ಅಧಿವೇಶನದಲ್ಲಿ ಶಾಸಕರ ಹಾಜರಾತಿ ತೃಪ್ತಿಕರ : ರಮೇಶ್ ಕುಮಾರ್

ಬೆಳಗಾವಿ

          ಬೆಳಗಾವಿಯ ಅಧಿವೇಶನದಲ್ಲಿ ಶಾಸಕರ ಹಾಜರಾತಿ ತೃಪ್ತಿಕರವಾಗಿದ್ದು, ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗಿರುವುದು ಸಮಾಧಾನ ತಂದಿದೆ. ಆದರೆ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆಯಾಗಿಲ್ಲ ಎಂಬ ನೋವಿದೆ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ.

           ವಿಧಾನಸಭೆ ಕಲಾಪವನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಆರಂಭವಾದ ವೇಳೆ ನಡೆದ ಸಭೆಯಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆ, ನೀರಾವರಿ ಯೋಜನೆ, ಮರುಳು ಮಾಫಿಯಾದ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸಾಧ್ಯವಾಗಲಿಲ್ಲ.

           ಇದಕ್ಕೆ ಯಾರು ಕಾರಣ ಎನ್ನುವ ವಿಶ್ಲೇಷಣೆಗೆ ಹೋಗುವುದಿಲ್ಲ ಎಂದರು.ಕಳೆದ ಹತ್ತು ದಿನದಿಂದ ನಡೆದ ಚರ್ಚೆಯಲ್ಲಿ ನನ್ನ ವ್ಯಾಪ್ತಿಯಲ್ಲಿರುವ ಅಧಿಕಾರ ಬಳಸಿಕೊಂಡು ಕೆಲಸ ಮಾಡಿರುವ ಸಮಾಧಾನವಿದೆ. ಆದರೆ ಕೆಲವೊಮ್ಮೆ ಶಾಸಕರು ಹಾಗೂ ಮಂತ್ರಿಗಳು ಸದನಕ್ಕೆ ಬರುವಾಗ ಸರಿಯಾದ ರೀತಿಯಲ್ಲಿ ತಯಾರಿ ನಡೆಸಿಕೊಳ್ಳದೇ ಆಗಮಿಸುತ್ತಾರೆ. ಹಲವು ಕಾರಣಕ್ಕೆ ಸಚಿವರಾಗುವವರು, ಸಚಿವರಾದ ಬಳಿಕವಾದರೂ ಸಿದ್ಧತೆ ಮಾಡಿಕೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ಹೇಗೆ ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು.

            ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಿವಾದದ ಬಗ್ಗೆ ಮೊದಲ ದಿನವೇ ವಿರೋಧ ಪಕ್ಷದ ನಾಯಕರ ಪರವಾಗಿ ಬಂದಿದ್ದ ಶಾಸಕರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೆ. ಸಂಧಾನ ಮಾಡಲು ಪ್ರಯತ್ನಿಸಿದ್ದೆ. ಸಭಾಧ್ಯಕ್ಷನಾಗಿ ನಾನು ಮಾಡಬೇಕಾದ ಕೆಲಸವನ್ನು ಸರಿಯಾಗಿ ನಿಭಾಯಿಸಿದ್ದೇನೆಂಬ ತೃಪ್ತಿಯಿದೆ ಎಂದರು.

           ಹಿಂದಿನ ಅಧಿವೇಶನ ನೋಡಿದರೆ, ಈ ಬಾರಿ ಶಾಸಕರ ಹಾಜರಿ ಉತ್ತಮವಾಗಿದೆ. ಸದನಕ್ಕೆ ಬರಲು ಸಾಧ್ಯವಿಲ್ಲದವರು ಮಾಹಿತಿ ನೀಡಿ ವಿನಾಯಿತಿ ಪಡೆದುಕೊಂಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಗಂಟಲು ನೋವಿನ ಕಾರಣಕ್ಕೆ ಸದನಕ್ಕೆ ಹಾಜರಾಗುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದರು. ಹೀಗಾಗಿ ವಿನಾಯಿತಿ ನೀಡಲಾಗಿತ್ತು. ಆದರೆ ಅವರು ಬೇರೆ ಬೇರೆ ಸಭೆಗಳಲ್ಲಿ ಭಾಗವಹಿಸಿರುವ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

           ಈ ಭಾರಿ ಅಧಿವೇಶನದ ಖರ್ಚು ಕಡಿಮೆಯಾಗಿದೆ: ಬೆಳಗಾವಿಯಲ್ಲಿ ಕಳೆದ ವರ್ಷ ನಡೆದ ಅಧಿವೇಶನದ ಖರ್ಚಿಗಿಂತ 8 ರಿಂದ 10 ಕೋಟಿ ರೂ. ಕಡಿಮೆ ವ್ಯಯ ಮಾಡಲಾಗಿದ್ದು, ಮಿತವ್ಯಯ ಸಾಧಿಸಲಾಗಿದೆ. ಕಳೆದ ಬಾರಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದ್ದು ಸದ್ಯದಲ್ಲೇ ವರದಿ ಬರಲಿದೆ. ಇದು ಸಾರ್ವಜನಿಕರ ತೆರಿಗೆಯ ಹಣ. ಹೀಗಾಗಿ ಪ್ರತಿಯೊಂದು ಪೈಸೆಗೂ ಗೌರವ ನೀಡುವುದು ನಮ್ಮ ಕರ್ತವ್ಯ.

            ಆದ್ದರಿಂದ ಕಳೆದ ಬಾರಿ ನಡೆದ ಖರ್ಚಿನ ಬಗ್ಗೆ ತನಿಖೆ ನಡೆಸುವುದು ಸೂಕ್ತ ಎಂದೆನಿಸಿತ್ತು. ಸ್ಪೀಕರ್ ಕಚೇರಿಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾದಾಗ ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ವಿಧಾನಸಭೆ ಕಾರ್ಯದರ್ಶಿ ಅವರು ತಮ್ಮ ಅಧಿಕಾರ ಮೊಟಕುಗೊಳಿಸಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಯಾರಿಗೂ ಅಧಿಕಾರವಿಲ್ಲ, ಪ್ರತಿಯೊಬ್ಬರಿಗೂ ಇರುವುದು ಜವಾಬ್ದಾರಿ ಮಾತ್ರ. ಜವಾಬ್ದಾರಿ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದೇನೆ. ಪ್ರತಿಯೊಬ್ಬರಿಗೂ ನ್ಯಾಯಾಲಯಕ್ಕೆ ಹೋಗುವ ಅಧಿಕಾರವಿದೆ. ಇದನ್ನು ತಡೆಯಲು ಸಾಧ್ಯವೇ ? ಎಂದು ಪ್ರಶ್ನಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap