ಚಿತ್ರದುರ್ಗ:
ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ ನೀಡಿರುವ ಶೇ.3 ಮೀಸಲಾತಿಯನ್ನು ಶೇ.7.5 ಕ್ಕೆ ಹೆಚ್ಚಿಸುವಂತೆ ರಾಜ್ಯ ಮೈತ್ರಿ ಸರ್ಕಾರವನ್ನು ಆಗ್ರಹಿಸಿ ಕಳೆದ 9 ರಂದು ವಾಲ್ಮೀಕಿ ಗುರುಪೀಠ ರಾಜನಹಳ್ಳಿಯಿಂದ ಹೊರಟ ಪಾದಯಾತ್ರೆ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ವಿವಿಧ ಪಕ್ಷಗಳು ರಾಜಕೀಯ ಮುಖಂಡರು ಹಾಗೂ ಬೇರೆ ಸಮಾಜದವರು ಬೆಂಬಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕಳೆದ 9 ರಂದು ರಾಜನಹಳ್ಳಿಯಿಂದ ಹೊರಟ ಪಾದಯಾತ್ರೆ ಐದು ದಿನಗಳಲ್ಲಿ 90 ಕಿ.ಮೀ.ಪೂರೈಸಿ ಬುಧವಾರ ರಾತ್ರಿ ಮುರುಘಾಮಠದಲ್ಲಿ ವಿಶ್ರಾಂತಿ ಪಡೆದು ಗುರುವಾರ ಬೆಳಿಗ್ಗೆ ಐಮಂಗಲಕ್ಕೆ ಹೊರಟ ಪಾದಯಾತ್ರೆಯಲ್ಲಿ ನಾಯಕ ಸಮಾಜ ಹಾಗೂ ಇತರೆ ಜಾತಿಯವರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಡೊಳ್ಳು, ತಮಟೆ, ಉರುಮೆ ಸದ್ದಿನ ನಡುವೆ ಮೆರವಣಿಯುದ್ದಕ್ಕೂ ವಾಲ್ಮೀಕಿ ಭಾವಚಿತ್ರವುಳ್ಳ ಕೇಸರಿ ಭಾವುಟಗಳು ರಾರಾಜಿಸಿದವು. ದಾವಣಗೆರೆ ರಸ್ತೆ ಮೂಲಕ ಆಗಮಿಸಿದ ಪಾದಯಾತ್ರೆ ಗಾಂಧಿವೃತ್ತ ತಲುಪುತ್ತಿದ್ದಂತೆ ಪಟಾಕಿ ಸಿಡಿಸಿ ನಾಯಕ ಸಮಾಜದವರು ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಶಕ್ತಿ ಪ್ರದರ್ಶಿಸಿದರು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಅಲ್ಲಿಯೂ ಪಟಾಕಿ ಸಿಡಿಸಿ ನಂತರ ರಾಜವೀರಮದಕರಿನಾಯಕ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ ಜೆ.ಸಿ.ಬಿ.ನೆರವಿನಿಂದ ಪ್ರತಿಮೆಗೆ ಬೃಹತ್‍ಗಾತ್ರದ ಮಾಲಾರ್ಪಣೆ ಮಾಡಲಾಯಿತು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಉದ್ಯೋತ ಮತ್ತು ಶಿಕ್ಷಣಕ್ಕಾಗಿ ಮೀಸಲಾತಿಯನ್ನು ಶೇ.7.5 ಕ್ಕೆ ಹೆಚ್ಚಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಾಯಕ ಸಮಾಜ ಪಾದಯಾತ್ರೆ ಹೊರಟಿರುವುದು ಅರ್ಥಪೂರ್ಣವಾಗಿದೆ. ಚುನಾವಣೆ ಸಂದರ್ಭದಲ್ಲಿ ಮೀಸಲಾತಿಯನ್ನು ಹೆಚ್ಚಿಸುವುದಾಗಿ ಆಶ್ವಾಸನೆ ಕೊಟ್ಟು ಈಗ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ನಿಮ್ಮ ಬೇಡಿಕೆ ಈಡೇರಲಿ ಸದಾ ನಿಮ್ಮ ಬೆಂಬಲಕ್ಕಿರುತ್ತೇನೆ ಎಂದು ಭರವಸೆ ನೀಡಿದರು.
ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡುತ್ತ ಯಾವುದೇ ಒಂದು ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಉದ್ಯೋಗ ಮತ್ತು ಶಿಕ್ಷಣ ಬೇಕೆ ಬೇಕು. ಅದರಂತೆ ಮೀಸಲಾತಿಯನ್ನು ಶೇ.3 ರಿಂದ 7.5 ಕ್ಕೆ ಹೆಚ್ಚಿಸುವಂತೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಾಯಕ ಜನಾಂಗ ಬೆಂಗಳೂರಿಗೆ ಪಾದಯಾತ್ರೆ ಹೊರಟಿರುವುದು ನ್ಯಾಯಸಮ್ಮತವಾಗಿದೆ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವೂ ಇದೆ ಎಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಸುರುಪುರ ಶಾಸಕ ರಾಜುಗೌಡ, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಬಿ.ಕಾಂತರಾಜ್, ನಾಯಕ ಸಮಾಜದ ಮುಖಂಡರುಗಳಾದ ಡಿ.ಗೋಪಾಲಸ್ವಾಮಿ ನಾಯಕ, ಹರ್ತಿಕೋಟೆ ವೀರೇಂದ್ರಸಿಂಹ, ಹೆಚ್.ಅಂಜಿನಪ್ಪ, ಸಂಪತ್‍ಕುಮಾರ್, ತಿಪ್ಪೇಸ್ವಾಮಿ, ಸರ್ವೆಬೋರಣ್ಣ, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ನ್ಯಾಯವಾದಿ ಅಶೋಕ್‍ಬೆಳಗಟ್ಟ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಗೋಪಿ, ಪ್ರಶಾಂತ್, ಎ.ಪಿ.ಎಂ.ಸಿ.ಉಪಾಧ್ಯಕ್ಷ ಜಯಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಎನ್.ಡಿ.ಕುಮಾರ್ ಸೇರಿದಂತೆ ನಾಯಕ ಸಮಾಜದ ನೂರಾರು ಮುಖಂಡರುಗಳು ಪಾದಯಾತ್ರೆ ಮೆರವಣಿಯಲ್ಲಿ ಭಾಗವಹಿಸಿದ್ದರು.