ರಾಜೀವ್ ಗಾಂಧಿ ಕುರಿತು ಮೋದಿ ಹೇಳಿಕೆ ಇನ್ನೂ ಪರಿಶೀಲನೆಯಲ್ಲಿದೆ : ಚುನಾವಣಾ ಆಯೋಗ

ನವದೆಹಲಿ

     ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಭ್ರಷ್ಟ ಎಂದು ನಿಂದಿಸಿದ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ ಎಂಬ  ವದಂತಿಗಳನ್ನು ತಳ್ಳಿ ಹಾಕಿರುವ ಆಯೋಗ, ಪ್ರಕರಣ ಇನ್ನೂ ಪರಿಶೀಲನಾ ಹಂತದಲ್ಲಿದೆ ಎಂದು  ಸ್ಪಷ್ಟನೆ ನೀಡಿದೆ.

      ರಾಜೀವ್ ಗಾಂಧಿ ಅವರನ್ನು ನಂ.1 ಭ್ರಷ್ಟಾಚಾರಿ ಎಂದು ಕರೆದ  ಮೋದಿ ವಿರುದ್ಧ ಕಾಂಗ್ರೆಸ್ ದಾಖಲಿಸಿದ್ದ ದೂರು ಪರಿಶೀಲಿಸಿದ ಚುನಾವಣಾ ಆಯೋಗ ಮೋದಿ  ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿದ್ದವು. ಆದರೆ,  ಈಗ ಚುನಾವಣಾ ಆಯೋಗ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರಕರಣ ಪರಿಶೀಲನಾ ಹಂತದಲ್ಲಿದೆ.  ತೀರ್ಪು ಇನ್ನೂ ಹೊರಬಿದ್ದಿಲ್ಲ ಎಂದಿದ್ದಾರೆ.

        ಉತ್ತರಪ್ರದೇಶದ ಪ್ರತಾಪ್ ಗಡದಲ್ಲಿ  ಮೇ 6ರಂದು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಅವರು ಅವಹೇಳನಕಾರಿ  ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ದೂರು ಸಲ್ಲಿಸಿತ್ತು. ಈ ಸಂಬಂಧ  ಚುನಾವಣಾ ಆಯೋಗ, ಉತ್ತರಪ್ರದೇಶದ ಮುಖ್ಯ ಚುನಾವಣಾಧಿಕಾರಿಗೆ ಭಾಷಣದ ಪ್ರತಿಯನ್ನು  ನೀಡುವಂತೆ ಸೂಚಿಸಿತ್ತು. ಈಗ ಆ ಪ್ರತಿ ಕೈಸೇರಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ  ಎಂದು ಚುನಾವಣಾ ಅಯೋಗದ ವಕ್ತಾರರು ತಿಳಿಸಿದ್ದಾರೆ.

        ಈ ವಿಷಯಕ್ಕೆ  ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಮತ್ತೊಂದು ಆನ್ ಲೈನ್ ಅರ್ಜಿಯನ್ನು  ಇತ್ಯರ್ಥಗೊಳಿಸಲಾಗಿದ್ದು, ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಉತ್ತರಪ್ರದೇಶದ  ಸ್ಥಳೀಯ ಚುನಾವಣಾಧಿಕಾರಿಗಳು ನೀಡಿದ್ದ ಹೇಳಿಕೆಯ ಆಧಾರದ ಮೇಲೆ ಮಾಧ್ಯಮಗಳಲ್ಲಿ  ಮೋದಿಯವರೆಗೆ ಕೇಂದ್ರ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ ಎಂಬ ವರದಿ  ಪ್ರಸಾರವಾಗಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು.

       ಮೋದಿ ಅವರು  ಸಂಸ್ಕೃತಿರಹಿತ, ಕಾನೂನುಬಾಹಿರ, ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾದ ಹಾಗೂ ಸತ್ಯಕ್ಕೆ  ದೂರವಾದ ಹೇಳಿಕೆಗಳನ್ನು ನೀಡುತ್ತಿದ್ದು, ತಕ್ಷಣ ಅವರನ್ನು ಪ್ರಚಾರದಲ್ಲಿ  ಪಾಲ್ಗೊಳ್ಳದಂತೆ ನಿರ್ಬಂಧ ಹೇರಬೇಕು ಎಂದು  ಕಾಂಗ್ರೆಸ್ ಆಯೋಗಕ್ಕೆ ಸೋಮವಾರ  ಮನವಿ  ಮಾಡಿತ್ತು.

       ಪ್ರತಾಪ್ ಗಡದಲ್ಲಿ ಮೋದಿ, ರಾಹುಲ್  ಗಾಂಧಿಯನ್ನುದ್ದೇಶಿಸಿ, ‘ನಿಮ್ಮ ತಂದೆ, ಅವರ ಆಪ್ತ ಬಳಗದಿಂದ ಮಿಸ್ಟರ್ ಕ್ಲೀನ್ ಎಂದು  ಕರೆಯಲ್ಪಡುತ್ತಿದ್ದರು. ಆದರೆ, ತಮ್ಮ ಜೀವನದ ಕೊನೆಯಲ್ಲಿ ಭ್ರಷ್ಟಾಚಾರಿ ನಂ-1 ಎಂಬ  ಹಣೆಪಟ್ಟಿ ಪಡೆದುಕೊಂಡಿದ್ದರು’ ಎಂದು ಟೀಕಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link