ದಾವಣಗೆರೆ:
ಕಳೆದ 7 ತಿಂಗಳಿನಿಂದ ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನ ತಡೆಹಿಡಿದಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಜೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ವೈದ್ಯಕೀಯ ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಾ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಸೋಸಿಯೇಷನ್‍ನ ಸ್ವರೂಪ್ ಮಲ್ಲೇಶ್, ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಗಲಿರುಳು ಸರ್ಕಾರಿ ಕೋಟಾದಲ್ಲಿ ಸೇವೆ ಸಲ್ಲಿಸುತ್ತಿರುವ ಗೃಹ ವೈದ್ಯರು, ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಪಿ.ಜಿ., ಡಿಪ್ಲೋಮದ ಸುಮಾರು 235ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ಕಳೆದ ಏಳು ತಿಂಗಳಿನಿಂದ ರಾಜ್ಯ ಸರ್ಕಾರ ಶಿಷ್ಯ ವೇತನ ಪಾವತಿ ಮಾಡಿಲ್ಲ. ಇದನ್ನೆ ನಂಬಿಕೊಂಡು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನೀತಿಯಿಂದ ಸಾಕಷ್ಟು ತೊಂದರೆಯಾಗಿದೆ ಎಂದು ಆರೋಪಿಸಿದರು.
ಹಲವು ವರ್ಷಗಳಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೀಡುತ್ತಾ ಬಂದಿರುವ ಶಿಷ್ಯ ವೇತನವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಸಂಬದ್ಧ ಕಾರಣ ನೀಡುವ ಮೂಲಕ ಏಕಾಏಕಿ ತಡೆಹಿಡಿದಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಷ್ಯ ವೇತನ ತಡೆ ಹಿಡಿದಿರುವ ಸರ್ಕಾರದ ಕ್ರಮದ ಹಿಂದೆ ವೈದ್ಯ ವಿದ್ಯಾರ್ಥಿಗಳಿಂದ ಪುಕ್ಕಟೆ ದುಡಿಸಿಕೊಳ್ಳುವ ಹುನ್ನಾರ ಅಡಗಿದೆ. ಶಿಷ್ಯ ವೇತನದ ಕುರಿತು ವರ್ಷದ ಹಿಂದೆಯೇ ಕಡತ ಪರಿಶೀಲನೆ ನಡೆಸಬೇಕಿತ್ತು. ಆದರೆ, ನಿರ್ಲಕ್ಷ ತೋರಿದ್ದಾರೆ. ವೈದ್ಯ ವಿದ್ಯಾರ್ಥಿಗಳು ತಮ್ಮದೇ ಹಣ ವ್ಯಯಿಸಿ ಹಲವಾರು ಬಾರಿ ಸಚಿವರನ್ನು ಭೇಟಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಬಡತನದ ನಡುವೆ ಹಲವು ಜಂಜಡಗಳಿದ್ದರೂ ಮಕ್ಕಳು ಚೆನ್ನಾಗಿ ಓದಿದ್ದಾರೆಂಬ ಕಾಣಕ್ಕೆ ಬಡ ಮತ್ತು ಮಧ್ಯಮ ವರ್ಗದ ಪೋಷಕರು ಸಾಲಸೋಲ ಮಾಡಿ ಶುಲ್ಕ ಪಾವತಿ ಮಾಡಿ ಓದಿಸುತ್ತಿದಾರೆ. ಇಂಥಹ ಬಡ ವಿದ್ಯಾರ್ಥಿಗಳಿಗೆ ಈ ಶಿಷ್ಯ ವೇತನವೇ ಆಧಾರ ಸ್ತಂಭವಾಗಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಸೇವೆ ಮಾಡುತ್ತಿರುವ ವೈದ್ಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣವೇ ಬಾಕಿ ಇರುವ ಶಿಷ್ಯ ವೇತನವನ್ನು ಬಿಡುಗಡೆ ಮಾಡಬೇಕೆಂದು ಪ್ರತಿಭಟನಾನಿರತ ಗೃಹವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಅಸೋಸಿಯೇಷನ್‍ನ ಅಧ್ಯಕ್ಷ ಡಾ|| ಸಯ್ಯದ್ ಅಬ್ರಾರ್ ಬಾಷಾ, ಡಾ|| ಕೃಷ್ಣಮೂರ್ತಿ, ಡಾ|| ಮನು, ಡಾ|| ಅಭಿಲಾಷ್, ಡಾ|| ಚಂದನ್, ಡಾ|| ಸಂಗಂ, ಡಾ|| ಪ್ರಿಯಾಂಕ, ಡಾ|| ಅನುಶ್ರೀ, ಡಾ|| ಅರುಣ್ ಸೇರಿದಂತೆ ಹಲವರು ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ