ಪ್ರಸಾದ ತಿಂದು ಅಸ್ವಸ್ಥರಾದವರನ್ನು ಪರಾಮರ್ಶಿಸಿದ ಶಾಸಕರು

ತುಮಕೂರು

      ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಸುಮಾರು 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು ಅದರಲ್ಲಿ 45 ಮಂದಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮದಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಏ.27ರ ಶನಿವಾರ ಸಂಜೆ ಅದೇ ಗ್ರಾಮದ ಮರಿಯಣ್ಣ ಎಂಬುವರು ದೇವರಿಗೆ ಪೂಜೆ ಮಾಡಿಸಿ ಎಲ್ಲರಿಗೂ ಅನ್ನ, ಸಾಂಬರ್ ಹಾಗೂ ಸಿಹಿ ಪದಾರ್ಥದ ಊಟವನ್ನು ಹಾಕಿಸಿದ್ದರು. ಶನಿವಾರ ಊಟ ಮಾಡಿದ್ದವರು ಅಸ್ವಸ್ಥರಾಗಿ ಹೊಟ್ಟೆನೋವು, ವಾಂತಿ ಭೇದಿಯಿಂದ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

       ಭಾನುವಾರ ಮಧ್ಯಾಹ್ನ ಕೆಲ ಮಂದಿ ವಾಂತಿ ಬೇಧಿ ಹೆಚ್ಚಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಲ್ಲಿ ಮತ್ತಷ್ಟು ಜನರ ಸ್ಥಿತಿ ತೀವ್ರತರವಾಗಿದ್ದು, ಅವರನ್ನು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.ಅಸ್ವಸ್ಥರ ಬಗ್ಗೆ ಮಾಹಿತಿ ಪಡೆದಿದ್ದ ಶಿರಾ ಕ್ಷೇತ್ರದ ಶಾಸಕ ಬಿ.ಎಸ್.ಸತ್ಯನಾರಾಯಣ ಸೋಮವಾರದಂದು ಬೆಳಗ್ಗೆ ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದರು. ನಂತರ ವೈದ್ಯರ ಬಳಿ ಸಮಾಲೋಚನೆ ನಡೆಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ತಿಳಿಸಿದರು.

         ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶನಿವಾರ ರಾತ್ರಿ ದೇವಸ್ಥಾನದಲ್ಲಿ ಊಟ ಮಾಡಿದ ಭಕ್ತರಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಅದರಲ್ಲಿ ಕೆಲ ಮಂದಿಯನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಅವರನ್ನು ವಿಚಾರಣೆ ಮಾಡಲಾಗಿದೆ. ಎಲ್ಲರೂ ಕ್ಷೇಮವಾಗಿದ್ದಾರೆ. ಯಾವುದೇ ಪ್ರಾಣಾಪಯಗಳಿಲ್ಲ. ಅವರೆಲ್ಲರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.

         ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಸಹ ಗುಣುಮುಖರಾಗುತ್ತಿದ್ದಾರೆ. ಈ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರಲ್ಲದೆ, ದೇವಾಲಯದಲ್ಲಿ ಪ್ರಸಾದಕ್ಕೆ ತಯಾರಿಸಿದ್ದ ಆಹಾರವನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ಈ ಘಟನೆಗೆ ಕಾರಣ ತಿಳಿಯಲಿದೆ. ಇನ್ನು ಮುಂದೆ ದೇವಾಲಯಗಳಲ್ಲಾಗಲೀ ಅಥವಾ ಇತರೆ ಖಾಸಗಿ ಕಾರ್ಯಕ್ರಮ ಗಳಲ್ಲಾಗಲೀ ಅಡುಗೆ ಭಟ್ಟರು ಅಡುಗೆ ಮಾಡುವ ಮುನ್ನ ಆಹಾರ ಪದಾರ್ಥಗಳನ್ನು ಕೂಲಂಕುಷವಾಗಿ ಪರೀಕ್ಷಿಸಿ ಎಚ್ಚರಿಕೆಯಿಂದ ಅಡುಗೆಗೆ ಬಳಸಬೇಕು ಎಂದು ಸಲಹೆ ನೀಡಿದರು.

       ಸಂಜೆವೇಳೆಗೆ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ, ಶಿರಾ ತಾಲ್ಲೂಕಿನ ಬಿಜೆಪಿ ಮುಖಂಡ ಎಸ್.ಆರ್.ಗೌಡ ಸೇರಿದಂತೆ ಇನ್ನಿತರರು ತುಮಕೂರು ಜಿಲ್ಲಾಸ್ಪತ್ರೆಗೆ ಆಗಮಿಸಿ ಅಸ್ವಸ್ಥರ ಆರೋಗ್ಯದ ವಿಚಾರಿಸಿದರು.

      ನಂತರ ಮಾತನಾಡಿದ ಶಾಸಕ ಮಾಧುಸ್ವಾಮಿ, ಪೂಜೆಯ ನಂತರ ಬಡಿಸಿದ ಅನ್ನ ಪ್ರಸಾದಲ್ಲಿ ಬೇಳೆ ಪಾಯಸದಿಂದ ಸ್ವಲ್ಪ ಏರು ಪೇರು ಉಂಟಾಗಿ ಸುಮಾರು ಮಂದಿಗೆ ವಾಂತಿ ಬೇಧಿಗಳಾಗಿವೆ. ಅವರನ್ನು ಶಿರಾ, ಕಳ್ಳಂಬೆಳ್ಳ ಸೇರಿದಂತೆ ತುಮಕೂರು ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಅವರ ಆರೋಗ್ಯ ಸುಧಾರಣೆಯಾಗುತ್ತಿದೆ. ವೈದ್ಯರು ಉತ್ತಮ ರೀತಿಯಲ್ಲಿ ಸ್ಪಂಧಿಸಿ ರೋಗಿಗಳು ಗುಣಮುಖರಾಗಲು ಶ್ರಮಿಸಿದ್ದಾರೆ ಎಂದರು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾರವಿಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಚಂದ್ರಿಕಾ, , ಜಿ.ಪಂ. ಮಾಜಿ ಸದಸ್ಯ ಮುದಿಮಡು ರಂಗಸ್ವಾಮಯ್ಯ, ಆರ್‍ಎಂ ವೀಣಾ ಸೇರಿದಂತೆ ಇನ್ನಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap