ಬೆಂಗಳೂರು
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹತಾಶರಾಗಿ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ.ಇದರಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಪಾತ್ರವೇನೂ ಇಲ್ಲ ಎಂದು ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಚುನಾವಣೆ ಫಲಿತಾಂಶ ಬಂದ ನಂತರ ಯಡಿಯೂರಪ್ಪ ಅವರು ಕೇವಲ ಮೂರು ದಿನಗಳ ಮುಖ್ಯಮಂತ್ರಿಯಾಗಿದ್ದಾರೆ.ಸಹಜವಾಗಿಯೇ ಇದು ಅವರಿಗೆ ನೋವು ತಂದಿದೆ ಎಂದರು.
ಹೀಗಾಗಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.ಆದರೆ ಅದು ವಿಫಲ ಪ್ರಯತ್ನವಾಗಲಿದೆ.ಹಾಗೆಯೇ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸುಭದ್ರವಾಗಿರಲಿದೆ ಎಂದು ವಿವರಿಸಿದರು.
ಪಾಪ ,ಸರ್ಕಾರ ಉರುಳಿಸಲು ಯಡಿಯೂರಪ್ಪ ಮತ್ತು ರಾಜ್ಯ ಘಟಕದ ನಾಯಕರು ನಡೆಸುತ್ತಿರುವ ಪ್ರಯತ್ನ ಇದು.ಈ ಪ್ರಯತ್ನಕ್ಕೂ ಪ್ರಧಾನಿ ನರೇಂದ್ರಮೋದಿ ಅವರಿಗೂ ಸಂಬಂಧವಿದೆ ಎಂದು ನನಗನ್ನಿಸುತ್ತಿಲ್ಲ ಎಂದು ನುಡಿದರು.ಅವರ ಪಾತ್ರವೇ ಇಲ್ಲದೆ ಇರುವುದರಿಂದ ನಾನು ಅವರ ಬಗ್ಗೆ ಏನೂ ಮಾತನಾಡಲಾರೆ.ಆದರೆ ಯಡಿಯೂರಪ್ಪ ಅವರ ಪ್ರಯತ್ನಕ್ಕೂ ಕಾರಣವಿದೆ.ಅದು ಅವರಿಗಾಗಿರುವ ಹತಾಶೆ ಎಂದು ವ್ಯಂಗ್ಯವಾಡಿದರು.
ಪಶ್ಚಿಮ ಬಂಗಾಳದ ಪೋಲೀಸ್ ಕಮೀಷ್ನರ್ ಅವರನ್ನು ಬಂಧಿಸಲು ಸಿಬಿಐ ನಡೆಸಿದ ಪ್ರಯತ್ನಗಳ ಕುರಿತು ಆಘಾತ ವ್ಯಕ್ತಪಡಿಸಿದ ಅವರು,ಈ ಬೆಳವಣಿಗೆ ತುರ್ತು ಸ್ಥಿತಿಯ ಕಾಲವನ್ನು ನೆನಪಿಸುತ್ತಿದೆ ಎಂದರು.
ಇದು ಸಂವಿಧಾನಾತ್ಮಕ ನಡೆಯಲ್ಲ.ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಗಳಾಗಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಚಿವರು ಕೇಂದ್ರ ಸರ್ಕಾರದಿಂದ ರಾಜೀನಾಮೆ ನೀಡಿ ಹೊರಗೆ ಬಂದಾಗಿದೆ.ಹಾಗೆಯೇ ಹಲವರು ಬಿಜೆಪಿಗೇ ಸೇರಿಕೊಂಡಾಗಿದೆ.ಈ ಮಧ್ಯೆ ಪ್ರಕರಣ ನ್ಯಾಯಾಲಯದಲ್ಲಿದೆ.ಆದ್ದರಿಂದ ಈ ವಿಷಯದಲ್ಲಿ ಯಾವುದೇ ತರಾತುರಿ ತೋರದೆ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುವುದು ಸೂಕ್ತ ಎಂದು ಕಿವಿ ಮಾತು ಹೇಳಿದರು.