ಚಿತ್ರದುರ್ಗ:
ಭದ್ರಾ ಯೋಜನೆಯ ಕೆಲಸ ಚಿತ್ರದುರ್ಗ ತಾಲೂಕಿನಲ್ಲಿ ಆರಂಭಗೊಂಡಿದ್ದು, ಎಲ್ಲೆಲ್ಲಿ ಜಮೀನುಗಳನ್ನು ವಶಪಡಿಸಿಕೊಳ್ಳಲಾಗುವುದು ಎನ್ನುವ ಮಾಹಿತಿಯಿಲ್ಲದೆ ಆತಂಕದಲ್ಲಿರುವ ರೈತರಿಗೆ ಮಾಹಿತಿ ನೀಡುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗುರುವಾರ ರೆಡ್ಡಿ ಜನಸಂಘದ ಪ್ರಧಾನ ಕಾರ್ಯಾಲಯದಲ್ಲಿ ಅಪ್ಪರ್‍ಭದ್ರಾ ಯೋಜನೆಯ ಇ.ಇ. ಹಾಗೂ ಎ.ಇ.ಇ.ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ತಾಲೂಕಿನ ರೈತರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಗೋನೂರು ಕಲ್ಲೇನಹಳ್ಳಿ ನಡುವೆ ಆರಂಭಗೊಂಡಿರುವ ಕಾಮಗಾರಿ ಬೆಳಗಟ್ಟ, ಹಾಯ್ಕಲ್, ರಾಮಜೋಗಿಹಳ್ಳಿ, ದ್ಯಾಮವ್ವನಹಳ್ಳಿ, ಕಾಸವರಹಟ್ಟಿ ಪ್ಯಾಕೇಜ್ ಲೆವೆನ್-1 ಐಮಂಗಲ ಸಬ್‍ಡಿವಿಷನ್‍ಗೆ ಸೇರಿದ್ದು, ಗೋನೂರು, ದೊಡ್ಡಸಿದ್ದವ್ವನಹಳ್ಳಿ, ಕುಂಚಿಗನಹಾಳ್, ದ್ಯಾಮವ್ವನಹಳ್ಳಿ ಪ್ಯಾಕೇಜ್ ಲೆವೆನ್-2 ಬುರುಜನರೊಪ್ಪ ಸಬ್‍ಡಿವಿಷನ್‍ಗೆ ಒಳಪಟ್ಟಿದ್ದು, ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಂಡು ತಾಲೂಕಿಗೆ ನೀರು ಹರಿದು ಬರಲಿ. ಅದಕ್ಕಾಗಿ ಲೆವೆನ್-ಓನ್ ನೋಟಿಫಿಕೇಷನ್ ಜಿಲ್ಲಾಧಿಕಾರಿಗೆ ಹೋಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇ.23 ರ ನಂತರ ಹೊರಬರಲಿದೆ ಎಂದು ಇಂಜಿನಿಯರ್‍ಗಳಿಗೆ ಹೇಳಿದರು.
ಭದ್ರಾ ಯೋಜನೆ ಕೆಲಸ ತಾಲೂಕಿನಲ್ಲಿ ಆರಂಭಗೊಂಡಿರುವುದರಿಂದ ರೈತರು ಸಂತೋಷವಾಗಿದ್ದಾರೆ. ಆದರೆ ಎಲ್ಲೆಲ್ಲಿ ಭೂಮಿ ವಶಪಡಿಸಿಕೊಳ್ಳಲಾಗುತ್ತದೆ. ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಸಿಗುತ್ತದೋ ಇಲ್ಲವೋ ಎನ್ನುವ ಭಯ ಕೆಲವು ರೈತರಲ್ಲಿದೆ. ಯಾರು ಗಾಬರಿಯಾಗುವುದು ಬೇಡ. ಚುನಾವಣೆ ನೀತಿ ಸಂಹಿತೆ ಮುಗಿದ ಮೇಲೆ ಜಿಲ್ಲಾಧಿಕಾರಿ, ಅಪರ ಭದ್ರಾ ಇಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಪೂರ್ಣವಾದ ಮಾಹಿತಿ ನೀಡುವಂತೆ ಸೂಚಿಸಲಾಗುವುದು ಎಂದು ಹೇಳಿದ ಶಾಸಕರು ಕೆಲವು ಕಡೆ ಜಮೀನು ಬೆಲೆ ಮೂವತ್ತು ಲಕ್ಷ ರೂ.ಗಳಷ್ಟಿದೆ. ಇನ್ನು ಕೆಲವು ಕಡೆ ಹದಿನೈದು ಲಕ್ಷ ರೂ.ಗಳಷ್ಟಿದೆ. ಸಬ್‍ರಿಜಿಸ್ಟರ್ ಮೌಲ್ಯ ಒಂದು ಲಕ್ಷದಿಂದ ಎರಡುವರೆ ಲಕ್ಷದಷ್ಟಿದೆ. ಇದರಿಂದ ರೈತರಿಗೆ ನಷ್ಟವಾಗಲಿದೆ. ಹಾಗಾಗಿ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ರೈತರಿಗೆ ಭರವಸೆ ನೀಡಿದರು.
ಭದ್ರಾ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಂಡು ತಾಲೂಕಿಗೆ ನೀರು ಹರಿದು ಬರಲಿ ಎನ್ನುವ ಕಾರಣಕ್ಕಾಗಿ ರೈತರು ಮತ್ತು ನಾವು ನಿಮ್ಮೊಂದಿಗೆ ಸಹಕರಿಸಲು ತೀರ್ಮಾನಿಸಿದ್ದು, ಶೀಘ್ರವಾಗಿ ಕೆಲಸ ಮುಗಿಸಿ ಎಂದು ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸುವುದಕ್ಕಾಗಿ ಮೇ.23 ರ ನಂತರ ಜಿಲ್ಲಾಧಿಕಾರಿ ಜೊತೆ ಚರ್ಚಿಸುವುದಾಗಿ ತಿಳಿಸಿದರು.
ಭೂಮಿ ವಶಪಡಿಸಿಕೊಳ್ಳುವ ಸಂಬಂಧ ನಮಗೆ ಇದುವರೆವಿಗೂ ಯಾವುದೇ ನೋಟಿಸ್ ಬಂದಿಲ್ಲ. ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಪರಿಹಾರ ಸಿಗುತ್ತದೋ ಇಲ್ಲವೋ ಎನ್ನುವ ಭಯ ನಮ್ಮನ್ನು ಕಾಡುತ್ತಿದೆ ಎಂದು ಕೆಲವು ರೈತರು ಶಾಸಕರಲ್ಲಿ ತಮ್ಮ ಅಳಲು ತೋಡಿ ಕೊಂಡಾಗ ಯಾವುದೆ ಕಾರಣಕ್ಕೂ ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದರು.ಅಪ್ಪರ್‍ಭದ್ರಾ ಯೋಜನೆಯ ಇಂಜಿನಿಯರ್‍ಗಳು, ಗೋನೂರು, ಕಲ್ಲೇನಹಳ್ಳಿ, ಬೆಳಗಟ್ಟ, ಹಾಯ್ಕಲ್, ರಾಮಜೋಗಿಹಳ್ಳಿ, ದ್ಯಾಮವ್ವನಹಳ್ಳಿ, ಕಾಸವರಹಟ್ಟಿ, ಕುಂಚಿಗನಹಾಳ್‍ನ ಕೆಲವು ರೈತರು ಸಭೆಯಲ್ಲಿ ಭಾಗವಹಿಸಿದ್ದರು.