ತುರುವೇಕೆರೆ:
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಉಲ್ಬಣಿಸುತ್ತಿರುವುದರಿಂದ ತಾಲ್ಲೂಕಿನಲ್ಲಿಯೂ ಲಾಕ್‍ಡೌನ್‍ನನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ‘ಮೊಬೈಲ್ ಟೀಮಿಂಗ್’ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಹಶೀಲ್ದಾರ್ ಆರ್.ನಯಿಂಉನ್ನೀಸಾ ತಿಳಿಸಿದರು.
ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲಡೆ ಅಗತ್ಯ ವಸ್ತುಗಳನ್ನು ಕೊಳ್ಳುವ ಸ್ಥಳಗಳಲ್ಲಿ ಹೆಚ್ಚು ಜನರು ಸೇರುವ ಸಾದ್ಯತೆ ಇರುವುದರಿಂದ ಅಲ್ಲಿ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು, ಅನಾವಶ್ಯಕವಾಗಿ ಹೊರಗಡೆ ಓಡಾಡದೆ ಮನೆಯಲ್ಲೇ ಇರುವುದು ಹೀಗೆ ಹಲವು ಅಂಶಗಳ ಬಗ್ಗೆ ‘ಮೊಬೈಲ್ ಟೀಮಿಂಗ್’ ಜನರಿಗೆ ತಿಳುವಳಿಕೆ ಮೂಡಿಸಲಿದೆಂದು ತಾಲ್ಲೂಕು ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ವಿವರಿಸಿದರು.
ಒಂದು ವೇಳೆ ಪೊಲೀಸರು ಮತ್ತು ತಾಲ್ಲೂಕು ಆಡಳಿತ ನೀಡುವ ಸೂಚನೆಗಳನ್ನು ಪಾಲಿಸದವರ ಬಗ್ಗೆ ಮೊಬೈಲ್ ಹ್ಯಾಂಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುತ್ತದೆ.
ಎಲ್ಲೆಲ್ಲಿ ಕಾರ್ಯಾಚರಣೆ:
ಮೊಬೈಲ್ ಟೀಮಿಂಗ್‍ನಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಇರುತ್ತಾರೆ. ಅವರಿಗೆ ಮೊಬೈಲ್ ಹ್ಯಾಂಡ್ ಕ್ಯಾಮೆರಾ ಸಹ ನೀಡಲಾಗುತ್ತದೆ. ಮೊಬೈಲ್ ಟೀಮಿಂಗ್‍ನ ನಾಲ್ಕು ವಾಹನಗಳ ತಂಡಗಳಿರುತ್ತವೆ ಅವುಗಳಲ್ಲಿ ಮಾಯಸಂದ್ರ ಮತ್ತು ದಬ್ಬೇಘಟ್ಟ, ದಂಡಿನಶಿವರ ಮತ್ತು ಬಾಣಸಂದ್ರ ಹಾಗು ಕಸಬಾ ಮತ್ತು ಪಟ್ಟಣಕ್ಕೆ ಎರಡು ಮೊಬೈಲ್ ಟೀಮಿಂಗ್ ವಾಹನಗಳು ಪ್ರತಿ ನಿತ್ಯವೂ ಕಾರ್ಯ ನಿರ್ವಹಿಸಲಿವೆ. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಮುಲಾಜಿಲ್ಲದೆ ಸೀಜ್ ಮಾಡಲಾಗುವುದು.
ಕೃಷಿ ಪರಿಕರಗಳನ್ನು ಮಾರುವ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಮುಂದೆ ದೂರವಾಣಿ ಸಂಖ್ಯೆ ಹಾಕಿರಬೇಕು. ರೈತರು ದೂರವಾಣಿ ಕರೆ ಮಾಡಿಕೊಂಡು ತಮಗೆ ಬೇಕಾಗುವ ಸಾಮಗ್ರಿಗಳನ್ನು ಕೊಳ್ಳ ಬಹುದಾಗಿದೆ.ಕೊರೊನಾ ಮತ್ತು ಅಗತ್ಯ ವಸ್ತುಗಳ ಬಗ್ಗೆ ತೊಂದರೆ ಕಾಣಿಸಿಕೊಂಡಲ್ಲಿ ಸಾರ್ವಜನಿಕರು 08139287325 ಈ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ಎಂದರು.ಸುದ್ದಿ ಗೋಷ್ಟಿಯಲ್ಲಿ ಟಿಎಚ್‍ಒ ಡಾ.ಸುಪ್ರಿಯಾ, ಸಾರ್ವಜನಿಕ ಆಸ್ಪತ್ರೆಯ ವೈದ್ಯಧಿಕಾರಿ ಶ್ರೀಧರ್, ಸಿಪಿಐ.ಲೋಕೇಶ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/15-tvk-01.gif)