ಬೆಂಗಳೂರು:
ಇದೇ 22ರಂದು ಸಂಪುಟ ವಿಸ್ತರಣೆ ನಡೆಯುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭಗೊಂಡಿದ್ದು,ಅಧಿವೇಶನ ಬಿಟ್ಟು ದೆಹಲಿಗೆ ತೆರಳಲು ಹಿರಿಯ ಕಾಂಗ್ರೆಸ್ ಶಾಸಕರು ಮುಂದಾಗಿದ್ದಾರೆ.
ರಾಮಲಿಂಗಾ ರೆಡ್ಡಿ ಸಹಿತ 20 ಶಾಸಕರು ನಾಳೆ ಅಥವಾ ನಾಡಿದ್ದು,ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಲಿದ್ದಾರೆ.
ಪ್ರಸುತ್ತ ಸಚಿವಾಕಾಂಕ್ಷಿಗಳ ಪಟ್ಟಿಯೊಂದಿಗೆ ರಾಜ್ಯ ನಾಯಕರಿಗೆ ದೆಹಲಿಗೆ ಬರಲು ಈಗಾಗಲೇ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.ಹೀಗಾಗಿ ಅದರೊಳಗೆ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲು ಈ 20 ಶಾಸಕರು ದೆಹಲಿಗೆ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯವಾಗಿ ಸಮಿಶ್ರ ಸರ್ಕಾರ ಬಂದಾಗಿನಿಂದಲೂ ಕಾಂಗ್ರೆಸ್‍ನಲ್ಲಿ ಹಿರಿಯ ಕಾಂಗ್ರೆಸ್ ಶಾಸಕರನ್ನು ನಿರ್ಲಕ್ಷ್ಯಿಸಲಾಗುತ್ತಿದ್ದು,ಸಚಿವ ಸ್ಥಾನಕ್ಕೂ ಪರಿಗಣಿಸದೇ ಮೂಲೆಗುಂಪು ಮಾಡಲಾಗಿದೆ ಎಂಬುದಾಗಿ ರಾಹುಲ್ ಗಾಂಧಿಗೆ ದೂರು ನೀಡಲು ಕೂಡ ಈ 20 ಶಾಸಕರು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇನ್ನು ಡಿ.21ರಂದು ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ರಾಹುಲ್ ಗಾಂಧಿ ಸಂಪುಟ ವಿಸ್ತರಣೆ ಕುರಿತು ಸಭೆ ನಡೆಸಲಿದ್ದಾರೆ. ಈ ಕುರಿತು ಅಂದೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಒಂದು ವೇಳೆ ಸಂಪುಟ ವಿಸ್ತರಣೆಗೆ ಅಂದೇ ಗ್ರೀನ್ ಸಿಗ್ನಲ್ ಸಿಕ್ಕರೆ ಡಿ.22ರಂದು ಸಂಪುಟ ವಿಸ್ತರಣೆ ಆಗಲಿದೆ.ಸಿದ್ದರಾಮಯ್ಯ,ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಹೀಗಾಗಿ ಇದಕ್ಕೂ ಮೊದಲೆ ಹೈಕಮಾಂಡ್‍ನಲ್ಲಿ ತಮ್ಮ ನಾಯಕರು ಮೂಲಕ ಸಚಿವಕಾಂಕ್ಷಿಗಳು ರಾಹುಲ್ ಗಾಂಧಿ ಮೂಲಕ ಒತ್ತಡ ಹಾಕಿಸಿ ಮಂತ್ರಿ ಭಾಗ್ಯ ಪಡೆಯಲು ಮುಂದಾಗಿದ್ದಾರೆ.ಆಸ್ಕರ್ ಫರ್ನಾಂಡೀಸ್,ಹರಿ ಪ್ರಸಾದ್ ಸೇರಿದಂತೆ ಘಟಾನುಘಟಿ ನಾಯಕರ ಮೂಲಕ ಸಚಿವ ಸ್ಥಾನ ಪಡೆಯಲು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ.
ಈ ನಡುವೆ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳಿಗೆ ಸಮಿಶ್ರ ಸರ್ಕಾರದಲ್ಲಿ ಯಾವುದೇ ಸ್ಥಾನಗಳು ಸಿಕ್ಕಿಲ್ಲ.ಮೊನ್ನೆ ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಕರಾವಳಿ ಭಾಗದವರಿಗೆ ನೀಡಲಾಗಿದೆ.ಈ ಮೂಲಕ ಉತ್ತರ ಕರ್ನಾಟಕದ ಭಾಗದ ಎಸ್.ಆರ್.ಪಾಟೀಲ್ ಅವರಿಗೆ ಅಧಿಕಾರ ವಂಚಿತ ಮಾಡಲಾಗಿದೆ ಎಂಬ ಕೂಗುಗಳು ಎದ್ದಿದ್ದು,ಇದನ್ನು ಕೂಡ ರಾಹುಲ್ ಗಾಂಧಿ ಬಳಿ ಈ 20 ಶಾಸಕರು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ನಾಲ್ಕೈದು ತಿಂಗಳಿನಿಂದಲೂ ಸಂಪುಟ ವಿಸ್ತರಣೆ ಕಾರ್ಯ ಹಲವು ಕಾರಣಗಳಿಂದ ಮುಂದೂಡಿಕೊಂಡು ಬರಲಾಗುತ್ತಿದೆ. ಇದರಿಂದ ಬೇಸತ್ತು ಹೋಗಿದ್ದ ಕಾಂಗ್ರೆಸ್ ಸಚಿವಾಕಾಂಕ್ಷಿ ಶಾಸಕರು ಬಂಡಾಯ ಏಳುವ ಸೂಚನೆಯನ್ನು ನೀಡಿದ್ದರು. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಖಚಿತ ಎಂದು ಮೈತ್ರಿ ನಾಯಕರು ಅತೃಪ್ತರಿಗೆ ಭರವಸೆ ನೀಡಿದ್ದರು.
ಆದರೆ, ಐದು ರಾಜ್ಯಗಳ ಫಲಿತಾಂಶದಲ್ಲಿ ಕಾಂಗ್ರೆಸ್ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ.ಹೀಗಾಗಿ ಬಂಡಾಯ ಏಳುವ ಶಾಸಕರು ಪಕ್ಷದ ವಿರುದ್ಧವಾಗಿ ನಿಂತುಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದ್ದರು.ಇದರಿಂದ ಸಂಪುಟ ವಿಸ್ತರಣೆಯನ್ನು ಅವಸರವಾಗಿ ಮಾಡುವುದು ಬೇಡ, ಲೋಕಸಭೆ ಚುನಾವಣೆ ಮುಗಿಯುವವರೆಗೂ ಕಾಯೋಣ ಎಂಬ ನಿರ್ಧಾರಕ್ಕೂ ಮೈತ್ರಿ ನಾಯಕರು ಬಂದಿದ್ದರು ಎನ್ನಲಾಗಿದೆ.ಆದರೆ, ಇದೀಗ ರಾಹುಲ್ ಗಾಂಧಿ ಅವರೇ ಸಂಪುಟ ವಿಸ್ತರಣೆಗೆ ಒಲವು ತೋರಿ, ರಾಜ್ಯ ನಾಯಕರಿಗೆ ಬುಲಾವ್ ನೀಡಿದ್ದಾರೆ. ಇದರಿಂದ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಗರಿಗೆದರಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ