ಶೇ7 ರ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ತುಮಕೂರು

   ಕೇಂದ್ರ ಸರಕಾರದ ರೀತಿ ರಾಜ್ಯ ಸರಕಾರವೂ ಪರಿಶಿಷ್ಟ ವರ್ಗದ ಸಮುದಾಯಕ್ಕೆ ಶೇ7 ರ ಮೀಸಲಾತಿ ಕಲ್ಪಿಸಬೇಕು ಹಾಗೂ ಪರಿಶಿಷ್ಟ ವರ್ಗದ ಹೆಸರಿನಲ್ಲಿ ನಕಲಿ ಜಾತಿ ಪತ್ರ ಪಡೆದಿರುವ ವ್ಯಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಶ್ರೀ ವಾಲ್ಮೀಕಿ ನಾಯಕ ಸಮಾಜ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

    ನಗರದ ಟೌನ್‍ಹಾಲ್ ವೃತ್ತದಿಂದ ಹೊರಟ ವಾಲ್ಮೀಕಿ ಸಮುದಾಯದ ಮುಖಂಡರು, ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

     ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶ್ರೀವಾಲ್ಮೀಕಿ ನಾಯಕ ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷೆ ಹಾಗೂ ಜಿ.ಪಂ.ಸದಸ್ಯರಾದ ಶಾಂತಲಾ ರಾಜಣ್ಣ, ಕೇಂದ್ರ ಸರಕಾರ 1968 ರಿಂದಲೂ ನಾಯಕ ಸಮುದಾಯಕ್ಕೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಶೇ7ರ ಮೀಸಲಾತಿ ಕಲ್ಪಿಸುತ್ತಾ ಬಂದಿದೆ. ಆದರೆ ರಾಜ್ಯ ಸರಕಾರ ಇದುವರೆಗೂ ಈ ಸಮುದಾಯಕ್ಕೆ ಶೇ7ರ ಮೀಸಲಾತಿ ಕಲ್ಪಿಸಿಲ್ಲ. ಈ ಸಂಬಂಧ ಗುರುವಾರದಂದು ರಾಜ್ಯದ ಎಲ್ಲಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.

     ನಾಯಕ ಸಮುದಾಯಕ್ಕೆ ಶೇ7ರ ಮೀಸಲಾತಿ ಕಲ್ಪಿಸಬೇಕೆಂಬ ಹತ್ತಾರು ವರ್ಷಗಳ ಈ ಬೇಡಿಕೆಯನ್ನು ಹಲವು ಮುಖ್ಯಮಂತ್ರಿಗಳ ಮುಂದಿಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಬುಡಕಟ್ಟು ಸಮುದಾಯಕ್ಕೆ ಸೇರಿದ ನಾಯಕ ಸಮುದಾಯದ ಹೆಸರಿನಲ್ಲಿ ಹಲವಾರು ಜನ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು, ಸರಕಾರಿ ಉದ್ಯೋಗ ಪಡೆದಿದ್ದು, ಇಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ.

     ಈ ಹಿನ್ನೆಲೆಯಲ್ಲಿ ಹರಿಹರದ ರಾಜನಹಳ್ಳಿ ಶ್ರೀವಾಲ್ಮೀಕಿ ಮಹಾಸಂಸ್ಥಾನದ ಶ್ರೀಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಜೂನ್ 09 ರಿಂದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಮಾಡು ಇಲ್ಲವೇ ಮಡಿ ಎಂದು ಹೋರಾಟಕ್ಕೆ ಎಲ್ಲಾ ನಾಯಕ ಸಮುದಾಯದ ಬಂಧುಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

    ಪ್ರತಿಭಟನೆಯಲ್ಲಿ ವಾಲ್ಮೀಕಿ ವಿದ್ಯಾವರ್ಧಕ ಸಂಘದ ಯಜಮಾನ್ ಭೀಮಯ್ಯ, ಕರ್ನಾಟಕ ವಾಲ್ಮೀಕಿ ಸೇನೆಯ ಅಧ್ಯಕ್ಷ ಪ್ರತಾಪ್ ಮದಕರಿ, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಬಿ.ಜಿ.ಕೃಷ್ಣಪ್ಪ, ಸಮಾಜದ ಮುಖಂಡರಾದ ತು.ಬಿ.ಮಲ್ಲೇಶ್, ಹಾಗಲವಾಡಿ ಕೃಷ್ಣಮೂರ್ತಿ, ಕುಪ್ಪೂರು ರಂಗಪ್ಪನಾಯಕ, ರಾಮಾಂಜನೇಯ, ಜಿ.ಪಂ.ಸದಸ್ಯರಾದ ನಾಗರಾಜು, ರಾಜಣ್ಣ ಬಡ್ಡಿಹಳ್ಳಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap