ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ಶಾಶ್ವತ ಬರಗಾಲದ ಹಣೆಪಟ್ಟಿ ಹೊತ್ತಿದ್ದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ನಾನು ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಈ ಭಾಗದ ಸಮಸ್ತ ಜನರಿಗೆ ಕುಡಿಯುವ ನೀರು ತರುವ ಭರವಸೆಯನ್ನು ಎಲ್ಲರ ಸಹಕಾರದಿಂದ ಈಡೇರಿಸಿದ್ದೇನೆ.
ಮುಂಬರುವ ದಿನಗಳಲ್ಲೂ ಸಹ ಈ ಭಾಗದ ಯಾರೂ ಸಹ ನೀರಿನ ಸೌಲಭ್ಯದಿಂದ ವಂಚಿತರಾಗುದಂತೆ ಸರ್ಕಾರದಿಂದಲೇ ಶಾಶ್ವತ ಆದೇಶವನ್ನು ಹೊರಡಿಸುವ ಭರವಸೆಯನ್ನು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಬಿ.ಶ್ರೀರಾಮುಲು ನೀಡಿದರು.
ಅವರು, ಶನಿವಾರ ತಾಲ್ಲೂಕಿನ ಗಡಿಭಾಗದ ಗುಡಿಹಳ್ಳಿ ವೇದಾವತಿ ನದಿಪಾತ್ರದಲ್ಲಿ ವಿವಿ ಸಾಗರದ ನೀರು ಹರಿದುಬಂದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಸೇರು ಗಂಗಾಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವೇದಾವತಿ ಈಗಷ್ಟೇ ನಿಮ್ಮ ಗ್ರಾಮವನ್ನು ತಲುಪಿದ್ದು ಮುಂದಿನ ದಿನಗಳಲ್ಲಿ ಈ ನೀರು ಶಾಶ್ವತವಾಗಿ ಇಲ್ಲಿ ಹರಿಯುವಂತೆ ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಲಕ್ಷಾಂತರ ರೈತರ ಹಲವಾರು ದಶಕಗಳ ಕನಸು ಇಂದು ನನಸಾಗುತ್ತಿದೆ.
ಈ ಭಾಗದ ಎಲ್ಲಾ ವರ್ಗದ ಜನರನ್ನು ಸಂತೋಷಹಾಗೂ ನೆಮ್ಮದಿಯನ್ನು ಕಾಣುವ ಸುದಿನ ಇದಾಗಿದೆ. ಇಂತಹ ಒಂದು ಸುವರ್ಣ ಅವಕಾಶವನ್ನು ನೀಡಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳೆಯವರಿಗೆ ಈ ಭಾಗದ ಸಮಸ್ತ ಜನರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಕ್ಷೇತ್ರದ ಶಾಸಕನಾಗಿ ಎರಡು ವರ್ಷ ಕಳೆದಿದ್ದು, ಸಚಿವನಾಗಿ ಇನ್ನೂ ಒಂದು ವರ್ಷವಾಗದಿದ್ದರೂ ಒಂದು ಮಹಾನ್ ಸಾಧನೆಯನ್ನು ಮಾಡುವ ಅವಕಾಶವನ್ನು ಈ ಭಾಗದ ಮತದಾರರು ನೀಡಿದ್ದೀರ. ನಿಮಗೆ ನೀಡಿದ ಎಲ್ಲಾ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಯೋನ್ಮುಖವಾಗಿದ್ದೇನೆ. ಕ್ಷೇತ್ರದ 78 ಕೆರೆಗಳನ್ನು ತುಂಬಿಸುವ 614 ಕೋಟಿ ಯೋಜನೆ ಹಣ ಮಂಜೂರಾಗಿದ್ದು, 10 ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುವೆ. ತುಂಗಾ ಹಿನ್ನೀರು ಯೋಜನೆ 606 ಕಿ.ಮೀ ಪೈಪ್ ಕಾಮಗಾರಿ ಪ್ರಗತಿಯಲ್ಲಿದ್ದು, 450 ಪೂರ್ಣಗೊಂಡು 156 ಬಾಕಿಇದೆ. ಇನ್ನೂ 3 ತಿಂಗಳೊಳಗೆ ಸಂರ್ಪೂಣವಾಗಲಿದೆ. ವಿವಿ ಸಾಗರದಿಂದ ವೇದಾವತಿಗೆ ನೀರು ಹರಿಸುವ ಭರವಸೆಯನ್ನು ಸಹ ಈಡೇರಿದೆ ಎಂದರು. ತಪ್ಪಗೊಂಡನಹಳ್ಳಿ ಮತ್ತು ಗುಡಿಹಳ್ಳಿ ಬಳಿ ಬಿಡ್ಜ್ ಮತ್ತು ಬ್ಯಾರೇಜ್ ನಿರ್ಮಿಸಿಕೊಡುವ ಭರವಸೆ ನೀಡಿದರು.
ರೈತ ಸಂಘದ ಕೆ.ಪಿ.ಭೂತಯ್ಯ, ಜಯಪಾಲಯ್ಯ, ಆರ್.ಹನುಮಂತರಾಯ, ಈ.ರಾಮರೆಡ್ಡಿ, ಕೆ.ರಂಗಸ್ವಾಮಿ, ಸಚಿವ ಶ್ರೀರಾಮುಲುರವರನ್ನು ಆಧುನಿಕ ಭಗೀರಥವೆಂದು ಬಣ್ಣಿಸಿದರಲ್ಲದೆ, ಮೊಳಕಾಲ್ಮೂರು ಕ್ಷೇತ್ರದ ಇತಿಹಾಸದಲ್ಲಿ ಹಲವಾರು ಶಾಸಕರು ಆಯ್ಕೆಯಾದರೂ ನೀರು ತರಲು ಸಾಧ್ಯವಾಗಲಿಲ್ಲ ಆದರೆ ಇಂದು ಆ ಆಸೆ ಕೈಗೂಡಿದೆ.
ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ರಾಘವನ್, ಇಇ ಚಂದ್ರಹಾಸ್, ಎಂ.ಸತೀಶ್, ಎಇಇ ಮಹೇಂದ್ರ, ಸಹಾಯ ಇಂಜಿನಿಯರ್ ಪಿರೋಜ್, ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ಪೌರಾಯುಕ್ತ ಪಿ.ಪಾಲಯ್ಯ, ಇಒ ಶ್ರೀಧರ್ ಐ.ಬಾರಿಕೇರ್, ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮುಂತಾದವರು ಉಪಸ್ಥಿತರಿದ್ದರು. .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








