ಐದು ವರ್ಷ ಆಡಳಿತ ನಡೆಸಿದ ಪ್ರಧಾನಿಗೆ ಸ್ವಂತ ಶಕ್ತಿ ಮೇಲೆ ಶಂಕೆ:ದೇವೇಗೌಡ

ತುಮಕೂರು

      ಮಹಾ ಘಟಬಂಧನದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಐದು ವರ್ಷದ ಆಡಳಿತ ವೈಖರಿಯ ಅರಿವಾಗಿದೆ. ತಮ್ಮ ಶಕ್ತಿಯನ್ನು ನಂಬಿಕೊಂಡರೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಗೊತ್ತಾಗಿ ಬೆಂಬಲ ಪಡೆಯಲು ಸಣ್ಣಪುಟ್ಟ ಪಾದೇಶಿಕ ಪಕ್ಷಗಳ ಕದ ತಟ್ಟುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.

      ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ನಗರದಲ್ಲಿ ಕಾಂಗ್ರೆಸ್ ನಾಯಕರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರಿಗೆ ತಮ್ಮ ಶಕ್ತಿಯ ಬಗ್ಗೆ ನಂಬಿಕೆ ಇಲ್ಲದಂತಾಗಿದೆ, ಚುನಾವu ಗೆಲುವಿಗಾಗಿ ಪ್ರಾದೇಶಿಕ ಪಕ್ಷಗಳ ನಾಯಕರ ಮನೆಗೆ ಹೋಗಿ ಬೆಂಬಲ ಕೋರುತ್ತಿದ್ದಾರೆ ಎಂದರು.

        ತುಮಕೂರು ಕ್ಷೇತ್ರದಲ್ಲಿ ನಾನು ಗೆಲ್ಲುವುದು ಮುಖ್ಯವಲ್ಲ, ಅಥವಾ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತಾರೆ ಎಂಬ ಅಪಸ್ವರವೂ ಬೇಡ. ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು ಅದಕ್ಕಾಗಿ ಕಾಂಗ್ರೆಸ್ ನಾಯಕರ ಜೊತೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇನೆ. ಪ್ರತಿ ಕ್ಷೇತ್ರದಲ್ಲೂ ಕನಿಷ್ಠ ಒಂದು ಸಭೆಯನ್ನಾದರೂ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ತುಮಕೂರು ಕ್ಷೇತ್ರದಲ್ಲಿ ಹೆಚ್ಚು ಸಮಯ ವಿನಿಯೋಗಿಸಲು ಸಾಧ್ಯ ಆಗದೇ ಇರಬಹುದು, ಇಲ್ಲಿನ ಕಾಂಗ್ರೆಸ್, ಜೆಡಿಎಸ್ ಮುಖಂಡರು ತಮ್ಮ ಗೆಲುವಿಗೆ ಕೆಲಸ ಮಾಡುತ್ತಾರೆ ಎಂದು ದೇವೇಗೌಡರು ಹೇಳಿದರು.

ಸ್ಪರ್ಧೆ ಆಸಕ್ತಿ ಇರಲಿಲ್ಲ

        29 ವರ್ಷ ಸಂಸದನಾಗಿದ್ದೆ. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸಂಸತ್ತಿನಲ್ಲೇ ಪ್ರಕಟಿಸಿದ್ದೆ. ಹಲವು ಹಿರಿಯ ನಾಯಕರು ತಮ್ಮ ಮನೆಗೇ ಬಂದು, ನೀವು ಲೋಕಸಭೆಯಲ್ಲಿ ಇರಬೇಕು, ಮುಂದೆ ಬರಬಹುದಾದ ಸಂದರ್ಭ, ಸನ್ನಿವೇಶಕ್ಕೆ ನೀವು ಭಾಗಿಯಾಗಬೇಕು ಎಂದು ಒತ್ತಾಯ ಮಾಡಿದರು.

       ತಮ್ಮ ಪಕ್ಷದ ಮುಖಂಡರೂ ಚುನಾವಣೆಗೆ ನಿಲ್ಲುವಂತೆ ಒತ್ತಡ ಮಾಡಿದರು. ಈ ಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾದ ಸಂದರ್ಭದಲ್ಲಿ ತೀರ್ಮಾನಿಸಿದಂತೆ ಲೋಕಸಭೆಗೆ ಎರಡು ಪಕ್ಷಗಳು ಒಟ್ಟಾಗಿ ಹೋಗಬೇಕಾಗಿತ್ತು, ಎರಡು ಪಕ್ಷಗಳ ನಾಯಕರು ಸ್ಥಾನ ಹೊಂದಾಣಿಕೆ ಸಂಬಂಧ ಚರ್ಚಿಸಿ, ಜೆಡಿಎಸ್‍ಗೆ ಎಂಟು ಸ್ಥಾನ ಬಿಟ್ಟುಕೊಟ್ಟರು, ಮೈಸೂರು ಕ್ಷೇತ್ರ ತಮಗೆ ಬೇಕೆಂದು ಸಿದ್ದರಾಮಯ್ಯ ಬಯಸಿ ಉಳಿಸಿಕೊಂಡರು. ನಮಗೆ ತುಮಕೂರನ್ನು ಬಿಟ್ಟುಕೊಟ್ಟರು ಹೀಗಾಗಿ ತಾವು ತುಮಕೂರಿಗೆ ಬರಲು ಕಾರಣವಾಯಿತು ಎಂದು ದೇವೇಗೌಡರು ಹೇಳಿದರು.

        ಈ ಕ್ಷೇತ್ರವನ್ನು ಕಾಂಗ್ರೆಸ್‍ನ ಹೈಕಮಾಂಡ್ ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಅವಕಾಶ ಸಿಗದೆ ನನ್ನನ್ನೇ ಯಾಕೆ ಕೈಬಿಟ್ಟರು ಎಂದು ಇಲ್ಲಿನ ಸಂಸದರಿಗೆ ಸ್ವಾಭಾವಿಕವಾಗಿ ಬೇಸರವಾಗುತ್ತದೆ, ಇದು ಡಾ. ಪರಮೇಶ್ವರ್ ಸಮ್ಮುಖದಲ್ಲಿ ಆದ ತೀರ್ಮಾನ ಎಂದರು.
ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್, ಸಚಿವ ಎಸ್ ಆರ್ ಶ್ರೀನಿವಾಸ್, ಶಾಸಕರಾದ ಬೆಮೆಲ್ ಕಾಂತರಾಜು, ಎಂ ವಿ ವೀರಭದ್ರಯ್ಯ, ಗೌರಿಶಂಕರ್, ಮಾಜಿ ಸಚಿವ ಡಿ ನಾಗರಾಜಯ್ಯ, ಮಾಜಿ ಶಾಸಕರಾದ ಡಾ. ರಫಿಕ್‍ಅಹಮದ್, ಷಡಕ್ಷರಿ, ಷಫಿಅಹಮದ್, ಎಂ ಟಿ ಕೃಷ್ಣಪ್ಪ, ಸುರೇಶ್ ಬಾಬು, ಹೆಚ್ ನಿಂಗಪ್ಪ, ಸುಧಾಕರಲಾಲ್,ಮುಖಂಡರಾದ ರಾಧಾಕೃಷ್ಣ, ಮುರಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ