ಚಿತ್ರದುರ್ಗ:
ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಜನತೆಗೆ ಮಂಕುಬೂದಿ ಎರಚಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಕೋಮುವಾದಿ ಬಿಜೆಪಿ.ವಿರುದ್ದ ಹೋರಾಡಬೇಕಾಗಿರುವುದರಿಂದ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿ ಗಟ್ಟಿಯಾಗಿ ನಿಲ್ಲಿಸಬೇಕಿದೆ ಎಂದು ಭಾರತ ಕಮ್ಯುನಿಸ್ಟ ಪಕ್ಷ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಎನ್.ಶಿವಣ್ಣ ಕಮ್ಯುನಿಸ್ಟ್ ಮುಖಂಡರುಗಳಿಗೆ ಕರೆ ನೀಡಿದರು.
ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಸಿ.ಪಿ.ಐ.ಜಿಲ್ಲಾ ಮಂಡಳಿ ಸಭೆ ಉದ್ದೇಶಿಸಿ ಮಾತನಾಡಿದರು.
ಎದುರಾಳಿ ಪಕ್ಷಗಳ ವೈಫಲ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವ ದೇಶದ ಪ್ರಧಾನಿ ನರೇಂದ್ರಮೋದಿ ಬಂಡವಾಳಶಾಹಿ, ಉದ್ಯಮಿಗಳ ಪರವಾಗಿದ್ದು, ರೈತರು, ಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ರೈಲ್ವೆ, ರಕ್ಷಣೆ, ಹಣಕಾಸು, ವಿದ್ಯುತ್ ವಲಯಗಳು ಸರ್ಕಾರದ ಸೌಮ್ಯದಲ್ಲಿರಬೇಕು ಎನ್ನುವ ಧೋರಣೆಯುಳ್ಳ ಕೇಂದ್ರ ಸರ್ಕಾರ ರಫೇಲ್ ಗುತ್ತಿಗೆಯನ್ನು ಅಂಬಾನಿಗೆ ನೀಡಿದೆ.
ಹಂತ ಹಂತವಾಗಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಬಹುಮತವಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಸಾರ್ವಜನಿಕರಿಗೆ ಮಾಹಿತಿಯೆ ಸಿಗದಂತೆ ಮಾಡಿದರೂ ಆಶ್ಚರ್ಯವಿಲ್ಲ. ಅವರು ಮಾಡುವ ಎಲ್ಲಾ ಕರಾರುವಕ್ಕಾದ ಕಾನೂನನ್ನು ದೇಶದ ಜನ ಒಪ್ಪಿಕೊಳ್ಳಲೇಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಲಿದೆ. ಇವೆಲ್ಲದರ ವಿರುದ್ದ ಭಾರತ ಕಮ್ಯುನಿಸ್ಟ್ ಪಕ್ಷ ನಿರಂತರವಾಗಿ ಹೋರಾಟ ಮಾಡಬೇಕಾಗಿರುವುದರಿಂದ ಪಕ್ಷವನ್ನು ಕಟ್ಟಿ ಬೆಳೆಸುವ ಹೊಣೆಗಾರಿಕೆ ಮುಖಂಡರುಗಳ ಮೇಲಿದೆ ಎಂದು ಹೇಳಿದರು.
ಸರ್ಜಿಕಲ್ ಸ್ಟ್ರೈಕ್‍ಗಳು ಈ ಹಿಂದೆ ಸಾಕಷ್ಟು ನಡೆದಿದೆ. ಲೋಕಸಭಾ ಚುನಾವಣಾ ಪೂರ್ವದಲ್ಲಿ ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದನ್ನೆ ದೊಡ್ಡದಾಗಿ ಪ್ರಚಾರ ಗಿಟ್ಟಿಸಿಕೊಂಡು ಮೋದಿ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದರೆ ವಿನಃ ವೈಯಕ್ತಿಕ ವರ್ಚಸ್ಸಿನಿಂದ ಅಲ್ಲ ಎನ್ನುವುದನ್ನು ದೇಶದ ಜನ ಮೊದಲು ಅರ್ಥಮಾಡಿಕೊಳ್ಳಬೇಕು. ಮೇಕ್ ಇನ್ ಇಂಡಿಯಾ ಮಾಡುವುದಾಗಿ ಹೊರಟಿರುವ ಬಿಜೆಪಿ.ವಿದೇಶಿ ಬಂಡವಾಳಗಾರರನ್ನು ನಮ್ಮ ದೇಶಕ್ಕೆ ಆಹ್ವಾನಿಸಿ ಸಂಪತ್ತನ್ನೆಲ್ಲಾ ಲೂಟಿ ಮಾಡಿಕೊಂಡು ಹೋಗಲು ರಹದಾರಿ ಮಾಡಿಕೊಟ್ಟಿದೆ.
ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370 ವಿಧಿಯಡಿ ನೀಡಿದ್ದ ವಿಶೇಷ ಸವಲತ್ತನ್ನು ರದ್ದುಪಡಿಸಿರುವುದನ್ನೇ ದೊಡ್ಡ ಸಾಧನೆಯನ್ನಾಗಿ ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಈಗ ರಾಮಮಂದಿರ ಕಟ್ಟುವ ಜಪ ಮಾಡುತ್ತಿದ್ದಾರೆ. ಬಹಳ ದಿನ ಗಿಮಿಕ್ ಮಾಡಲು ಆಗಲ್ಲ. ಜನ ದಂಗೆ ಏಳುತ್ತಾರೆ.
ಕಾರ್ಮಿಕರು, ರೈತರು, ದುಡಿಯುವ ವರ್ಗದ ಪರವಾಗಿರುವ ಕಮ್ಯುನಿಸ್ಟ್ ಪಕ್ಷ ಬಿಜೆಪಿ.ಯವರು ಮಾಡುತ್ತಿರುವ ಅನ್ಯಾಯ, ಅಕ್ರಮಗಳನ್ನು ದೇಶದ ಜನರ ಮುಂದಿಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.1975 ರಲ್ಲಿ ಇಂದಿರಾಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಗಿಂತಲೂ ಈಗಿನ ಬಿಜೆಪಿ. ಕರಾಳದಿನಗಳನ್ನು ಸೃಷ್ಟಿಸಿದೆ. ಯಾವ ವಿಚಾರಗಳ ಕುರಿತು ಮುಕ್ತ ಚರ್ಚೆಯಾಗುತ್ತಿಲ್ಲ. ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಲು ಹೊರಟು ವಿಫಲವಾಯಿತು.
ಅಪಾಯಕಾರಿ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದರಿಂದ ದೇಶ ಅಭದ್ರತೆಯಲ್ಲಿದೆ. ಜಮ್ಮು-ಕಾಶ್ಮೀರ ಸೈನಿಕರ ತಾಣವಾಗಿದೆ. ಕಾರ್ಮಿಕರು, ರೈತರು ಬೀದಿ ಪಾಲಾಗಿದ್ದಾರೆ. ಬಿಸಿಯೂಟ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಜೀವನ ಭದ್ರತೆಯಿಲ್ಲ. ಅದಕ್ಕಾಗಿ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವ ಸವಾಲು ನಮ್ಮ ಮುಂದಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ನಂಬಿಸಿ ಈಗಾಗಲೇ ಐದು ವರ್ಷಗಳನ್ನು ಕಳೆದಿರುವ ನರೇಂದ್ರಮೋದಿ ಎರಡನೆ ಅವಧಿಗೆ ದೇಶದ ಪ್ರಧಾನಿಯಾಗಿದ್ದಾರೆ.
ಕೇವಲ ಹತ್ತು ಲಕ್ಷ ಉದ್ಯೋಗ ಕೊಟ್ಟಿದ್ದಾರಷ್ಟೆ ಎಂದು ಬಿಜೆಪಿ. ಏಕಚಕ್ರಾಧಿಪತ್ಯವನ್ನು ಖಂಡಿಸಿದರು.ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಕಾರ್ಯದರ್ಶಿ ಸಿ.ವೈ.ಶಿವರುದ್ರಪ್ಪ, ತಾಲೂಕು ಕಾರ್ಯದರ್ಶಿ ಟಿ.ಆರ್.ಉಮಾಪತಿ, ಮುಖಂಡರಾದ ಬಸವರಾಜಪ್ಪ ವೇದಿಕೆಯಲ್ಲಿದ್ದರು.