ಮೋಡ ಬಿತ್ತನೆಯ ಸಮರ್ಥ ನಿರ್ವಹಣೆ,  ಬರಕ್ಕೆ ಪರಿಹಾರ  – ಕೃಷ್ಣ ಬೈರೇಗೌಡ

ಬೆಂಗಳೂರು
 
        ಜಾಗತಿಕ ತಾಪಮಾನ ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ತನ್ನದೇ ಆದ ರೀತಿಯಲ್ಲಿ ಪರಿಣಾಮ ಬೀರುತ್ತಿದೆ.  ಭಾರತದಲ್ಲಿ ಇದರ ಪರಿಣಾಮ ತೀವ್ರ ತಾಪಮಾನ ಮತ್ತು ಮಳೆಯ ಕೊರತೆ ಉಂಟು ಮಾಡಿದೆ.  ಪ್ರಸ್ತುತ ಪರಿಸ್ಥಿತಿಯಲ್ಲಿ ಮಳೆ ಕೊರತೆಯಿಂದ ಬರ ಎದುರಿಸುತ್ತಿರುವ ರಾಜ್ಯಕ್ಕೆ ಮೋಡ ಬಿತ್ತನೆಯ ಮೂಲಕ ಸ್ವಲ್ಪ ಮಟ್ಟಿಗಿನ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮೋಡ ಬಿತ್ತನೆಯ ಸಮರ್ಥ ನಿರ್ವಹಣೆಯ ಮೂಲಕ ಬರ ಪರಿಸ್ಥಿತಿಯನ್ನು ಎದುರಿಸಬಹುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ರವರು ಹೇಳಿದ್ದಾರೆ.   
       ಅವರು ಇಂದು ಬೆಂಗಳೂರಿನ ಹೋಟೆಲ್ ಲೀ-ಮೆರಿಡಿಯನ್ ನಲ್ಲಿ ಆಯೋಜಿಸಲಾದ ಮೋಡ ಬಿತ್ತನೆ ಕುರಿತ ಮೊದಲ “ಅಂತರ ರಾಷ್ಟ್ರೀಯ ಸಮ್ಮೇಳನವನ್ನು” ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್, ಐ.ಎಂ.ಡಿ ಮತ್ತು ಎಂ.ಒ.ಇ.ಎಸ್.,(ಭೂಗರ್ಭ ವಿಜ್ಞಾನ ಇಲಾಖೆ) ಜಂಟಿಯಾಗಿ ಈ ಸಮ್ಮೇಳನವನ್ನು ಆಯೋಜಿಸಿದ್ದವು.  
       ಕರ್ನಾಟಕ ಕಳೆದ 19 ವರ್ಷಗಳಲ್ಲಿ ತೀವ್ರ ಮಳೆ ಕೊರತೆಯನ್ನು ಅನುಭವಿಸಿದ್ದು, ಕುಡಿಯುವ ನೀರಿನ ಜೊತೆಗೆ ಬೆಳೆ ಮತ್ತು ಸಾಮಾನ್ಯ ಜನ ಜೀವನಕ್ಕೆ ಸಾಕಷ್ಟು ಹಾನಿ ಉಂಟಾಗಿದೆ.  ಕರ್ನಾಟಕದ ಬೇರೆ ಬೇರೆ  ಭಾಗಗಳಲ್ಲಿ  ಬೇರೆ ಬೇರೆ ರೀತಿಯ ವಾತಾವರಣ ಇರುವ ಹಿನ್ನೆಲೆಯಲ್ಲಿ ಮಳೆಯ ಲಭ್ಯತೆಯೂ ಕೂಡ ಭಿನ್ನವಾಗಿದೆ. ಮಳೆಯ ಲಭ್ಯತೆಯ ಪರಿಣಾಮ ಶೇಕಡ 65ಕ್ಕೆ ಇಳಿದಿದೆ,ರಾಜ್ಯದ ಭೌಗೋಳಿಕ ವೈವಿಧ್ಯತೆಯಿಂದಾಗಿ ವಾತಾವರಣದಲ್ಲೂ ಬದಲಾವಣೆ ಕಂಡು ಬಂದಿದೆ.
        ಹಲವು ಕಡೆ ಪ್ರವಾಹ ಬಂದರೆ ಮತ್ತೆ ಹಲವು ಕಡೆ ತೀವ್ರ ಬರ ಎದುರಿಸಬೇಕಾಗಿದೆ. ವಾತಾವರಣದ ಈ ಬದಲಾವಣೆಯನ್ನು ನಾವು ವೈಜ್ಞಾನಿಕವಾಗಿ ಪರಿಣಾಮಕಾರಿ ವಿಧಾನಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು. ಕರ್ನಾಟಕದ 6000ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪನ ಕೇಂದ್ರಗಳು (ಟೆಲಿಮೆಟ್ರಿಕ್ ಸಿಸ್ಟಮ್) ಇದ್ದು ಮಳೆ ಪ್ರಮಾಣವನ್ನು ನಿಖರವಾಗಿ ಕಂಡುಕೊಳ್ಳಲು ಸಾಧ್ಯವಾಗಿದೆ. ಬೇರೆ ಯಾವುದೇ ರಾಜ್ಯಗಳಿಗಿಂತ ಹೆಚ್ಚು ವೈಜ್ಞಾನಿಕವಾಗಿ ಮತ್ತು ಶಿಸ್ತುಬದ್ಧ ವಿಧಾನದ ಮೂಲಕ ಮಳೆ ಮಾಪನವನ್ನು ರಾಜ್ಯದಲ್ಲಿ ಕಂಡುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
  
      ತಜ್ಞರ ಸಮಿತಿಯ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಮಳೆ ಕೊರತೆಯನ್ನು ಎದುರಿಸಲು 2017ರಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ಕೈಗೊಂಡು ಯಶಸ್ಸು ಪಡೆಯಲಾಗಿತ್ತು. ಈ ಮೂಲಕ 2.51 ಟಿ.ಎಂ.ಸಿ ಯಿಂದ 5.00 ಟಿ.ಎಂ.ಸಿ ನೀರಿನ ಹೆಚ್ಚಳ ಕಂಡು ಬಂದಿತ್ತು.  ಶೇಕಡ 27ರಷ್ಟು ಮಳೆಯನ್ನು ಮೋಡ ಬಿತ್ತನೆಯಿಂದ ಪಡೆಯಲಾಗಿತ್ತು.  ಈ ಹಿನ್ನೆಲೆಯಲ್ಲಿ ಈ ಬಾರಿಯೂ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
 
     ಪ್ರಸ್ತುತ ರಾಜ್ಯದ ವಿವಿಧ ಪ್ರದೇಶದ ಮಳೆಯ ಪ್ರಮಾಣ 408 ಮಿಲಿಮೀಟರ್ ನಿಂದ 5051 ಮಿಲಿಮೀಟರ್‍ನಷ್ಟಿದೆ.  ಬಹುತೇಕ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕೇವಲ ಶೇಕಡ 23ರಷ್ಟಿದ್ದು ಆತಂಕದ ಪರಿಸ್ಥಿತಿ ಇದೆ. ರಾಜ್ಯದ 10.5 ಮಿಲಿಯನ್  ಹೆಕ್ಟೆರ್ ಪ್ರದೇಶದಲ್ಲಿ 7.01 ಮಿಲಿಯನ್ ಹೆಕ್ಟೆರ್ ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆ ಕೈಕೊಟ್ಟರೆ ತೀವ್ರ ಬರದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.  
     ಈ ಎಲ್ಲಾ ಹಿನ್ನೆಲೆಯಲ್ಲಿ ಮೋಡ ಬಿತ್ತನೆಯ ಮೂಲಕ ಮಳೆ ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೂರು  ರೆಡಾರ್‍ಗಳನ್ನು ಬಳಸಿ, ಎರಡು ವಿಮಾನಗಳ ಮೂಲಕ ಬೆಂಗಳೂರು ಮತ್ತು ಹುಬ್ಬಳ್ಳಿ ಎರಡೂ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು. 
      ಇದನ್ನು ಯಶಸ್ವಿಗೊಳಿಸಲು ಮಾನಿಟರಿಂಗ್ ಮತ್ತು ಅಡ್ವೈಸರಿ ಕಮಿಟಿ, ಟೆಕ್ನಿಕಲ್‍ಎಕ್ಸಪರ್ಟ್ ಕಮಿಟಿ, ಇಂಪ್ಲಿಮೆಂಟೆಷನ್ ಟೀಂ ಮತ್ತು ಇವ್ಯಾಲ್ಯುಯೇಷನ್ ಕಮಿಟಿಗಳನ್ನು ರಚಿಸಲಾಗಿದೆ. ಮೋಡ ಬಿತ್ತನೆ ಒಂದೇ  ಬರಕ್ಕೆ ಪರಿಹಾರವಲ್ಲ, ನಾವು ದೀರ್ಘ ಕಾಲಿನ ಯೋಜನೆಗಳ ಮೂಲಕ ಬರದ ಸಮರ್ಥ ನಿರ್ವಹಣೆಗೆ ಪ್ರಯತ್ನಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ  “ಜಲಾಮೃತ” ಎನ್ನುವ ಯೋಜನೆಯ ಮೂಲಕ ಶಾಶ್ವತ ನೀರಾವರಿ ಪರಿಹಾರ ಕ್ರಮಗಳನ್ನು ಸಹ ಕೈಗೊಳ್ಳುತ್ತಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.  

      ಕಾರ್ಯಕ್ರಮದಲ್ಲಿ ಕೃಷಿ ಸಚಿವ ಶ್ರೀ ಎನ್.ಹೆಚ್.ಶಿವಶಂಕರ ರೆಡ್ಡಿ ರವರು ಸಹ ಭಾಗವಹಿಸಿದ್ದರು.  ಸರ್ಕಾರದ  ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ದಿ ಆಯುಕ್ತರಾದ ಡಾ.ವಂದಿತಾ ಶರ್ಮ,  ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್, ಡಾ.ಅಲಿ ಎಂ ಅಬ್‍ಷೇವ್, ಡಾ.ಜೆ.ಆರ್. ಕುಲಕರ್ಣಿ ಹಾಗೂ ಇಲಾಖೆಯ ಮುಖ್ಯ ಇಂಜಿನಿಯರ್ ಶ್ರೀ ಪ್ರಕಾಶ್ ರವರು ಸೇರಿದಂತೆ ಹಿರಿಯ ಅಧಿಕಾರಿಗಳು, ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap