ತುಮಕೂರು

ತುಮಕೂರು ನಿರ್ಮಿತಿ ಕೇಂದ್ರದಲ್ಲಿ ಅವ್ಯವಹಾರಗಳು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆ 1960ರನ್ವಯ ರಚಿತವಾಗಿರುವ ತುಮಕೂರು ನಿರ್ಮಿತಿ ಕೇಂದ್ರವು ಸಂಘಗಳ ನೋಂದಣಿ ಕಾಯ್ದೆ ನಿಯಮಗಳನ್ನು ಗಆಳಿಗೆ ತೂರಿ ಅದರ ವಿರುದ್ಧವಾಗಿ ರಚನೆ ಮಾಡಿಕೊಂಡಿದ್ದಲ್ಲದೆ, ಬೈಲಾ ನಿಯಮಗಳ ವಿರುದ್ಧವಾಗಿ ಅಧಿಕಾರ ಚಲಾಯಿಸಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ತುಮಕೂರು ನಿರ್ಮಿತಿ ಕೇಂದ್ರದ ಬೈಲಾದ ಪ್ರಕಾರ ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯದರ್ಶಿಯವರು ಅಧ್ಯಕ್ಷರಾಗಿರಬೇಕು. ಆದರೆ ಇಲ್ಲಿ ಜಿಲ್ಲಾಧಿಕಾರಿಯವರು ಅಧ್ಯಕ್ಷರಾಗಿದ್ದಾರೆ. ಬೈಲಾ ನಿಯಾಮವಳಿ ಪ್ರಕಾರ ನಿರ್ಮಿತಿ ಕೇಂದ್ರ ಕ್ರಯ ಪರಿಣಾಮಕಾರಿ ಮನೆಗಳ ನಿರ್ಮಾಣ ಹಾಗೂ ಮನೆಗಳಿಗೆ ಬೇಕಾಗುವ ಉತ್ಪನ್ನಗಳನ್ನು ಮಾಡಲು ಸ್ಕಿಲ್ಡ್ ಲೇಬರ್ಸ್ ಕೌಶಲ್ಯ ತರಬೇತಿ ನೀಡುವುದು ಇದರ ಉದ್ದೇಶವಾಗಿರುತ್ತದೆ. ಆದರೆ ಈ ನಿರ್ಮಿತಿ ಕೇಂದ್ರವು ಉದ್ದೇಶಗಳನ್ನು ಧಿಕ್ಕರಿಸಿ ಇದರ ವಿರುದ್ಧವಾಗಿ ಕಾರ್ಯಕ್ಷೇತ್ರ ಹಮ್ಮಿಕೊಂಡಿರುವುದು ಕಾನೂನು ಬಾಹಿರವಾಗಿರುತ್ತದೆ ಎಂದರು.
ಜಿಲ್ಲಾಧಿಕಾರಿ ಹಾಗೂ ನಿರ್ಮಿತಿ ಕೇಂದ್ರದ ಸದಸ್ಯ ಕಾರ್ಯದರ್ಶಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ನೀಡುವ ಅನುದಾನವನ್ನು ಸದ್ಬಳಕೆ ಮಾಡದೆ ಕಳಪೆ ಕಾಮಗಾರಿಗಳನ್ನು ಮಾಡಿ ನಕಲಿ ಬಿಲ್‍ಗಳನ್ನು ತಯಾರಿಸಿ ವಿವಿಧ ಯೋಜನೆಗಳ ಹಣ ಲಪಟಾಯಿಸಿರುವ ಶಂಕೆ ಇದೆ. ಈ ಸಂಬಂಧ ನಿರ್ಮಿತಿ ಕೇಂದ್ರಕ್ಕೆ 2017-18ನೇ ಸಾಲಿನಲ್ಲಿ 6075.13 ಲಕ್ಷ ರೂಗಳ ವ್ಯವಹಾರ ನಡೆದಿದ್ದು, ಈ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಪಡೆಯಲು ಅರ್ಜಿ ನೀಡಿದರೂ ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನಿರ್ಮಿತಿ ಕೇಂದ್ರದ ಎಲ್ಲಾ ಯೋಜನೆಗಳಿಗೆ ಮಂಜೂರಾದ ಹಣದ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ನಕಲಿ ಆಡಳಿತ ಮಂಡಳಿಯನ್ನು ರದ್ದುಗೊಳಿಸಬೇಕು. ಇವರ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕೇಂದ್ರ ಸರ್ಕಾರದ ಸಿಬಿಐ ಇಲಾಖೆಗೆ ವಹಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಮಾಹಿತಿ ಹಕ್ಕಿನಲ್ಲಿ ಕೋರಲಾದ ದಾಖಲೆ ದೊರೆತ ಕೂಡಲೇ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಾ.ಕೆ.ಟಿ.ಪ್ರಕಾಶ್, ತಾಲ್ಲೂಕು ಕೃಷಿಕ ಸಮಾಜದ ಶಿರಾ ಮಾಜಿ ಅಧ್ಯಕ್ಷ ಕೆ.ತಿಮ್ಮಯ್ಯ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
