ಪಾಟ್ನಾ
ಲೋಕಸಭಾ ಚುನಾವಣೆಯಲ್ಲಿ ಸೋಲು ಸನ್ನಿಹಿತವೆಂದು ಗ್ರಹಿಸಿರುವ ಬಿಜೆಪಿ ನಾಯಕರು ಐದು ವರ್ಷಗಳಲ್ಲಿ ಎಂದೂ ಕೇಳದ ದ್ವೇಷದ, ಅಪ್ರಸ್ತುತ ಹಾಗೂ ಆಧಾರರಹಿತ ಭಾಷಣಗಳನ್ನು ಮಾಡುತ್ತಿದ್ದಾರೆ ಎಂದು ಲೋಕತಾಂತ್ರಿಕ ಜನತಾ ದಳ(ಎಲ್‌ಜೆಡಿ) ನಾಯಕ ಶರದ್ ಯಾದವ್ ಟೀಕಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣುವುದು ಶೇ.100ರಷ್ಟು ನಿಶ್ಚಿತ. ದೇಶದ ವಿವಿಧೆಡೆ ಸಾರ್ವಜನಿಕ ಭಾಷಣಗಳಲ್ಲಿ ಬಿಜೆಪಿ ನಾಯಕರು ಮೆಲು ಧ್ವನಿಯಲ್ಲಿ ಮಾತನಾಡುತ್ತಿರುವುದಕ್ಕೆ ಇದೇ ಕಾರಣವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಪ್ರಧಾನಿ ನರೇಂದ್ರಮೋದಿ ಬಳಸಿರುವ ಭಾಷೆಯನ್ನು ತೀವ್ರವಾಗಿ ಖಂಡಿಸಿರುವ ಶರದ್ ಯಾದವ್, ಯಾವುದೇ ರಾಜಕೀಯ ಪಕ್ಷದ ನಾಯಕರು ಚುನಾವಣಾ ಪ್ರಚಾರದ ವೇಳೆ ಇಂತಹ ಭಾಷೆಯನ್ನು ಬಳಸಬಾರದು. ಅಪ್ರಸ್ತುತ ಮತ್ತು ಅಸಂಬದ್ಧ ಭಾಷೆ ಬಳಸುವುದು ಕಳೆದ ಐದು ವರ್ಷಗಳಲ್ಲಿ ನಡೆಯುತ್ತಾ ಬಂದಿದೆ.ಇದು ತುಂಬಾ ಬೇಸರದ ಸಂಗತಿಯಾಗಿದ್ದು , ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯವೆನಿಸಿದೆ. ಬಿಜಿಪಿ ನಾಯಕರು ಪವಿತ್ರ ಗ್ರಂಥವೆನಿಸಿರುವ ಸಂವಿಧಾನದ ಬಗ್ಗೆ ಮಾತನಾಡುತ್ತಿಲ್ಲ. ದೈನಂದಿನ ಚಟುವಟಿಕೆಗಳಲ್ಲಿ ಸಂವಿಧಾನವನ್ನು ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.ಡಾ.ಅಂಬೇಡ್ಕರ್ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ನಮಗೆ ನೀಡಿರುವ ಸಂವಿಧಾನ ಗ್ರಂಥವೊಂದೇ ಜನರ ಅಗತ್ಯತೆಗಳನ್ನು ಈಡೇರಿಸಬಲ್ಲದು ಎಂದು ಚುನಾವಣಾ ಪ್ರಚಾರಗಳಲ್ಲಿ ಜನರಿಗೆ ಮನದಟ್ಟು ಮಾಡುತ್ತಿದ್ದೇನೆ ಎಂದು ಶರದ್ ಯಾದವ್ ಹೇಳಿದ್ದಾರೆ.