ಮೋದಿ ಚೌಕೀದಾರರಲ್ಲ, ಶೋಕಿದಾರ-ಹಾಸ್ಯಗಾರ

ದಾವಣಗೆರೆ :

      ಪ್ರಧಾನಿ ನರೇಂದ್ರ ಮೋದಿ ಒಬ್ಬ ಸ್ವಯಂ ಘೋಷಿತ ಚೌಕೀದಾರರಾಗಿದ್ದು, ಅವರು ಚೌಕೀದಾರರಲ್ಲ. ಶೋಕಿದಾರ, ಹಾಸ್ಯಗಾರ ಎಂದು ಮಾಜಿ ಸಚಿವ ಹೆಚ್.ಆಂಜನೇಯ ತೀವ್ರ ವಾಗ್ದಾಳಿ ನಡೆಸಿದರು.

     ನಗರದ ನರಹರಿಶೇಟ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಲೋಕಸಭೆ ಚುನಾವಣೆಯ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪನವರ ಪರವಾಗಿ ಮತ ಯಾಚಿಸಲು ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ತಾನು ದೇಶದ ಚೌಕೀದಾರನೆಂದು ಹೇಳುಕೊಳ್ಳುವ ನರೇಂದ್ರ ಮೋದಿ, ರಫೇಲ್ ಯುದ್ದ ವಿಮಾನ ಒಪ್ಪಂದದ ಕಡತ ಕಳೆದು ಹೋದಾಗ ಯಾರ ಕಾವಲು ಕಾಯುತ್ತಿದ್ದರು. ಆದ್ದರಿಂದ ಮೋದಿ ಸ್ವಯಂ ಘೋಷಿತ ಚೌಕೀದಾರರಾಗಿದ್ದಾರೆಂದು ಟೀಕಿಸಿದರು.

      ಹೊಟ್ಟೆಗೆ ಹಿಟ್ಟಿಲ್ಲದ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಕೋಟ್ಯಂತರ ರೂ. ಮೌಲ್ಯದ ಕೋಟು ಧರಿಸುತ್ತಾರೆ. ದಿನಕ್ಕೆ ಎಷ್ಟು ಜೊತೆ ಬಟ್ಟೆ ಬದಲಾಯಿಸುತ್ತಾರೆಂಬುದು ಅವರಿಗಷ್ಟೇ ಗೊತ್ತು. ಹೀಗಾಗಿ ಅವರೊಬ್ಬ ಶೋಕಿದಾರ ಎಂದು ವ್ಯಂಗ್ಯವಾಡಿದರು.

     ಈ ದೇಶವನ್ನು ಹಲವು ಪ್ರಧಾನಿಗಳು ಆಳಿದ್ದಾರೆ. ಅವರೆಲ್ಲರೂ ಗಂಭೀರತೆಯಿಂದ ಮಾತನಾಡುತ್ತಿದ್ದರು. ಆದರೆ, ನರೇಂದ್ರ ಮೋದಿಯವರು ವೇದಿಕೆಯ ಮೇಲೆ ಮೇಜು ಕುಟ್ಟಿ, ಕೈ ತಟ್ಟಿ ಅಭಿನಯಿಸುತ್ತಾರೆ. ಆದ್ದರಿಂದ ಅವರೊಬ್ಬ ಹಾಸ್ಯಗಾರ ಎಂದು ಜರೆದ ಆಂಜನೇಯ, ಸರ್ವಾಧಿಕಾರಿಯಾಗಿರುವ ಮೋದಿಯ ಕೈಯಲ್ಲಿ ಮತ್ತೊಮ್ಮೆ ದೇಶ ಕೊಟ್ಟರೇ, ದೇಶವನ್ನೇ ಸರ್ವನಾಶ ಮಾಡಲಿದ್ದಾರೆಂದು ಆರೋಪಿಸಿದರು.

      ಯುವಕರು ಮೋದಿ, ಮೋದಿ ಅಂತಾ ಕುಣಿತಿರಲ್ಲಾ, ಹಿಂದಿನ ಚುನಾವಣೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅವರು ನಿಮಗೆ ಉದ್ಯೋಗ ಕೊಟ್ಟರೇ? ಈಗ ಅವರನ್ನು ಪ್ರಶ್ನಿಸಿದರೇ, ಪಕೋಡ ಮಾರಿ ಅಂತಾರೆ? ಕೊಟ್ಟ ಆಶ್ವಾಸನೆಯನ್ನು ಈಡೇರಿಸದ ಇಂತಹ ನರೇಂದ್ರ ಮೋದಿ ನಿಮಗೆ ಬೇಕಾ? ಎಂದು ಪ್ರಶ್ನಿಸಿದರು.

        ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಲ್ಲ ಜಾತಿ, ಜನಾಂಗಗನ್ನು ಒಟ್ಟಿಗೆ ಕೊಂಡ್ಡೊಯ್ಯು ಶಕ್ತಿ ಇರುವುದು. ಹೀಗಾಗಿ ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕುರುಬ, ವೀರಶೈವ, ಉಪ್ಪಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ, ದೀನ ದಲಿತರ, ಶೋಷಿತರ ಪಕ್ಷವಾಗಿದೆ. ಆದರೆ, ಕೋಮುವಾದಿ ಬಿಜೆಪಿ ಪಕ್ಷಕ್ಕೆ ಇವರೆಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇಲ್ಲ ಎಂದರು.

       ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ದಾವಣಗೆರೆ ಕ್ಷೇತ್ರದಲ್ಲಿ ಕೊಂಡಜ್ಜಿ ಬಸಪ್ಪ, ಚನ್ನಯ್ಯ ಒಡೆಯರ್ ಸೇರಿದಂತೆ ಶಾಮನೂರು ಶಿವಶಂಕರಪ್ಪ ಸಜ್ಜನ ರಾಜಕಾರಣಿ ಮಾತ್ರವಲ್ಲದೇ ಜನ ಸಾಮಾನ್ಯರ ವ್ಯಕ್ತಿಯಾಗಿದ್ದರು. ಅವರ ಕಾಲದಲ್ಲಿ ಬಂಟಿಂಗ್ಸ್, ಬಾವುಟಕ್ಕಾಗಿ ಪಕ್ಷದ ನಾಯಕರ ಮನೆ ಮುಂದೆ ಕಾಯಬೇಕಾಗಿತ್ತು. ಅಲ್ಲಿಂದ ಚುನಾವಣೆ ಸಾಮಗ್ರಿಗಳನ್ನು ತೆಗೆದುಕೊಂಡು ಸೈಕಲ್‍ನಲ್ಲಿ ಹಳ್ಳಿ-ಹಳ್ಳಿಗೆ ಹೋಗಿ ಪ್ರಚಾರ ಮಾಡಲಾಗುತ್ತಿತ್ತು. ಅಂದಿನ ಕಾಲದಲ್ಲಿನ ಬದ್ಧತೆ, ಸಂಕಲ್ಪದಂತೆ ಈ ಬಾರಿಯೂ ಪ್ರತಿಯೊಬ್ಬ ಕಾರ್ಯಕರ್ತರು ಬದ್ಧತೆಯಿಂದ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಕೆಲಸ ಮಾಡಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಬೇಕೆಂದು ಕರೆ ನೀಡಿದರು.

     ಸಿಎಂ ಸಿದ್ದರಾಮಯ್ಯ ಸರ್ಕಾರದ ಆಡಳಿತ ಅವಧಿಯು ಸುವರ್ಣಯುಗವಾಗಿದ್ದು, ದಲಿತರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಸಿದ್ದರಾಮಯ್ಯನವರು ದಲಿತರ ಶ್ರೇಷ್ಠ ನಾಯಕರಾಗಿದ್ದಾರೆ. ಹೀಗಾಗಿ ಅವರು ಮತ್ತೊಂದು ಸುರ್ವಣ ಯುಗಕ್ಕೆ ಮುಖ್ಯಮಂತ್ರಿಗಳಾಗಬೇಕು. ಅದಕ್ಕೆ ಈ ಲೋಕಸಭಾ ಚುನಾವಣೆಯೇ ನಾಂದಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

       ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಜೆಪಿಗರು ಅಪವಿತ್ರ ಮೈತ್ರಿ ಎಂಬುದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಬಿಹಾರದಲ್ಲಿ ನೀವು ಇನ್ನೊಂದು ಪಕ್ಷದ ಜೊತೆಗೆ ಅಧಿಕಾರ ಹಂಚಿಕೊಂಡಿರಲ್ವಾ ಅದು ಪವಿತ್ರ ಮೈತ್ರಿಯೇ? ಎಂದು ಪ್ರಶ್ನಿಸಿದ ಅವರು, ಮೇ.23ರ ನಂತರ ಸರಕಾರ ಪತನವಾಗಲಿದೆ ಎಂಬುದಾಗಿ ಬಿಜೆಪಿ ನಾಯಕರು ಹೇಳುತ್ತಿರುವುದು ಶುದ್ಧ ಸುಳ್ಳಾಗಿದ್ದು, ನಮ್ಮ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದರು.

       70 ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂಬುದಾಗಿ ಬಿಜೆಪಿಯವರು ಪ್ರಶ್ನಿಸುತ್ತಾರೆ. ಆದರೆ, ಈ 70 ವರ್ಷಗಳಲ್ಲಿ ಕಾಂಗ್ರೆಸ್ ಆರ್‍ಟಿಐ, ಆರ್‍ಟಿಇ, ಆಹಾ ಭದ್ರತಾ ಕಾಯ್ದೆ, ರೈತರ 72 ಸಾವಿರ ಕೋಟಿ ಸಾಲ ಮನ್ನಾ, ಉದ್ಯೋಗ ಖಾತರಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ, ಮೋದಿ ಸರ್ಕಾರ ಕಳೆದ ಐದು ವರ್ಷದಲ್ಲಿ ಅವರು ನೀಡಿದ ಆಶ್ವಾಸನೆಯನ್ನು ಈಡೇರಿಸಿದೆಯೇ ಎಂದು ಪ್ರಶ್ನಿಸಿದರು.

       ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಚ್.ಎಸ್.ಶಿವಶಂಕರ್ ಮಾತನಾಡಿ, ಚನ್ನಯ್ಯ ಒಡೆಯರ್‍ಗೆ ನಮ್ಮ ತಂದೆ ಕೊಟ್ಟ ಬೆಂಬಲದಿಂದ ಅವರು ಸಂಸತ್ ಪ್ರವೇಶಿಸಿದ್ದರು. ಅದರಂತೆ, ಮೈತ್ರಿ ಪಕ್ಷದ ಒಡಂಬಡಿಕೆಯಂತೆ ಈಗ ನಾನು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹೆಚ್.ಬಿ.ಮಂಜಪ್ಪನವರಿಗೆ ಶಕ್ತಿ ತುಂಬುತ್ತಿದ್ದೇವೆ. ಹೀಗಾಗಿ ಮಂಜಪ್ಪನವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

       ಬಿಜೆಪಿಯವರು ಎಸ್ಸಿ, ಎಸ್ಟಿ ಮತದಾರರಿಗೆ ಹಣ ನೀಡಿ ವೋಟು ಖರೀದಿಸುತ್ತೇವೆಂಬ ಹಣದ ದುರಾಹಂಕಾರದಲ್ಲಿದ್ದಾರೆ. ಅವರು ಕೊಟ್ರೆ ನೋಟು ಇಸ್ಕೊಳ್ಳಿ ಆದರೆ, ಮಂಜಪ್ಪನವರಿಗೆ ವೋಟು ಕೊಡಿ ಎಂದು ಮನವಿ ಮಾಡಿದರು.ಮೂರು ತಿಂಗಳ ಹಿಂದೆ ನೆಲ ಕಚ್ಚಿದ್ದ ಬಿಜೆಪಿಯು ಪುಲ್ವಾಮಾ ದಾಳಿಯನ್ನು ಆಕ್ಸಿಜನ್ ಅಂತೆ ಬಳಸಿಕೊಳ್ಳಲು ಹವಣಿಸುತ್ತಿದೆ. ಈಗಾಗಲೇ ಬಿಜೆಪಿ ದೇಶದ ಅರ್ಧಕರ್ಧ ರಾಜ್ಯಗಳಲ್ಲಿ ನಶಸಿ ಹೋಗಿದ್ದು, ಬಿಜೆಪಿಯ ಅಂತ್ಯ ಕಾಲ ಆರಂಭವಾಗಿದ್ದು, ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆ ಸಂತತಿಯ ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ ನೀಡಬೇಡಿ ಎಂದು ಸಲಹೆ ನೀಡಿದರು.

      ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, ದೇಶದಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬಂದರೆ, ದಲಿತರ ಹಕ್ಕುಗಳು ಮೊಟಕುಗೊಳ್ಳಲಿವೆ. ಸಂವಿಧಾನ ಬದಲಾಗುವ ಅಪಾಯವೂ ಇದೆ. ಆದ್ದರಿಂದ ನಮಗೆ ಸಂವಿಧಾನದತ್ತವಾಗಿ ದೊರೆತಿರುವ ಹಕ್ಕುಗಳನ್ನು ಉಳಿಸಿಕೊಳ್ಳಲು ದಾವಣಗೆರೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

        ಚಿತ್ರದುರ್ಗದ ಕಾಂಗ್ರೆಸ್ ಮುಖಂಡ ಎಂ.ಜಯ್ಯಣ್ಣ ಮಾತನಾಡಿ, ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೋಮವಾದಿ ಸರಕಾರ ದೇಶದ ಜನರ ಮಧ್ಯೆ ಕೋಮುಭಾವನೆಗಳನ್ನು ಕೆರಳಿಸಿ ಅಭಿವೃದ್ದಿಯನ್ನು ಸಂಪೂರ್ಣ ಕಡೆಗಣಿಸಿದೆ. ಇಂತಹ ಸರಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು. ಪ್ರಸ್ತುತ ನಡೆಯುತ್ತಿರುವ ಚುನಾವಣೆ ಮೇಲ್ವರ್ಗದ ಜನರು ಮತ್ತು ಕೆಳ ಹಂತದ ಜನರ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಈ ಹೋರಾಟದಲ್ಲಿ ರಾಜ್ಯದ 28 ಕೇತ್ರಗಳ ಪೈಕಿ ಕನಿಷ್ಟ 22 ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಬಲ್ಕಿಶ್ ಬಾನು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಮೈತ್ರಿ ಪಕ್ಷದ ಮುಖಂಡದಾರ ಮಳಲ್ಕರೆ ಶಿವಣ್ಣ, ಬಿ.ಎಮ್.ಹನುಮಂತಪ್ಪ, ಹಲಗೇರಿ ಮಂಜಪ್ಪ, ಎಸ್.ಮಲ್ಲಿಕಾರ್ಜುನ್, ಎಂ.ಹಾಲೇಶ್, ಎ.ಕೆ.ನಾಗಪ್ಪ, ಕತ್ತಲಗೆರೆ ತಿಪ್ಪಣ್ಣ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link