ಶಿರಾ:
ಈ ಹಿಂದೆ ನಾನು ಸಚಿವನಾಗಿದ್ದಾಗ ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಲಾಗುವ 1008 ಮನೆಗಳ ನಿರ್ಮಾಣ ಕಾರ್ಯ ಬರದಿಂದ ಸಾಗಿದ್ದು ಮುಂದಿನ ವರ್ಷದ ಡಿಸೆಂಬರ್ ಅಂತ್ಯಕ್ಕೆ ಈ ಎಲ್ಲಾ ಮನೆಗಳ ನಿರ್ಮಾಣ ಪೂರ್ಣಗೊಂಡು ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯಲಿದ್ದು ಅರ್ಹರಿಗೆ ಸೂರು ನೀಡುವ ಕೆಲಸ ಯಾವುದೇ ಜನಪ್ರತಿನಿಧಿಗಳಿಂದ ಪ್ರಾಮಾಣಿಕವಾಗಿ ನಡೆಯಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ನಗರದ ಹೊರ ವಲಯದಲ್ಲಿರುವ ಸ.ನಂ.103/2ಪಿ ಸರ್ಕಾರಿ ಜಮೀನಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಗುಂಪು ಮನೆಯ ಸಮುಚ್ಚಯಕ್ಕೆ ಗುರುವಾರ ಭೇಟಿ ನೀಡಿದ ಮಾಜಿ ಸಚಿವ ಜಯಚಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ನಾನು ಸಚಿವನಾಗಿದ್ದಾಗ ಸುಮಾರು 2,000ಕ್ಕೂ ಹೆಚ್ಚು ಅರ್ಹರಿಗೆ ಸೂರು ನೀಡುವ ಚಿಂತನೆ ಕೈಗೊಂಡ ಪರಿಣಾಮ ಕೇಂದ್ರ ಸರ್ಕಾರದ ಸದರಿ ಯೋಜನೆಯು ನಮಗೆ ನೆರವಾಯಿತು. ಸುಮಾರು 10 ಎಕರೆ ಸರ್ಕಾರಿ ಜಮೀನಿನಲ್ಲಿ ಕಳೆದ ಎರಡು ವರ್ಷದ ಹಿಂದೆಯೇ ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿಯಲ್ಲಿ ಭೂಮಿ ವಶಪಡಿಸಿಕೊಂಡು ಅರ್ಹರನ್ನು ಗುರ್ತಿಸಲಾಗಿದೆ. 55.63 ಕೋಟಿ ರೂಗಳ ವೆಚ್ಚದಲ್ಲಿ ಗುಂಪು ಮನೆಗಳ ಸಮುಚ್ಚಯದ ಕಾಮಗಾರಿ ಆರಂಭಗೊಂಡಿದೆ. 1,50,000 ರೂಗಳ ಸಹಾಯ ಧನವನ್ನು ಕೇಂದ್ರವೇ ಭರಿಸಲಿದ್ದು ಪ.ಜಾತಿ ಮತ್ತು ಪ.ಪಂ.ದ ಫಲಾನುಭವಿಗಳು 1,20,000 ರೂ ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳು 3 ಲಕ್ಷ ರೂಗಳನ್ನು ಕಂತಿನ ಆಧಾರದಂತೆ ಸರ್ಕಾರಕ್ಕೆ ಭರಿಸಬೇಕಾಗುತ್ತದೆ ಎಂದು ಜಯಚಂದ್ರ ತಿಳಿಸಿದರು.
ರಾಮಲಿಗಂ ಕನ್‍ಸ್ರಕ್ಷನ್ ವತಿಯಿಂದ ಮನೆಗಳ ನಿರ್ಮಾಣ ಕಾರ್ಯ ನಡೆದಿದ್ದು ಕಳೆದ 6 ತಿಂಗಳಲ್ಲಿ 84 ಪ್ಲಾಟ್‍ಗಳಲ್ಲಿ ಈಗಾಗಲೇ 73 ಪ್ಲಾಟ್‍ಗಳ ಅಡಿ ಪಾಯದ ಕಾಮಗಾರಿ ಪೂರ್ಣಗೊಂಡಿದ್ದು 2020 ರ ಡಿಸೆಂಬರ್ ಅಂತ್ಯದೊಳಗೆ 1008 ಮನೆಗಳು ಕೂಡಾ ಪೂರ್ಣಗೊಳ್ಳಲಿವೆ ಎಂದರು.
ಇದೇ ರೀತಿಯಲ್ಲಿ ಶಿವಾಜಿ ನಗರ ಬಡಾವಣೆಯಲ್ಲೂ 450 ಮನೆಗಳು ಇದೇ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಅರ್ಹರಿಗೆ ಸೂರು ಲಭ್ಯವಾಗುವುದರಲ್ಲಿ ಎರಡು ಮಾತಿಲ್ಲ. ನಾನು ಕಳೆದ ಚುನಾವಣೆಯಲ್ಲಿ ಸೋತೆನೆಂದು ಸುಮ್ಮನೇ ಕೂರುವ ವ್ಯಕ್ತಿಯಲ್ಲ ಎಂದರು.ಕೆಲ ಜನಪ್ರತಿನಿಧಿಗಳು ಸೋತರೂ ಜಯಚಂದ್ರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ಸೋತೆನೆಂದು ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ. ಈ ಹಿಂದೆ 3 ಚುನಾವಣೆಗಳಲ್ಲಿ ಸೋತಾಗಲೂ ನಾನು ಎದೆಗುಂದಿದವನಲ್ಲ. ಈಗಲೂ ಅಷ್ಟೇ ಈ ಹಿಂದೆ ನಾನು ಕೈಗೊಂಡ ಅಭಿವೃದ್ಧಿ ಕೆಲಸಗಳ ಬೆನ್ನು ಹತ್ತಿ ಹೊರಟಿದ್ದೇನೆ ಎಂದರು.
ಆಡಳಿತ ಪಕ್ಷವಿದ್ದಾಗ ವಿರೋಧ ಪಕ್ಷದವರು ಸುಮ್ಮನೇ ಕೂತಿರಬೇಕು ಎಂಬ ನಿಯಮವೇನೂ ಇಲ್ಲ. ನಾನು ಕಳೆದ ಚುನಾವಣೆಯಲ್ಲಿ ಸುಮಾರು 10,000 ಮತಗಳಿಂದ ಸೋತಿರಬಹುದು ಆದರೆ ನನಗೆ 65,000 ಮತ ಹಾಕಿದ ಜನರಿಗೆ ಏನು ಉತ್ತರ ಹೇಳಬೇಕು?. ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಈ ಹಿಂದೆ ನಾನು ಸೋತಿದ್ದೇನೆಂದು ಮನೆಯಲ್ಲಿ ಕೂತಿದ್ದರೆ ಶಿರಾ, ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ಹರಿಸಲಾಗುತ್ತಿರಲಿಲ್ಲ
ಹೀಗಾಗಿಯೇ ಕ್ಷೇತ್ರದಲ್ಲಿ ನಾನು ಅಭಿವೃದ್ಧಿಯ ಬೆನ್ನು ಹತ್ತಿದ್ದೇನೆ. ಕ್ಷೇತ್ರದ ಹಾಲಿ ಶಾಸಕರಿಂದ ನಾನು ನೀತಿ ಪಾಠ ಕಲಿಯಬೇಕಾಗಿಲ್ಲ ಎಂದು ಪರೋಕ್ಷವಾಗಿ ಶಾಸಕ ಬಿ.ಸತ್ಯನಾರಾಯಣ್ ಅವರ ಹೇಳಿಯೊಂದರ ವಿರುದ್ಧ ಪ್ರತಿ ಹೇಳಿಕೆ ನೀಡಿದರು.ರಾಮಲಿಂಗಂ ಕನ್‍ಸ್ರಕ್ಷನ್‍ನ ಇಂಜಿನಿಯರ್ ವಿ.ಎಸ್.ಹನುಮಂತರೆಡ್ಡಿ, ಕಾಂಗ್ರೆಸ್ ಮುಖಂಡರಾದ ಕೋಟೆ ಲೋಕೇಶ್, ಪಿ.ಬಿ.ನರಸಿಂಹಯ್ಯ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








