ಮಧುಗಿರಿ:
ಪಟ್ಟಣಕ್ಕೆ 5 ದಿನಗಳಿಗೊಮ್ಮೆ ಹೇಮಾವತಿ ನೀರು ಪೂರೈಸುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಶಿರಾ ರಸ್ತೆಯ ಸಮೀಪವಿರುವ ಹೇಮಾವತಿ ನೀರು ಹರಿಯುವ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಈಗ ವಾರಕೊಮ್ಮೆ ಹೇಮಾವತಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನೀರು ಹಾಗೂ ವಿದ್ಯುತ್‍ನ ಲಭ್ಯತೆ ಆಧಾರದ ಮೇಲೆ ನೀರು ಹರಿಸಬೇಕು. ಕಳೆದ 3 ದಿನಗಳಿಂದ ಸಿದ್ದಾಪುರದ ಕೆರೆಗೆ ಬಳ್ಳಾಪುರದ ಪಂಪ್ ಹೌಸ್ ನಿಂದ ನೀರನ್ನು ಹರಿಸಲಾಗುತ್ತದೆ. ಕೆರೆಗೆ ಇನ್ನೂ 27 ದಿನಗಳು ಸತತವಾಗಿ ನೀರು ಹರಿಯಲಿದೆ. ನೀರು ಹರಿಸುವ ಜವಾಬ್ದಾರಿಯನ್ನು ಹೊತ್ತಿರುವ ಅಧಿಕಾರಿಗಳು ಕಾಲ ಕಾಲಕ್ಕೆ ಪೈಪ್ ಲೈನ್ ಪರೀಶೀಲಿಸಬೇಕು ಯಾರಾದರೂ ಪೈಪ್ ಲೈನ್‍ಗೆ ಹಾನಿಯುಂಟು ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಹವಾಮಾನ ಇಲಾಖೆಯವರ ಮಾಹಿತಿಯಂತೆ ಈ ಬಾರಿ ಸಾಧಾರಣ ಮಳೆಯಾಗಲಿದೆ. ಈಗ ಹರಿಯುತ್ತಿರುವ ನೀರಿನಿಂದಾಗಿ ಹೆಚ್ಚು ಕಡಿಮೆ ಮೂಕ್ಕಾಲು ಭಾಗದಷ್ಟು ಕೆರೆ ಭರ್ತಿಯಾಗಲಿದೆ. ಚೋಳೆನಹಳ್ಳಿಯ ಕೆರೆಯ ತೂಬಿನ ಮೂಲಕ ನೀರು ಹರಿಸಿಕೊಳ್ಳುತ್ತಿರುವ ಬಗ್ಗೆ ನನಗೆ ದೂರು ಬಂದಿದ್ದು ಸತ್ಯಾಸತ್ಯತೆಯನ್ನು ಅಧಿಕಾರಿಗಳು ಪರಿಶೀಲಿಸಿ ಅಂತಹವರ ಬಗ್ಗೆ ಪೊಲೀಸರು ಹಾಗೂ ಪುರಸಭೆ ಮತ್ತು ಸಣ್ಣ ನೀರಾವರಿ ಇಲಾಖೆಯವರು ಕ್ರಮಕೈಗೊಳ್ಳಬೇಕು ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಹೊರತು ಪಡಿಸಿ ಇತರೆ ಕಾರ್ಯಗಳಿಗೆ ಈ ನೀರನ್ನು ಬಳಸುವುದು ಬೇಡ ಹಾಗೂ ಕೆರೆಯ ತೂಬನ್ನು ಎತ್ತದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.
ಪುರಸಭೆಯ ಮುಖ್ಯಾಧಿಕಾರಿ ಎಂ.ಅಮರನಾರಾಯಣ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೆ.ಮಾ.ನಾಗಭೂಷಣ್, ಪುರಸಭೆಯ ಇಂಜಿನಿಯರ್ ಶ್ರೀರಂಗ, ಸಿಪಿಐ ಎಂ.ಎಸ್.ಸರ್ದಾರ್, ಪಿಎಸ್‍ಐ ಕಾಂತರಾಜು ಪುರಸಭಾ ಸದಸ್ಯ ಎಂ.ಎಸ್.ಚಂದ್ರಶೇಖರ್ ಮುಖಂಡರಾದ ಮಂಜುನಾಥ್, ಕಂಬತ್ತನಹಳ್ಳಿ ರಘು, ಡಿವಿಹಳ್ಳಿ ಪ್ರಭು ಶೈಲಿ ರವಿ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
