ಯಡಿಯೂರಪ್ಪ ರನ್ನು ಅಧಿಕಾರದಿಂದ ಕೆಳಗಿಳಿಸಲು ಮೋದಿ ತಂತ್ರ ಮಾಡುತ್ತಿದ್ದಾರೆ :ಸಿದ್ದರಾಮಯ್ಯ

ಬೆಂಗಳೂರು

      ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತಂದು ಅಧಿಕಾರದಿಂದ ಇಳಿಸುವ ಸಲುವಾಗಿಯೇ ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ಕಟ್ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

     ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಆಗಿರುವ ನಷ್ಟ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ.ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವ ರ ಪ್ರಕಾರ ಇದು ಐವತ್ತು ಸಾವಿರ ಕೋಟಿ ರೂಪಾಯಿ.ಆದರೆ ಇವರು ಕೇಂದ್ರ ಸರ್ಕಾರಕ್ಕೆ ಕೇಳಿರುವ ಹಣದ ಪ್ರಮಾಣ ಮೂವತ್ತು ಸಾವಿರ ಕೋಟಿ ರೂಪಾಯಿ ಎಂದರು.

     ಆದರೆ ರಾಜ್ಯ ಸರ್ಕಾರ ಮೂವತ್ತು ಸಾವಿರ ಕೋಟಿ ರೂಪಾಯಿ ಕೇಳಿದ್ದರೂ ಕೇಂದ್ರ ಸರ್ಕಾರ ನೀಡಿರುವುದು ಕೇವಲ ಸಾವಿರದಿನ್ನೂರು ಕೋಟಿ ರೂಪಾಯಿ.ಇದು ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತಂದು ಅಧಿಕಾರದಿಂದ ಇಳಿಸುವ ಸನ್ನಾಹ ಎಂದು ಶಂಕೆ ವ್ಯಕ್ತ ಪಡಿಸಿದರು.

     ಈಗಾಗಲೇ ಬಿಜೆಪಿಯಲ್ಲಿರುವ ಒಂದು ಗುಂಪು ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ತೆಗೆಯಲು ವ್ಯವಸ್ಥಿತ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು,ಇದರ ನಡುವೆ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ ಎಂದರು.
ಇಷ್ಟು ಪ್ರವಾಹ ಬಂದಾಗ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವಿನ ಹಸ್ತ ಚಾಚಬಹುದಿತ್ತು.ಮನಮೋಹನ್‍ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಂತಹದೇ ಸಂದರ್ಭದಲ್ಲಿ ಎರಡು ದಿನಗಳ ಒಳಗೆ ವೈಮಾನಿಕ ಸಮೀಕ್ಷೆ ಮಾಡಿ ಪರಿಹಾರ ಮಂಜೂರು ಮಾಡಿದ್ದರು.

     ಆದರೆ ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯವನ್ನು ನಿರ್ಲಕ್ಷಿಸಿದರು.ಇಷ್ಟೆಲ್ಲದರ ನಡುವೆ ಚಂದ್ರಯಾನ ನೋಡಲು ಇಸ್ರೋಗೆ ಬಂದರು.ಆದರೆ ಅದು ಪೇಲ್ ಆಗಿ ಬಿಡ್ತು ಎಂದು ಹೇಳಿದರು.ಪ್ರಧಾನಿಯವರು ತಮ್ಮ ಭೇಟಿಗೆ ರಾಜ್ಯದ ಮಂತ್ರಿಗಳಿಗೂ ಅವಕಾಶ ನೀಡುತ್ತಿಲ್ಲ.ವಿಪಕ್ಷಗಳ ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು,ಪ್ರವಾಹದ ಬಗ್ಗೆ ಸೌಜನ್ಯಕ್ಕಾದರೂ ಮಾತನಾಡಬಹುದಿತ್ತು.ಆದರೆ ಅವರು ಆ ಕೆಲಸ ಮಾಡಲಿಲ್ಲ ಎಂದರು.

      ಚುನಾವಣೆ ಸಂದರ್ಭದಲ್ಲಿ ಅವರು ಏನೇನು ಆಶ್ವಾಸನೆ ಕೊಟ್ಟಿದ್ದರೋ ನೆನಪು ಮಾಡಿಕೊಳ್ಳಿ ಎಂದ ಅವರು,2018 ರಲ್ಲೇ ಲಘು ಯುದ್ಧ ವಿಮಾನ ಹಾರಾಟ ನಡೆಸಲಿದೆ ಎಂದಿದ್ದರು.ಆದರೆ ಅವರ ಹಾರಾಟ ಹೆಚ್ಚಾಯಿತೇ ಹೊರತು ಲಘುಯುದ್ಧ ವಿಮಾನದ ಹಾರಾಟ ನಡೆಯಲಿಲ್ಲ.

     ಕೇಂದ್ರದಲ್ಲಿ,ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ ಎಂದಿದ್ದರು.ಆದರೆ ಇದುವರೆಗೆ ಬಾಗಿಲು ತೆರೆಯುವುದಿರಲಿ,ನರೇಂದ್ರಮೋದಿ ಮನೆಬಾಗಿಲೇ ತೆರೆಯಲಿಲ್ಲ.

    ಇದೇ ಕಾರಣಕ್ಕಾಗಿ ನಾನು ಯಡಿಯೂರಪ್ಪ ಅವರನ್ನು ದುರ್ಬಲ ಮುಖ್ಯಮಂತ್ರಿ ಎಂದು ಕರೆಯುವುದು.ನೆನ್ನೆ ತುಮಕೂರಿಗೆ ಪ್ರಧಾನಿಯವರು ಬಂದ ಸಂದರ್ಭದಲ್ಲಿ ಅವರು ಏನೇನು ನೆರವು ಕೋರಿದರು.ಆದರೆ ಪ್ರಧಾನಿ ಆ ಬಗ್ಗೆ ರೆಸ್ಪಾಂಡೇ ಮಾಡಲಿಲ್ಲ.

     ಕರ್ನಾಟಕಕ್ಕೆ ಬಂದವರು ರಾಜ್ಯದ ಸಂಕಷ್ಟಗಳ ಪರಿಹಾರದ ಬಗ್ಗೆ ಮಾತನಾಡಬೇಕಿತ್ತು.ಆದರೆ ತುಮಕೂರಿನಲ್ಲಿ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳ ಮುಂದೆ ಪಾಕಿಸ್ತಾನದ ಬಗ್ಗೆ ಮಾತನಾಡಿದರು.ಪ್ರಧಾನಿಯಾಗಿ ಇವರು ಮಾತನಾಡಬೇಕಾದ ವಿಷಯವೇನು?ಮಾತನಾಡಿದ್ದೇನು?ಎಂದು ವ್ಯಂಗ್ಯ ಆಡಿದರು.ಸಣ್ಣ ಪುಟ್ಟ ವಿಷಯಗಳಿಗೂ ಪ್ರಧಾನಮಂತ್ರಿಯವರು ಟ್ವಿಟ್ ಮಾಡ್ತಾರೆ.ಆದರೆ ರಾಜ್ಯದಲ್ಲಿನ ಅತಿವೃಷ್ಟಿ ಪೀಡಿತರ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಸೌಜನ್ಯಕ್ಕೂ ಟ್ವಿಟ್ ಮಾಡಲಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap