ಶಿರಾ
ನಗರದ ಅಂತರ್ಜಲವನ್ನು ವೃದ್ಧಿಸುವ ಜಾಜಮ್ಮನಕಟ್ಟೆಯ 1.60 ಕೋಟಿ ರೂಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಯ ಸ್ಥಳಕ್ಕೆ ಶಾಸಕ ಬಿ.ಸತ್ಯನಾರಾಯಣ್ ಶುಕ್ರವಾರ ಭೇಟಿ ನೀಡಿದರು.ಜಾಜಮ್ಮನಕಟ್ಟೆ ಅಭಿವೃದ್ಧಿ ಸ್ಥಳಕ್ಕೆ ಭೇಟಿ ನೀಡಿದ ಸತ್ಯನಾರಾಯಣ್ ಕಟ್ಟೆಯ ಏರಿಯ ನೆಲಹಾಸು, ಏರಿ ಭದ್ರಪಡಿಸಿರುವ ಕಾಮಗಾರಿ ವೀಕ್ಷಣೆ ಮಾಡಿದರು.
ಕಾಮಗಾರಿ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ನಗರದ ಜಾಜಮ್ಮನಕಟ್ಟೆ ಶಿರಾ ನಗರದ ಜೀವನಾಡಿಯೂ ಹೌದು. ಸದರಿ ಕಟ್ಟೆಗೆ ಮಳೆಯ ನೀರು ಹರಿದು ಬಂದರೆ ನಗರದ ಕೊಳವೆ ಬಾವಿಗಳ ಅಂತರ್ಜಲವೂ ವೃದ್ಧಿಸುತ್ತದೆ ಎಂಬುದು ಕೂಡಾ ಈಗಾಗಲೇ ಸಾಬೀತಾಗಿದೆ. ಆದರೆ ಪ್ರಸಕ್ತ ವರ್ಷ ಮಳೆ ಹೆಚ್ಚು ಬಾರದೆ ಕಟ್ಟೆಯಲ್ಲಿ ನೀರು ಶೇಖರಣೆಯಾಗಿಲ್ಲ ಎಂದರು.
ಮಳೆಗಾಲದಲ್ಲಿ ಸದರಿ ಕಟ್ಟೆಯು ಭರ್ತಿಯಾದಾಗ ನಗರದ ಸಾರ್ವಜನಿಕರಿಗೆ ಅನುಕೂಲವಾಗಲಿ ಅನ್ನುವ ದೃಷ್ಟಿಯಿಂದ ಕಟ್ಟೆಯ ಅಭಿವೃದ್ಧಿ ಕಾರ್ಯವನ್ನು 1.60 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ಜಾಜಮ್ಮನಕಟ್ಟೆಯ ಒತ್ತುವರಿಯನ್ನು ಗುರ್ತಿಸಲಾಗಿದ್ದು, ಆ ನಂತರವೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಸಪ್ತಗಿರಿ ಬಡಾವಣೆಗೆ ಹೊಂದಿಕೊಂಡಂತೆ ಒಂದಿಷ್ಟು ಒತ್ತುವರಿ ತೆರವುಗೊಳಿಸುವುದು ಅನಿವಾರ್ಯವಾಗಿದ್ದು ಕಟ್ಟೆಯ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಲಾಗುವುದು. ಸದರಿ ಕಾಮಗಾರಿ ನಿರ್ವಹಣೆಯನ್ನು ಸಣ್ಣ ನೀರಾವರಿ ಇಲಾಖೆ ಕೈಗೊಂಡಿದೆ ಎಂದು ಶಾಸಕರು ತಿಳಿಸಿದರು.
ನಗರಸಭೆಯ ಮಾಜಿ ಅಧ್ಯಕ್ಷರಾದ ಆರ್.ರಾಘವೇಂದ್ರ, ಆರ್.ರಾಮು, ಎ.ಪಿ.ಎಂ.ಸಿ. ಅಧ್ಯಕ್ಷ ನರಸಿಂಹಯ್ಯ, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಲಕ್ಕನಹಳ್ಳಿ ಮಂಜುನಾಥ್, ಹಂದಿಕುಂಟೆ ಚಂದ್ರಶೇಖರ್, ತಿಮ್ಮೇಗೌಡ, ಪುಟ್ಟಸಿದ್ಧಪ್ಪ, ನಗರಸಭೆಯ ಇಂಜಿನಿಯರ್ ಮಂಜುನಾಥ್ ಸೇರಿದಂತೆ ಸೂಡಾ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ದೊಡ್ಡ ಕೆರೆಗೆ ಶಾಸಕರ ಭೇಟಿ
ಕೆರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ರಾವತನಹಳ್ಳಿ ಎಸ್ಕೇಪ್ ಗೇಟ್‍ನಿಂದ ಕಳ್ಳಂಬೆಳ್ಳ ಕೆರೆಗೆ ಹೇಮಾವತಿಯ ನೀರು ಈಗಲೂ ಹರಿದು ಬರುತ್ತಿದ್ದು ಕಳ್ಳಂಬೆಳ್ಳ ಕೆರೆಯಿಂದ ಶಿರಾ ಕೆರೆಯನ್ನು ತುಂಬಿಸಿಕೊಳ್ಳಲಾಗುತ್ತಿದೆ ಎಂದರು.ಜನವರಿ ತಿಂಗಳ ಅಂತ್ಯದವರೆಗೂ ಹೇಮಾವತಿಯ ನೀರು ಹರಿಯುವ ಸಾಧ್ಯತೆ ಇದ್ದು, ಶಿರಾ ಕಳ್ಳಂಬೆಳ್ಳ ಕೆರೆಗಳನ್ನು ತುಂಬಿಸಿಕೊಳ್ಳುವುದರ ಜೊತೆಗೆ ಮದಲೂರು ಕೆರೆಗೂ ನೀರು ಹರಿಸುವುದು ನಮ್ಮ ಮೂಲ ಉದ್ದೇಶ ಎಂದು ಶಾಸಕರು ತಿಳಿಸಿದರು.
ಹೇಮಾವತಿಯ ನೀರಿನ ಜೊತೆಗೆ ವರುಣನ ಕೃಪೆ ಇದ್ದಿದ್ದರೆ ಇಷ್ಟೊತ್ತಿಗೆ ಕಳ್ಳಂಬೆಳ್ಳ, ಶಿರಾ ಹಾಗೂ ಮದಲೂರು ಕೆರೆಗಳು ಕೂಡಾ ಭರ್ತಿಯಾಗುತ್ತಿದ್ದವು. ಈ ವರ್ಷವೂ ಮಳೆ ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ಕೆರೆಗಳನ್ನು ಹೇಮಾವತಿ ನೀರಿನಿಂದಲೇ ತುಂಬಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಎ.ಪಿ.ಎಂ.ಸಿ. ಅಧ್ಯಕ್ಷ ನರಸಿಂಹೇಗೌಡ, ಮುದಿಮಡು ರಂಗಸ್ವಾಮಯ್ಯ, ಆರ್.ರಾಘವೇಂದ್ರ, ಆರ್.ರಾಮು, ಕೆಂಚೇಗೌಡ, ಹಂದಿಕುಂಟೆ ಚಂದ್ರಶೇಖರ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
