ಬೆಂಗಳೂರು
ಒಂದು ಲಕ್ಷ ಕೊಟ್ಟರೆ ನಿಮಗೆ ಎರಡು ಲಕ್ಷ ಮಾಡಿಕೊಡುತ್ತೇವೆ ಎಂದು ಹಣ ದ್ವಿಗುಣ ಮಾಡಿಕೊಡುತ್ತೇವೆ ಎಂದು ನಂಬಿಸಿ ವಂಚನೆ ನಡೆಸುತ್ತಿದ್ದ ಖತರ್ನಾಕ್ ಮನಿ ಡಬ್ಲಿಂಗ್ ಗ್ಯಾಂಗನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಣ ದ್ವಿಗುಣ ಮಾಡುತ್ತಿದ್ದ ಮುರಗಮಲ್ಲ ಗ್ರಾಮದ ಕಾಂತಮ್ಮ, ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ದೇವರಕೊಂಡದ ಕೇಶವ, ಚಂದ್ರಶೇಖರ್, ಇಡಗುಟ್ಟ ಕೇಶವ ಮತ್ತು ಶಿಡ್ಲಘಟ್ಟದ ಅಬ್ದುಲ್ ರೆಹಮಾನ್‍ನನ್ನು ಬಂಧಿಸಿ 1 ಲಕ್ಷ 75 ಸಾವಿರ ನಗದನ್ನು ಜಪ್ತಿ ಮಾಡಲಾಗಿದೆ.ಮುರಗಮಲ್ಲ ಗ್ರಾಮದ ಭಾರ್ಗವೇಂದ್ರ ಎಂಬವರಿಗೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ 5 ಲಕ್ಷದ 50 ಸಾವಿರ ಹಣ ತೆಗೆದುಕೊಂಡು ಪಂಗನಾಮ ಹಾಕಿದ್ದರು.
ಹೀಗಾಗಿ ವಂಚನೆಗೊಳಗಾದ ಭಾರ್ಗವೇಂದ್ರ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ದೂರಿನ ಅನ್ವಯ ಕಾರ್ಯಾಚರಣೆಗಿಳಿದ ಪೊಲೀಸರು ಐವರು ಮನಿ ಡಬ್ಲಿಂಗ್ ದಂಧೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಅವರು ಅಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಭಾಗಗಳಲ್ಲಿ ಇದೇ ರೀತಿಯ ಮನಿ ಡಬ್ಲಿಂಗ್ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.