ಚಳ್ಳಕೆರೆ
ಕಳೆದ ಸುಮಾರು 50 ದಿನಗಳಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಕೊರೋನಾ ವೈರಾಣು ನಿಯಂತ್ರಣಕ್ಕಾಗಿ ಕ್ಷೇತ್ರದ ಶಾಸಕನಾಗಿ ನಿರ್ವಹಿಸಿದ ಹಲವಾರು ಕಾರ್ಯಗಳ ಬಗ್ಗೆ ವಿವರಣೆ ನೀಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಹಿಂದುಳಿದ ಪ್ರದೇಶಗಳ ವ್ಯಾಪ್ತಿಯಲ್ಲಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ವಿರೋಧ ಪಕ್ಷದ ನಾಯಕರು, ನಿರ್ಗಮನ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯನವರನ್ನು ಶಾಸಕ ಟಿ.ರಘುಮೂರ್ತಿ ಒತ್ತಾಯ ಪಡಿಸಿದ್ದಾರೆ.
ಅವರು, ಸೋಮವಾರ ಬೆಂಗಳೂರಿನ ಅವರ ನಿವಾಸಕ್ಕೆ ಭೇಟಿ ನೀಡಿ ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಕೈಗೊಂಡ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಆ ಭಾಗದ ಸಾವಿರಾರು ಬಡ ಜನರಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಾರ್ವಜನಿಕರ ಸಹಕಾರದಿಂದ ಆಹಾರ ಪದಾರ್ಥ ಹಾಗೂ ಇನ್ನಿತರೆ ಸವಲತ್ತುಗಳನ್ನು ನೀಡಲಾಗಿದೆ.
ಆದರೆ, ಕಳೆದ ಹಲವಾರು ವರ್ಷಗಳಿಂದ ಮಳೆ ವೈಪಲ್ಯ ಹಿನ್ನೆಲೆಯಲ್ಲಿ ಹೆಚ್ಚಿನ ಬಡತನವಿದ್ದು, ಅನೇಕ ಕುಟುಂಬಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಹೆಚ್ಚು ನಷ್ಟ ಅನುಭವಿಸಿವೆ. ರಾಜ್ಯ ಸರ್ಕಾರ ಕೆಲವೊಂದು ರಿಯಾಯ್ತಿ ನೀಡುವ ಬಗ್ಗೆ ಈಗಾಗಲೇ ಮನದಟ್ಟು ಮಾಡಿದ್ದರೂ ಈ ಭಾಗದ ಬಡ ಜನರ ಸಂಕಷ್ಟ ನಿವಾರಣೆಗೆ ಮಾಜಿ ಮುಖ್ಯಮಂತ್ರಿಗಳಾದ ನೀವು ಸರ್ಕಾರಕ್ಕೆ ಒತ್ತಡ ಹೇರಿ ವಿಶೇಷ ಪ್ಯಾಕೇಜ್ ನೀಡುವಂತೆ ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯಿಸುವಂತೆ ಮನವಿ ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿಯವರ ಜನಪರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಮಾಜಿ ಮುಖ್ಯಮಂತ್ರಿಗಳು ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕೊರೋನಾ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಈ ಭಾಗದ ಬಡ ಜನರಿಗೆ ಸಹಾಯ ಮಾಡುವಂತೆ ವಿನಂತಿಸಿದ್ಧಾರೆ.
ನಗರದ ವಿಕಲಚೇತರಿಗೆ ಆಹಾರ ಕಿಟ್
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಮ್ಮ ಕ್ಷೇತ್ರದ 3950 ವಿಕಲಚೇತನರಿಗೆ ತಮ್ಮ ವೈಯಕ್ತಿಕವಾಗಿ ಆಹಾರದ ಕಿಟ್ಗಳನ್ನು ನೀಡಲಿದ್ದು, ಮೇ-19ರ ಮಂಗಳವಾರ ಬೆಳಗ್ಗೆ 11ಕ್ಕೆ ಶಾಸಕ ಕಚೇರಿ ಮುಂಭಾಗದಲ್ಲಿ ವಿಕಲಚೇತರಿಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ. ನಗರದ 500ಕ್ಕೂ ಹೆಚ್ಚು ಜನರಿಗೆ ಪ್ರಾರಂಭ ಹಂತದಲ್ಲಿ ಕಿಟ್ ನೀಡಿ ನಂತರ ಕ್ಷೇತ್ರದಾದ್ಯಂತ ಹಂತ, ಹಂತವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ