಾಂಡ್ ಹಲವು ಹಿರಿಯ ನಾಯಕರಿಗೆ ಸಂದೇಶ ಕಳುಹಿಸಲು ತಯಾರಿ ನಡೆಯುತ್ತಿರುವ ಬಗ್ಗೆ ಹೇಳಲಾಗುತ್ತಿದೆ.

   ಸಂಪುಟ ರಚನೆ ನಂತರ ಅಸಮಾಧಾನಗಳು ಬಹಿರಂಗವಾಗದಂತೆ ನೋಡಿಕೊಳ್ಳಲು ವ್ಯವಸ್ಥಿತ ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಬಿಜೆಪಿ ವಿರುದ್ಧ ಒಳಗೊಳಗೆ ಕುದಿಯುತ್ತಿರುವ ದೋಸ್ತಿ ಪಕ್ಷಗಳು ಮುಂದೆ ಇದನ್ನೇ ಲಾಭ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರಗಳು ಪಕ್ಷದ ವಲಯದಲ್ಲಿವೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಂಪುಟ ರಚನೆ ಮಾಡಲಾಗುತ್ತಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವದ ವೇಳೆಗೆ ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಸಂಪುಟ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap