ಚಿತ್ರದುರ್ಗ:
ಎರಡು ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರುಗಳನ್ನು ಈ ಚುನಾವಣೆಯಲ್ಲಿ ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿರುವುದರಿಂದ ಕ್ಷಣ ಕ್ಷಣಕ್ಕೂ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇನೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್.ಮೈತ್ರಿ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ವಾಗ್ದಾನ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ಬಿ.ಎನ್.ಚಂದ್ರಪ್ಪ ಗುರುವಾರ ಜೆಡಿಎಸ್.ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.ಕಾಂಗ್ರೆಸ್ ಮತ್ತು ಜೆಡಿಎಸ್.ಎರಡು ಪಕ್ಷಗಳ ಅಭ್ಯರ್ಥಿಯಾಗಿ ನಾನು ನೇಮಕಗೊಳ್ಳುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಎಲ್ಲವೂ ಆಕಸ್ಮಿಕ.
ಮಾಜಿ ಪ್ರಧಾನಿ ಜೆಡಿಎಸ್.ಪರಮೋಚ್ಚ ನಾಯಕ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿದ್ದೇನೆ. ನನ್ನ ಬಗ್ಗೆ ಹಾಗೂ ಕಾಂಗ್ರೆಸ್ ನಾಯಕರುಗಳ ಬಗ್ಗೆ ದೇವೇಗೌಡರಿಗೆ ಒಳ್ಳೆಯ ಅಭಿಪ್ರಾಯ ಹೇಳಿದ್ದಾರೆ. ಅದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು ನಾಲ್ಕುವರೆ ವರ್ಷಗಳ ಕಾಲ ದೇಶವನ್ನಾಳಿದ ಪ್ರಧಾನಿ ನರೇಂದ್ರಮೋದಿ ಮಹಾನ್ ಸುಳ್ಳುಗಾರ. ಸುಳ್ಳೆ ಅವರ ಮನೆದೇವರು.
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುತ್ತೇನೆಂದು ಚುನಾವಣಾ ಪೂರ್ವದಲ್ಲಿಯೇ ಬಡವರಿಗೆ ಆಸೆ ತೋರಿಸಿದ ಮೋದಿ ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇನೆಂಬ ಭರವಸೆ ನೀಡಿದ್ದರು. ಯಾವುದೂ ಈಡೇರಲಿಲ್ಲ ಎಂದು ಟೀಕಿಸಿದರು ರಾಜ ಮಹಾರಾಜರ ಕಾಲದಿಂದಲೂ ಯುದ್ದಗಳು ನಡೆಯುತ್ತ ಬರುತ್ತಿದೆ. ದೇಶಕ್ಕೆ ಯಾರು ಪ್ರಧಾನಿಯಾದರೂ ಯುದ್ದ ನಡೆದಾಗ ಸಮರ್ಥವಾಗಿ ಎದುರಿಸುವುದು ಕರ್ತವ್ಯ.
ಆದರೆ ಈಗಿನ ಪ್ರಧಾನಿ ನರೇಂದ್ರಮೋದಿ ಯುದ್ದವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಹೇಯ ಕೆಲಸ. ಜನಸಾಮಾನ್ಯರ ದೈನಂದಿನ ಬದುಕಿಗೆ ಬೇಕಾದ ಅವಶ್ಯಕತೆಗಳ ಕುರಿತು ಚರ್ಚೆಯಾಗುತ್ತಿಲ್ಲ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವಿಬ್ಬರು ಒಂದಾಗಿ ಕೋಮುವಾದಿ ಬಿಜೆಪಿ.ಯನ್ನು ಸೋಲಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಿದೆ ಎಂದರು
ರೈತರಿಗೆ, ಕೃಷಿ ಕಾರ್ಮಿಕರಿಗೆ, ಹಿಂದುಳಿದವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಕೇಂದ್ರದಿಂದ ಯಾವ ಪ್ರಯೋಜನವೂ ಆಗಿಲ್ಲ. 130 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಎಂತಹ ಸಂದರ್ಭದಲ್ಲಿಯೂ ವಿರೋಧಿಗಳ ಜೊತೆ ರಾಜಿ ಮಾಡಿಕೊಂಡಿಲ್ಲ. ಯಾವುದೇ ಕಳಂಕವಿಲ್ಲದ ರಾಜಕಾರಣಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ಕೈಬಲಪಡಿಸೋಣ. ಈ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದೆ ಗೆಲ್ಲುತ್ತೇನೆ ಅನುಮಾನ ಬೇಡ. ಗೆದ್ದ ಮೇಲೆ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು ಆರಂಭಿಸಿ ಬರಪೀಡಿತ ಜಿಲ್ಲೆಯ ಜನರ ಋಣ ತೀರಿಸೋಣ. ಚುನಾವಣೆ ನಂತರವೂ ನಾವುಗಳು ಬೇರೆಯಾಗುವುದು ಬೇಡ. ಒಟ್ಟಿಗೆ ಇರೋಣ ಎಂದು ಜೆಡಿಎಸ್.ಕಾರ್ಯಕರ್ತರು ಹಾಗೂ ಮುಖಂಡರುಗಳನ್ನು ಕೋರಿದರು.
ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ ನಮ್ಮ ಪಕ್ಷದ ವರಿಷ್ಟರಾದ ಹೆಚ್.ಡಿ.ದೇವೇಗೌಡ, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇವರುಗಳು ನಮಗೆ ನೀಡಿರುವ ಸೂಚನೆಯಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಸಮರ್ಪಣಾ ಮನೋಭಾವದಿಂದ ಗೆಲ್ಲಿಸೋಣ. ಜಂಟಿಯಾಗಿ ಕೆಲಸ ಮಾಡುವುದು ಹೇಗೆ ಎನ್ನುವ ಸಂದಿಗ್ದ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರುಗಳಿರುವುದರಿಂದ ಆತಂಕ ಮಡುಗಟ್ಟಿದೆ. ಯಾವುದೇ ಅಪಸ್ವರ, ಭಿನ್ನಾಭಿಪ್ರಾಯವಿಲ್ಲದೆ ಚಂದ್ರಪ್ಪನವರನ್ನು ಗೆಲ್ಲಿಸೋಣ. ಇದಕ್ಕೆ ಕಾರ್ಯಕರ್ತರು ಮತ್ತು ಮುಖಂಡರುಗಳು ಕೈಜೋಡಿಸಿ ಎಂದು ಕೋರಿದರು.
ಇದು ನಮ್ಮ ಪಕ್ಷಕ್ಕೆ ಪ್ರತಿಷ್ಟೆಯ ಚುನಾವಣೆಯಾಗಿರುವುದರಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ.ಯನ್ನು ಕಿತ್ತೊಗೆಯೋಣ. ಮುಖ್ಯಮಂತ್ರಿಗೆ ಹೆಚ್ಚಿನ ಶಕ್ತಿ ತುಂಬಬೇಕಾಗಿರುವುದರಿಂದ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಲೇಬೇಕೆಂಬ ಸವಾಲು ನಮ್ಮ ಮುಂದಿದೆ. ಎರಡು ಪಕ್ಷಗಳ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಜಿ.ಪಂ.ಸದಸ್ಯ ಬಿ.ಯೋಗೇಶ್‍ಬಾಬು, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಮುಖಂಡರುಗಳಾದ ಎತ್ತನಟ್ಟಿಗೌಡ, ಜಿ.ಬಿ.ಶೇಖರ್, ಮೀನಾಕ್ಷಿ ನಂದೀಶ್, ತಾಲೂಕು ಅಧ್ಯಕ್ಷ ತಿಮ್ಮಣ್ಣ, ಸುನೀಲ್‍ಕುಮಾರ್, ಎಂ.ಕೆ.ಹಟ್ಟಿ ವೀರಣ್ಣ, ಜೆಡಿಎಸ್.ಜಿಲ್ಲಾ ವಕ್ತಾರ ಡಿ.ಗೋಪಾಲಸ್ವಾಮಿನಾಯಕ, ಬಿ.ಹೆಚ್.ಮಂಜುನಾಥ್, ನಂದೀಶ್, ಶಫಿ, ಶಿವಪ್ರಸಾದ್‍ಗೌಡ, ಗೀತ, ರಾಧಮ್ಮ, ಗುರುಸಿದ್ದಣ್ಣ, ಸಿ.ಟಿ.ಕೃಷ್ಣಮೂರ್ತಿ, ಕಾಶಮಯ್ಯ, ಶ್ರೀನಿವಾಸ್ ಗದ್ದಿಗೆ, ಗುರುಸಿದ್ದಣ್ಣ ವೇದಿಕೆಯಲ್ಲಿದ್ದರು.
ಯುವ ವಕೀಲರುಗಳಾದ ಪ್ರತಾಪ್‍ಜೋಗಿ, ಅಶೋಕ್‍ಬೆಳಗಟ್ಟ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಸೇರಿದಂತೆ ಜೆಡಿಎಸ್.ನ ನೂರಾರು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.