ದಾವಣಗೆರೆ:
ಯಾವುದೇ ಸಬೂಬು ಹೇಳದೇ, ರಾಜ್ಯ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ತಕ್ಷಣವೇ ಮೋಡ ಬಿತ್ತನೆ ಕಾರ್ಯಾರಂಭ ಮಾಡಬೇಕೆಂದು ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ ವಿಶ್ವ ಕರವೇ ಕಾರ್ಯಕರ್ತರು, ಮೋಡ ಬಿತ್ತನೆಗೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ರಾಜ್ಯದ ಮಲೆನಾಡು, ಕರಾವಳಿ ಭಾಗವನ್ನು ಹೊರತು ಪಡಿಸಿದರೇ, ಬಹುತೇಕ ಜಿಲ್ಲೆಗಳಲ್ಲಿ ಸಮಪರ್ಕವಾಗಿ ಮುಂಗಾರು ಮಳೆಯಾಗಿಲ್ಲ.
ಹೀಗಾಗಿ ರಾಜ್ಯಾದ್ಯಂತ ಜನ-ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಜಲ ಕ್ಷಾಮದಿಂದ ಗ್ರಾಮೀಣ ಪ್ರದೇಶಗಳನ್ನು ತೊರೆದು ನಗರ ಪ್ರದೇಶದತ್ತ ಗುಳೆ, ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಹ ಜನಪರ ಕಾಳಜಿ ಇಲ್ಲದ ಆಡಳಿತರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಹಾಗೂ ವಿರೋಧ ಪಕ್ಷವಾಗಿರುವ ಬಿಜೆಪಿಯ ಶಾಸಕರುಗಳು ಅಧಿಕಾರಕ್ಕಾಗಿ ಪರಸ್ಪರ ಕಚ್ಚಾಟ ನಡೆಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಳೆಯ ಅಭಾವದಿಂದ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ, ಕೊಳವೆಬಾವಿಗಳ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಸಧ್ಯದ ಪರಿಸ್ಥಿಯನ್ನು ಗಮನಿಸಿದರೆ, ಈ ವರ್ಷವೂ ರಾಜ್ಯವು ಬರಗಾಲಕ್ಕೆ ತುತ್ತಾಗುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಆದರೂ ಸಹ ರಾಜ್ಯ ಸರ್ಕಾರ ಮೋಡ ಬಿತ್ತನೆಯ ಬಗ್ಗೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಅಲ್ಲದೇ, ಮೋಡ ಬಿತ್ತನೆಯ ಜವಾಬ್ದಾರಿ ವಹಿಸಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಈ ತಿಂಗಳು, ಮುಂದಿನ ತಿಂಗಳು, ನಾಳೆ, ನಾಳಿದ್ದು ಮೋಡ ಬಿತ್ತನೆ ಮಾಡುವುದಾಗಿ ಆಶ್ವಾಸನೆ ನೀಡುತ್ತಿರುವುದು ಅತ್ಯಂತ ಜನವಿರೋಧಿ ನೀತಿಯಾಗಿದೆ ಎಂದು ಕಿಡಿಕಾರಿದರು.
ಈಗಾಗಲೇ ರಾಜ್ಯ ಸರ್ಕಾರವು ಮೋಡ ಬಿತ್ತನೆಗೆ 91 ಕೋಟಿ ರೂ. ಮೊತ್ತದ ಟೆಂಡರ್ ಅನ್ನು ಜೂನ್ ತಿಂಗಳಲ್ಲಿಯೇ ಸಚಿವ ಸಂಪುಟದಿಂದ ಅನುಮೋದನೆ ಪಡೆದಿದೆ. ಅಲ್ಲದೇ, ಮೋಡ ಬಿತ್ತನೆಗೆ ಅಮೆರಿಕಾದಿಂದ ವಿಮಾನಗಳು ಸಹ ಬಂದಿಳಿದಿದ್ದು, ಅವುಗಳ ನಿರ್ವಹಣೆಗೆ ರಾಡರ್ ಸಹ ಅಳವಡಿಸಲಾಗಿದೆ. ಆದರೂ ಮೋಡ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಈಗ ತೇವಾಂಶ ಇರುವ ಮೋಡಗಳು ಇರುವ ಸಂದರ್ಭದಲ್ಲಿ ಮೋಡ ಬಿತ್ತನೆ ಮಾಡಿದರೆ, ಮಳೆ ಸುರಿದು ರೈತರಿಗೆ, ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ. ಆ ಮೇಲೆ ಮೋಡ ತೇವಾಂಶ ಇಲ್ಲದಿದ್ದಾಗ ಮೋಡ ಬಿತ್ತಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.
ಹೀಗೆ 2003ರಲ್ಲೂ ಅಂದಿನ ರಾಜ್ಯ ಸರ್ಕಾರವು ಮೋಡ ಬಿತ್ತನೆಗೆ ವಿಳಂಬ ಮಾಡಿ, ಕೊನೆಗೆ ಮೋಡ ಬಿತ್ತಲಾಗಿತ್ತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಇದಕ್ಕಾಗಿ ವೆಚ್ಚ ಮಾಡಿದ ಕೋಟ್ಯಂತರ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿತ್ತು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಮೋಡ ಬಿತ್ತನೆಯ ಕಾರ್ಯ ಆರಂಭಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಕರವೇಯ ಅಮ್ಜದ್ ಅಲಿ, ಕೆ.ಎಚ್.ಮೆಹಬೂಬ್, ದಯಾನಂದ್, ಸಂತೋಷ್ ದೊಡ್ಡಮನಿ, ಎಂ.ರವಿ, ಬಿಲಾಲ್, ಗದಿಗೆಪ್ಪ, ಆಜೀಮ್ ರಜ್ವಿ, ಬಾಬುರಾವ್, ಪ್ರವೀಣ್, ಸೋಮಶೇಖರ್, ನಾಗರಾಜ್, ಸ್ವಾಮಿ, ವಿಜಯಕುಮಾರ್, ಮಂಜು ಗಂಗೂರ್ ಮತ್ತಿತರರು ಭಾಗವಹಿಸಿದ್ದರು.