ಶಿರಾ:
ನಗರದಲ್ಲಿ ಕಳೆದ 40 ವರ್ಷಗಳಿಂದ ಅಭಿವೃದ್ಧಿ ಕಾಣದೆ ಸೊರಗಿದ್ದ ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ್ ವಿಶೇಷ ಕಾಳಜಿ ವಹಿಸುವ ಮೂಲಕ ಸರ್ಕಾರದಿಂದ ಮಂಜೂರಾದ 1.12 ಕೋಟಿ ರೂ ವೆಚ್ಚದ ಸದರಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿದರು.
ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನಿಡಿದ ನಂತರ ಸುದ್ದಿಗಾರರೊಮದಿಗೆ ಮಾತನಾಡಿದ ಅವರು ದಿನ ನಿತ್ಯ ಸಾವಿರಾರು ಮಂದಿ ಗ್ರಾಮಾಂತರ ಪ್ರದೇಶಗಳಿಂದ ಬಂದು ಹೋಗುವ ಪ್ರಯಾಣಿಕರಿಗೆ ಕೂರಲು ಸರಿಯಾದ ಸ್ಥಳಾವಕಾಶವೂ ಇಲ್ಲದೆ. ಬಸ್ಗಳಿಗೆ ಸರಿಯಾದ ಸ್ಥಳಾವಕಾಶವೂ ಇಲ್ಲದೆ ತುಂಬಾ ಸಮಸ್ಯೆಯಾಗಿದ್ದನ್ನು ಸದರಿ ನಿಲ್ದಾಣದ ಅಭಿವೃದ್ಧಿಗೆ ಕೋಟಿ ರೂಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಅಧಿಕಾರಿಗಳಿಗೆ ಸೂಚನೆ:
ನಗರದಲ್ಲಿನ ಅನೇಕ ರಸ್ತೆಗಳು ಕಳೆದ 10 ವರ್ಷಗಳಿಂದಲೂ ಅಭಿವೃದ್ಧಿ ಕಂಡಿಲ್ಲ. ಇನ್ನೂ ಕೆಲವು ರಸ್ತೆಗಳು ಅಪೂರ್ಣಗೊಂಡಿವೆ. ನಗರಸಭೆಯ ಅಧಿಕಾರಿಗಳಿಗೆ ಇಲ್ಲಿ ಜವಾಬ್ದಾರಿಯೇ ಇಲ್ಲದಂತಾಗಿದೆ. ನಗರದಲ್ಲಿ ಕುಡಿಯುವ ನಿರಿನ ಸಮಸ್ಯೆಯನ್ನು ಸರಿದೂಗಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಅನೇಕ ಅಧಿಕಾರಿಗಳು ಜಿಲ್ಲಾ ಕೇಂದ್ರದಿಂದ ಕಚೇರಿಗೆ ಓಡಾಡುತ್ತಿದ್ದು ಅಂತಹವರು ಮೊದಲು ಶಿರಾ ನಗರದಲ್ಲಿಯೇ ವಾಸ್ತವ್ಯ ಹೂಡುವಂತಾಗಬೇಕು ಎಂದರು.
ಗುತ್ತಿಗೆದಾರನಿಗೆ ತರಾಟೆ:
ಕಳೆದ 10 ವರ್ಷಗಳಲ್ಲಿ ನಗರದಲ್ಲಿ ನಡೆದಿರುವ ಬಹುತೇಕ ರಸ್ತೆ ಕಾಮಗಾರಿಗಳನ್ನು ಒಬ್ಬನೇ ಗುತ್ತಿಗೆದಾರ ನಿರ್ವಹಣೆ ಮಾಡಿದ್ದು ಅನೇಕ ಕಾಮಗಾರಿಗಳು ಕಳಪೆಯಷ್ಟೇ ಅಲ್ಲದೆ ಅಪೂರ್ಣಗೊಂಡಿವೆ. ನಿಗಧಿತ ಸಮಯಕ್ಕೆ ಸರಿಯಾಗಿ ಕಾಮಗಾರಿಗಳನ್ನು ಈ ಗುತ್ತಿಗೆದಾರರು ಪೂರ್ಣಗೊಳಿಸಿಲ್ಲ ಇಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಈ ಕೂಡಲೇ ಶಿಫಾರಸ್ಸು ಮಾಡಲಾಗುವುದು ಎಂದು ಸತ್ಯನಾರಾಯಣ್ ತಿಳಿಸಿದರು.
ಬಿಳಿ ಬಟ್ಟೆ ಹಾಕಿಕೊಂಡು ಓಡಾಡಿದರೆ ಸಾಲದು….!:
ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್ ಸೇರಿದಂತೆ ಕೆಲ ನಗರಸಭಾ ಸದಸ್ಯರು ಗುತ್ತಿಗೆದಾರನ ಪರ ವಕಾಲತ್ತು ವಹಿಸಿಕೊಂಡು ಮಾತನಾಡಿದ್ದನ್ನು ಕಂಡು ಕುಪಿತಗೊಂಡ ಶಾಸಕರು ನಗರಸಭಾ ಸದಸ್ಯರಾದ ನೀವುಗಳು ಗುತ್ತಿಗೆದಾರನಿಂದ ಕೆಲಸ ತೆಗೆದುಕೊಳ್ಳುವುದರಲ್ಲಿ ವಿಫಲಗೊಂಡಿದ್ದೀರಿ. ನಗರಸಭಾ ಚುನಾವಣೆಯಲ್ಲಿ ಗೆದ್ದು ಬಿಳಿ ಬಟ್ಟೆ ಹಾಕಿಕೊಂಡು ಓಡಾಡಿದರಷ್ಟೇ ಜನಪ್ರತಿನಿಧಿಗಳು ಎಂದು ಭಾವಿಸಬೇಡಿ. ಸಾರ್ವಜನಿಕರ ಸೇವಕನಂತೆಯೂ ಕೆಲಸ ಮಾಡಬೇಕು. ನಿಯಮಾನುಸಾರ ಟೆಂಡರ್ ಮೂಲಕ ಕಾಮಗಾರಿ ಕೈಗೊಂಡ ಗುತ್ತಿಗೆದಾರನಿಂದ ಅಭಿವೃದ್ಧಿ ಕೆಲಸ ಮಾಡಿಕೊಳ್ಳುವುದು ನಮ್ಮಗಳ ಕರ್ತವ್ಯವಾಗಬೇಕು. ಕೆಲಸ ಮಾಡದ ಗುತ್ತಿಗೆದಾರನ ವಿರುದ್ಧ ಕೂಡಲೇ ಶಿಸ್ತುಕ್ರಮ ಕೈಗೊಳ್ಳಿ ಎಂದು ಶಾಸಕರು ಛೇಡಿಸಿದರು.
ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್, ತಾ.ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ನಗರಸಭಾ ಸದಸ್ಯರಾದ ಎಸ್.ಜೆ.ರಾಜಣ್ಣ, ಡಿಮಂಜುನಾಥ್, ಪ್ರಕಾಶ್ ಮುದ್ದುರಾಜ್, ನಟರಾಜ್, ನಗರಸಭೆಯ ಮಾಜಿ ಅಧ್ಯಕ್ಷರಾದ ಆರ್.ರಾಘವೇಂದ್ರ, ಆರ್.ರಾಮು, ಡಾ.ಶಂಕರ್, ಮಾರುತೀಶ್, ಎ.ಇ.ಇ. ಸೇತುರಾಮ್ಸಿಂಗ್, ಇಂಜಿನಿಯರ್ ಮಂಜುನಾಥ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.