ಜ.2ಕ್ಕೆ ನಗರಕ್ಕೆ ಮೋದಿ :ಡಿಸಿಎಂರಿಂದ ಸಿದ್ದತೆಗಳ ಪರಿಶೀಲನೆ

ತುಮಕೂರು

   ಪ್ರಧಾನಿ ನರೇಂದ್ರ ಮೋದಿಯವರು ಜನವರಿ 2ರಂದು ತುಮಕೂರಿಗೆ ಆಗಮಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಇಲಾಖೆಗಳ ಸಹಯೋಗದಲ್ಲಿ ನಡೆಯುವ ಕೃಷಿ ಸಮ್ಮಾನ್ ಯೋಜನೆಯ 4ನೇ ಕಂತು ಬಿಡುಗಡೆ ಮಾಡುವರು. ಇದೇ ವೇಳೆ ರೈತರ ಸಮಾವೇಶ ಉದ್ದೇಶಿಸಿ ಮೋದಿ ಮಾತನಾಡುವರು. ಕಾರ್ಯಕ್ರಮಕ್ಕಾಗಿ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಇದಕ್ಕಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ.

   ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಿ, ಪ್ರಧಾನಿ ಕಾರ್ಯಕ್ರಮದ ಪೂರ್ವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ, ಜನವರಿ 2ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ಮೋದಿಯವರು ಕೃಷಿ ಸಮ್ಮಾನ್ ಯೋಜನೆಯ 4ನೇ ಕಂತಿನ ಬಿಡುಗಡೆಗೆ ಚಾಲನೆ ನೀಡುವರು ಎಂದು ಹೇಳಿದರು.

    ಇದೇ ವೇಳೆ ಕೇಂದ್ರ ಕೃಷಿ ಇಲಾಖೆ ಕೊಡಮಾಡುವ ಕೃಷಿ ಪ್ರಶಸ್ತಿಗೆ ಕರ್ನಾಟಕ ಸೇರಿ ದೇಶದ ಆರು ರಾಜ್ಯಗಳು ಆಯ್ಕೆಯಾಗಿದ್ದು ಆಯಾ ರಾಜ್ಯಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ, ಅಲ್ಲದೆ, ಈ ರಾಜ್ಯಗಳ 40 ಮಂದಿ ಪ್ರಗತಿಪರ ರೈತರಿಗೆ ಸರ್ಕಾರದ ಪ್ರಶಸ್ತಿ ವಿತರಿಸಲಾಗುತ್ತದೆ.

    ರೈತ ಸಮಾವೇಶದಲ್ಲಿ ವಿವಿಧೆಡೆಗಳಿಂದ ಸಹಸ್ರಾರು ರೈತರು ಆಗಮಿಸಲಿದ್ದಾರೆ, ರೈತರು ಬಂದು ಹೋಗಲು ಒಂದು ಸಾವಿರ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಕಾಯ್ದಿರಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಹಲವು ಮಂತ್ರಿಗಳು ಭಾಗವಹಿಸುವರು ಎಂದು ಡಿಸಿಎಂ ಸವದಿ ಹೇಳಿದರು.

     ರೈತರಿಗೆ ನೆರವಾಗುವ ಯೋಜನೆಗಳಲ್ಲಿ ಕೃಷಿ ಸಮ್ಮಾನ್ ಯೋಜನೆ ಮಹತ್ವವಾದದ್ದು, ಈ ಯೋಜನೆಯಡಿ ಕೇಂದ್ರ ಸರ್ಕಾರದ ಆರು ಸಾವಿರ ರೂ. ಜೊತೆಗೆ, ರಾಜ್ಯ ಸರ್ಕಾರದ ನಾಲ್ಕು ಸಾವಿರ ರೂ. ಸೇರಿ ಪ್ರತಿ ರೈತನಿಗೆ ವರ್ಷಕ್ಕೆ ಹತ್ತು ಸಾವಿರ ರೂ. ನೀಡಲಾಗುತ್ತದೆ ಎಂದರು.

     ಈ ಕಾರ್ಯಕ್ರಮ ಮುಗಿಸಿ ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವ ಪ್ರಧಾನಿ ಮೋದಿ, ಮಾರನೇ ದಿನ ಬೆಳಿಗ್ಗೆ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.ಸಚಿವ ವಿ. ಸೋಮಣ್ಣ ಮಾತನಾಡಿ, ಪ್ರಧಾನಿ ಮೋದಿಯವರು ಜನವರಿ 2ರಂದು ಮಧ್ಯಾಹ್ನ 2.10ಕ್ಕೆ ತುಮಕೂರಿಗೆ ಆಗಮಿಸುವರು. ನಂತರ ಸಿದ್ಧಗಂಗಾಮಠಕ್ಕೆ ತೆರಳಿ ಲಿಂಗೈಕ್ಯ ಡಾ. ಶಿವಕುಮಾರಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸುವರು. ಆ ನಂತರ, ಸಿದ್ಧಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆದು, ಶ್ರೀಮಠದ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ಸುಮಾರು 4 ನಿಮಿಷ ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಂತರ ರೈತ ಸಮಾವೇಶಕ್ಕೆ ಆಗಮಿಸುವರು ಎಂದು ಹೇಳಿದರು.

    ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಮೊದಲಾದವರು ಈ ವೇಳೆ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link