ತುರುವೇಕೆರೆ:
ಪಟ್ಟಣದ ಸಮೀಪದ ಹಾವಾಳದಲ್ಲಿರುವ ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕು ಎಂ.ಎಸ್.ಪಿ.ಸಿ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಶಾಸಕ ಮಸಾಲಜಯರಾಮ್ ಶನಿವಾರ ದಿಢೀರ್ ಭೇಟಿ ನೀಡಿ ಮಕ್ಕಳಿಗೆ ನೀಡಲು ಸಿದ್ದಪಡಿಸುವ ಉತ್ತಮ ಹಾಗೂ ಗುಣಮಟ್ಟದ ಆಹಾರ ಪ್ಯಾಕೇಟು ತಯಾರು ಮಾಡುವಂತೆ ಅಲ್ಲಿನ ಮೇಲ್ವಿಚಾರಕಿ ಹಾಗೂ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕಿನ ಶಿಶು ಮತ್ತು ಮಹಿಳಾ ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವಿತರಣೆಯಾಗುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿರುತ್ತದೆಂದು ಹಲವು ಬಾರಿ ಸಾರ್ವಜನಿಕರಿಂದ ಹಾಗೂ ಕುಣಿಗಲ್ ಶಾಸಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಶಾಸಕರು ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಇಂದು ದಿಢೀರ್ ಭೇಟಿ ನೀಡಿ ಆಹಾರ ಪದಾರ್ಥಗಳನ್ನು ಸಂಸ್ಕರಣೆ ಮತ್ತು ಪ್ಯಾಕೇಟ್ ಮಾಡುವ ವಿಧಾನಗಳನ್ನು ಪರಿಶೀಲಿಸಿದಾಗ ಪೌಷ್ಠಿಕ ಆಹಾರ ಮಿಶ್ರಣಕ್ಕೆ ಬಳಸುತ್ತಿದ್ದ ಅಕ್ಕಿ, ಗೋಧಿ, ಹೆಸರು ಕಾಳು, ಕಡಲೆ ಇತ್ಯಾದಿಗಳಲ್ಲಿ ಇಲಿ ಪಿಚ್ಚುಗೆ, ಕಪ್ಪು ಹುಳಗಳು ಚೀಲಗಳಲ್ಲಿ ಹಾಗು ನೆಲದಲ್ಲಿ ಹರಿದಾಡುತ್ತಿರುವುದನ್ನು ಕಂಡ ಶಾಸಕರು ಮೇಲ್ವಿಚಾರಕಿ ಮಂಜುಳಾದೇವಿ ಅವರ ಮೇಲೆ ಗರಂ ಆದರು.
ಶಿಶು ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳನ್ನು ನೆಲದಲ್ಲಿ ಮತ್ತು ಬೇಕಾಬಿಟ್ಟಿಗಾಗಿ ತಯಾರು ಮಾಡುತ್ತೀರಾ, ಇಂತಹ ಕಲುಷಿತ ಆಹಾರ ನೀಡಿದರೆ? ಇದನ್ನು ತಿಂದ ಮಕ್ಕಳ ಆರೋಗ್ಯ ಕೆಟ್ಟರೆ ಯಾರು ಜವಬ್ದಾರರು. ನಿಮ್ಮ ಮನೆ ಮಕ್ಕಳಿಗೂ ಹೀಗೆ ಕೊಡುತ್ತೀರಾ ಎಂದು ಅಲ್ಲಿದ್ದವರನ್ನು ಪ್ರಶ್ನಿಸಿದರು. ಆಹಾರ ಪದಾರ್ಥಗಳನ್ನು ಸಂಸ್ಕರಿಸಲು ಬಳಸುವ ಯಂತ್ರಗಳೂ ಸಹ ಅವ್ಯವಸ್ಥೆಯಿಂದ ಕೂಡಿವೆ. ಇಲ್ಲಿನ ಸ್ಥಳವನ್ನಾದರೂ ಶುಚಿಯಾಗಿಟ್ಟುಕೊಳ್ಳಬೇಕಲ್ಲ ಯಾವುದೋ ಗೋಡನ್ ಇದ್ದಂತೆ ಇದೆಯೆಂದು ಇಲಿ ಬಿಲ ತೋರಿಸಿ ಸಿಬ್ಬಂದಿಯೊಬ್ಬರಿಗೆ ಕಾರವಾಗಿ ಪ್ರಶ್ನಿಸಿದರು.
ಪೌಷ್ಠಿಕ ಆಹಾರ ಪ್ಯಾಕೇಟ್ ಮೇಲೆ ಯಾವ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಎಷ್ಟು ಪ್ರಮಾಣದಲ್ಲಿ ಸೇರಿಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಕಳಪೆ ಪ್ಯಾಕೇಟ್‍ಗಳನ್ನು ಸಿದ್ದಪಡಿಸುತ್ತಿದ್ದೀರಾ ಈ ಬಗ್ಗೆ ಕಮಿಷನರ್ ಹಾಗು ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಹೇಳಿದರು. ಇದೇ ವೇಳೆ ಪೌಷ್ಠಿಕ ಆಹಾರ ಪ್ಯಾಕೇಟ್‍ಗಳ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಕ್ಕೆ ಐದಾರು ಆಹಾರ ಪ್ಯಾಕೇಟ್ ಕಳುಹಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರುಗಳಾದ ಅಂಜನ್‍ಕುಮಾರ್, ಚಿದಾನಂದ್, ಪ್ರಭಾಕರ್, ಮುಖಂಡರುಗಳಾದ ವಿ.ಬಿ.ಸುರೇಶ್, ಗಣೇಶ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರ ಮಂಜಣ್ಣ ಲೆಕ್ಕಾಧಿಕಾರಿ ಮಂಜುಳಾದೇವಿ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ