ಹುಳಿಯಾರು
ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ಭೂಸ್ವಾಧೀನಾ ಕಾಯ್ದೆ ಮುಂತಾದ ರೈತ ಪರ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಮೂಲಕ ದೇಶದ ಪ್ರಧಾನಿ ಮೋದಿಯವರು ರೈತ ವಿರೋಧಿ ಆಡಳಿತ ನಡೆಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಆರೋಪಿಸಿದ್ದಾರೆ.
ಹುಳಿಯಾರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ ಖಂಡಿಸಿ ಹೊಸಹಳ್ಳಿ ಚಂದ್ರಣ್ಣ ಬಣದ ರಾಜ್ಯ ರೈತ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.1960-70 ರ ದಶಕಗಳಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಘೋಷಣೆಯೊಂದಿಗೆ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೆ ತರಲಾಯಿತು. ಇದು ದೇಶದ ಕೋಟ್ಯಾಂತರ ಭೂ ಹೀನರಿಗೆ ಜೀವನ ಭದ್ರತೆಯನ್ನು ಕಲ್ಪಿಸಿ ಅನುಕೂಲ ಮಾಡಿದಂತಾಗಿತ್ತು.
ಇಂತಹ ಮಹತ್ವದ ತೀರ್ಮಾನವನ್ನು ಈ ಕೋವಿಡ್-19 ರ ಸಂಕಷ್ಟದ ಸಂದರ್ಭದಲ್ಲಿ ಯಾವುದೇ ಜನಾಭಿಪ್ರಾಯ ಪಡೆಯದೇ, ಚುನಾಯಿತ ವಿಧಾನಸಭೆಯಲ್ಲಿ ಚರ್ಚಿಸದೆ, ತರಾತುರಿಯಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿರುವುದು ಅಪ್ರಜಾತಾಂತ್ರಿಕ ಕ್ರಮವಾಗಿದೆ ಎಂದು ಖಂಡಿಸಿದ್ದಾರೆ.
ತಿಮ್ಲಾಪುರ ಗ್ರಾಪಂ ಮಾಜಿ ಅಧ್ಯಕ್ಷ ನಂದಿಹಳ್ಳಿ ದೇವರಾಜು ಅವರು ಮಾತನಾಡಿ ಕಾರ್ಪೆರೇಟ್ ಕಂಪನಿಗಳಿಗೆ ಅನುಕೂಲ ಮಾಡುವ ಸಲುವಾಗಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಿಂದ ಕೃಷಿಭೂಮಿಗಳು ಕೃಷಿಯೇತರ ಭೂಮಿಗಳಾಗಿ ಪರಿವರ್ತನೆಗೊಂಡು ಅನ್ನ ಬೆಳೆಯಲು ಭೂಮಿಯೇ ಇಲ್ಲದಂತ್ತಾಗುತ್ತದೆ. ಪರಿಣಾಮ ಅನ್ನಕ್ಕೂ ವಿದೇಶಿಗರನ್ನು ಅವಲಂಭಿಸುವ ದುಸ್ಥಿತಿ ನಿರ್ಮಾಣವಾಗುತ್ತದೆ.
ಹಾಗಾಗಿ ಅನ್ನದಾತನಿಂದ ಭೂಮಿ ಕಿತ್ತುಕೊಳ್ಳುವ ಸುಗ್ರೀವಾಜ್ಞೆ ಹಿಂಪಡೆಯುವಂತೆ ಒತ್ತಾಯಿಸಿದರು.ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷ ಎಸ್.ಸಿ.ಬೀರಲಿಂಗಯ್ಯ ಮಾತನಾಡಿ ಕೃಷಿ ಜಮೀನು ಖರೀದಿಸಿದರೂ ಕೃಷಿ ಬಳಕೆಗೆ ಮಾತ್ರ ಎಂಬ ಕಠಿಣ ಷರತ್ತು ವಿಧಿಸದಿದ್ದರೆ ಕೃಷಿ ಜಮೀನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಕೆಯಾಗುವ ಅಪಾಯವಿದೆ. ಅಲ್ಲದೆ ಭೂಮಿ ಖರೀಧಿ ಮಿತಿಯನ್ನು ಹೆಚ್ಚಿಸಿರುವುದರಿಂದ ಹಣವಂತರು ಭೂಮಿ ಖರೀಧಿಸಿ ಬಡವರನ್ನು ಕೃಷಿಕಾರ್ಮಿಕರನ್ನಾಗಿ ಮಾಡಿಕೊಂಡು ಮತ್ತೆ ಜೀತ ಪದ್ಧತಿ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಡಿಎಸ್‍ಎಸ್ ಮುಖಂಡ ಕೆ.ನಾಗರಾಜು, ಸೋಮಜ್ಜನಪಾಳ್ಯ ಪಟ್ಟಯ್ಯ, ನೀರಾಈರಣ್ಣ, ಹೂವಿನ ತಿಮ್ಮಪ್ಪಸ್ವಾಮಿ, ನಿಂಗರಾಜು, ವಳಗೆರೆಹಳ್ಳಿ ಪುಷ್ಪಬಾಯಿ, ಶಿವಮ್ಮ, ಎಚ್.ಎ.ರಂಗನಾಥ್, ರಾಜಣ್ಣ, ಶಿವಯ್ಯ, ರಮೇಶ್, ತಿಮ್ಮಯ್ಯ, ಪೆದ್ದಬೋವಿ, ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ